ಟೆಹ್ರಾನ್: ಅಮೆರಿಕ ಪರ ಗೂಢಚಾರಿಕೆ ನಡೆಸಿದ ಆರೋಪ ಎದುರಿಸುತ್ತಿದ್ದ ಖ್ಯಾತ ಪರಮಾಣು ವಿಜ್ಞಾನಿಯನ್ನು ಗಲ್ಲಿಗೇರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ 2010ರಲ್ಲಿ ಇರಾನ್ ನ ರಹಸ್ಯ ಪರಮಾಣು ಯೋಜನೆಗಳನ್ನು ಬಹಿರಂಗಪಡಿಸಿ ವಿಶ್ವಾದ್ಯಂತ ಹೀರೋ ಆಗಿದ್ದ ಖ್ಯಾತ ಪರಮಾಣು ವಿಜ್ಞಾನಿ ಶಾಹ್ರಮ್ ಅಮಿರಿ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್ ಸರ್ಕಾರಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ವಿಜ್ಞಾನಿ ಶಾಹ್ರಮ್ ಅಮಿರಿ ಅವರು, ಅಮೆರಿಕ ಪರ ಇರಾನ್ ವಿರುದ್ಧವಾಗಿ ಗೂಢಚಾರಿಕೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಕೊನೆಯ ಬಾರಿಗೆ 2010ರಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಶಾಹ್ರಮ್ ಅಮಿರಿ ಅವರು, ಅಂದು ಸ್ವತಃ ಇರಾನ್ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಆ ಕಾರ್ಯಕ್ರಮದ ಬಳಿಕ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಇನ್ನು ಯುರೇನಿಯಂ ಪುಷ್ಟೀಕರಣ ಯೋಜನೆಗೆ ಸಂಬಂಧಿಸಿದಂತೆ ಇರಾನ್ ಸರ್ಕಾರದ ಮಹತ್ವದ ಮಾಹಿತಿಗಳನ್ನು ಅಮೆರಿಕ ದೇಶದೊಂದಿಗೆ ಅಕ್ರಮವಾಗಿ ಹಂಚಿಕೊಂಡ ಆರೋಪ ಶಾಹ್ರಮ್ ಅಮಿರಿ ಅವರ ಮೇಲಿತ್ತು. ಅಲ್ಲದೆ ಈ ಕೃತ್ಯಕ್ಕಾಗಿ ಅವರು ಅಮೆರಿಕ ಹಾಗೂ ದುಬೈ ದೊರೆಗಳಿಂದ ಅಪಾರ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಆರೋಪ ಕೂಡ ಇವರ ಮೇಲಿತ್ತು.
ಇದೀಗ ಶಾಹ್ರಮ್ ಅಮಿರಿ ಅವರನ್ನು ಗಲ್ಲಿಗೇರಿಸುವ ಮೂಲಕ ಇರಾನ್ ಸರ್ಕಾರ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇರಾನ್ ಸರ್ಕಾರ ಶಾಹ್ರಮ್ ಅಮಿರಿ ಅವರು ದೇಶದ ಪ್ರಮುಖ ಪರಮಾಣು ವಿಜ್ಞಾನಿಯಾಗಿದ್ದರು. ಇದೇ ಕಾರಣಕ್ಕೆ ಅವರನ್ನು ದೇಶದ ಅತ್ಯಂತ ಖಾಸಗಿ ರಕ್ಷಣಾ ಮಾಹಿತಿಗಳ ಹಂಚಿಕೆಗೆ ಅವರಿಗೆ ಅಧಿಕಾರ ನೀಡಲಾಗಿತ್ತು. ಆದರೆ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ಶತ್ರು ರಾಷ್ಟ್ರ ಅಮೆರಿಕದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತನ್ನ ಆಕ್ರೋಶ ವ್ಯಕ್ತಪಡಿಸಿದೆ.
Comments are closed.