ಅಂತರಾಷ್ಟ್ರೀಯ

ಟರ್ಕಿ ಸೇನಾ ದಂಗೆಗೆ 104 ಸೈನಿಕರು ಸೇರಿ 265 ಮಂದಿ ಬಲಿ

Pinterest LinkedIn Tumblr

2

ಅಂಕಾರಾ: ಟರ್ಕಿಯಲ್ಲಿ ಸೇನಾ ಪಡೆಗಳು ಕ್ಷಿಪ್ರಕ್ರಾಂತಿ ನಡೆಸಿದ ಪರಿಣಾಮ ಉಂಟಾದ ಘರ್ಷಣೆಯಲ್ಲಿ ಇದುವರೆಗೆ 104 ಬಂಡಾಯ ಸೈನಿಕರು ಸೇರಿದಂತೆ ಸುಮಾರು 265 ಮಂದಿ ಮೃತಪಟ್ಟಿದ್ದಾರೆ.

ಮೃತ ಪಟ್ಟವರಲ್ಲಿ ಹೆಚ್ಚಿನ ಸೈನಿಕರೇ ಆಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಸೈನಿಕರು ಅಂಕರದಲ್ಲಿರುವ ಸಂಸತ್ ಭವನದ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ, ಜತೆಗೆ ಸಂಸತ್ ಭವನದ ಬಳಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಸಂಸತ್ ಭವನದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಹಲವು ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಸ್ತಾಂಬುಲ್ನ ಬಾಸ್ಪೋರಸ್ ಸೇತುವೆಯನ್ನು ಸೇನೆ ವಶಕ್ಕೆ ಪಡೆದಿದ್ದು, ಈ ಪ್ರದೇಶದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಟರ್ಕಿ ಅಧ್ಯಕ್ಷರ ಅರಮನೆಯ ಬಳಿ ಸಹ ಸೇನಾ ಪಡೆಯ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿವೆ.

ದಂಗೆಯನ್ನು ನಿಯಂತ್ರಿಸುವಲ್ಲಿ ಟರ್ಕಿ ಸರ್ಕಾರ ಮತ್ತು ಟರ್ಕಿ ಜನತೆ ಯಶಸ್ವಿಯಾಗಿದ್ದು, ಸೇನೆಯ ಸಣ್ಣ ತುಕಡಿಯೊಂದು ದಂಗೆ ಎದ್ದಿದೆ. ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಟರ್ಕಿಯ ಜನರು ಸರ್ಕಾರಕ್ಕೆ ಬೆಂಬಲ ಸೂಚಿಸಬೇಕು ಎಂದು ಟರ್ಕಿ ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ಡೋಗನ್ ಅವರು ಕರೆ ನೀಡಿದ್ದಾರೆ. ಅಲ್ಲದೆ ಜನರು ರಸ್ತೆಗಿಳಿದು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರತಿಭಟನೆ ನಡೆಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದು ಪ್ರಮುಖ ಸ್ಥಳಗಳಲ್ಲಿ ಜಮೆಯಾಗಿ ಸೈನಿಕರನ್ನು ಹಿಮ್ಮೆಟ್ಟಿಸಬೇಕು ಎಂದು ರಿಸೆಪ್ ಹೇಳಿದ್ದಾರೆ.

Comments are closed.