ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಪೂರ್ವಭಾವಿ ಚುನಾವಣೆ: ರಿಪಬ್ಲಿಕನ್‌ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌

Pinterest LinkedIn Tumblr

Republican presidential candidate Donald Trump speaks during a press conference with the New York Veteran Police Association in Staten Island, New York on April 17,2016. / AFP PHOTO / KENA BETANCUR

ಇಂಡಿಯಾನಪೊಲಿಸ್‌ (ಪಿಟಿಐ): ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ಇಂಡಿಯಾನದಲ್ಲಿ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ನಾಮಕರಣಗೊಳ್ಳುವುದು ನಿಚ್ಚಳವಾಗಿದೆ.
ಇಂಡಿಯಾನದಲ್ಲಿ ನಡೆದ ಚುನಾವಣೆಯಲ್ಲಿ ಟ್ರಂಪ್‌ ಸ್ಪಷ್ಟ ಬಹುಮತ ಗಳಿಸಿದ ಪರಿಣಾಮ ಅವರ ಸಮೀಪದ ಪ್ರತಿಸ್ಪರ್ಧಿ ಟೇಡ್‌ ಕ್ರೂಜ್‌ ಅವರು ಸ್ಪರ್ಧೆಯನ್ನು ಕೈಬಿಡಬೇಕಾಯಿತು. ಅಲ್ಲದೆ, 68ರ ವಿವಾದಿತ ಕೋಟ್ಯಧಿಪತಿ (ಟ್ರಂಪ್‌) ಈಗ ಡೆಮಾಕ್ರಟಿಕ್‌ ಪಕ್ಷದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್‌ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.
ಇನ್ನು ಅವಶ್ಯವಿರುವ 190 ಮತಗಳನ್ನು ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳುವ ವಿಶ್ವಾಸ ಟ್ರಂಪ್‌ ಅವರಿಗಿದೆ. ಕ್ರೂಜ್‌ ಅವರು ಸ್ಪರ್ಧೆ ಕೈಬಿಟ್ಟಿರುವ ಕಾರಣ ಈ ಮತಗಳು ಟ್ರಂಪ್‌ ಪಾಲಾಗಲಿದೆ ಎಂಬುದು ಲೆಕ್ಕಾಚಾರ.
ಸದ್ಯ, ಓಹಿಯೊ ಗವರ್ನರ್‌ ಜಾನ್‌ ಕೆಸಿಶ್‌ ಅವರ ಪೈಪೋಟಿಯನ್ನು ಟ್ರಂಪ್‌ ಎದುರಿಸಬೇಕಾಗಿದೆ. ಕೊನೆಯ ಹಂತದ ಮತದಾನ ಓಹಿಯೊ ರಾಜ್ಯದಲ್ಲಿ ನಡೆಯಲಿದೆ. ಅವರು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಇಂಡಿಯಾನದಲ್ಲಿ ಟ್ರಂಪ್‌ ಗೆಲುವು ಸಾಧಿಸುತ್ತಿದ್ದಂತೆ ರಿಪಬ್ಲಿಕನ್‌ ನ್ಯಾಷನಲ್‌ ಕಮಿಟಿ (ಆರ್ಎನ್‌ಸಿ) ಅಧ್ಯಕ್ಷ ರೀನ್ಸ್‌ ಪ್ರೀಬಸ್‌ ಅವರು ಟ್ರಂಪ್‌ ಅವರ ಪರ ಪ್ರಚಾರ ಸಭೆಗಳನ್ನು ನಡೆಸುವಂತೆ ಪಕ್ಷಕ್ಕೆ ಕರೆ ನೀಡಿದರು.
ಹಿಲರಿಗೆ ಟೀಕೆ: ಹಿಲರಿ ಕ್ಲಿಂಟನ್‌ ಅವರು ಇಂಡಿಯಾನದಲ್ಲಿ ಬರ್ನಿ ಸ್ಯಾಂಡರ್ಸ್‌ ಅವರಿಂದ ದಯನೀಯವಾಗಿ ಸೋತಿದ್ದರೂ ಒಟ್ಟಾರೆ ಫಲಿತಾಂಶ ಅವರ ಸ್ಪರ್ಧೆಗೆ ಹಿನ್ನಡೆ ತರುವಂತಿಲ್ಲ.
‘ಹಿಲರಿ ಅವರೊಬ್ಬ ದುರ್ಬಲ ಅಧ್ಯಕ್ಷರಾಗುತ್ತಾರೆ. ಅವರಿಗೆ ವ್ಯಾಪಾರ ಅರ್ಥವಾಗುವುದಿಲ್ಲ’ ಎಂದು ಟೀಕಿಸಿದ ಟ್ರಂಪ್, ಸ್ಪರ್ಧೆಯಿಂದ ಹಿಂದೆಸರಿದ ಕ್ರೂಜ್‌ ನಿರ್ಧಾರವನ್ನು ಶ್ಲಾಘಿಸಿದರು.
ಹೋರಾಟ ನಿಲ್ಲದು–ಕ್ರೂಜ್‌: ‘ನಮ್ಮ ದಾರಿ ಮುಕ್ತಾಯವಾದಂತೆ ಕಾಣುತ್ತದೆ. ಭಾರವಾದ ಹೃದಯದಿಂದ, ದೇಶದ ಭವಿಷ್ಯದ ಬಗ್ಗೆ ಅಗಾಧವಾದ ಮಹತ್ವಾಕಾಂಕ್ಷೆಯೊಂದಿಗೆ ನಮ್ಮ ಚುನಾವಣಾ ಪ್ರಚಾರವನ್ನು ಕೈಬಿಡುತ್ತಿದ್ದೇನೆ. ಆದರೆ ಸ್ವಾತಂತ್ರ್ಯಕ್ಕಾಗಿನ ಹೋರಾಟ ಮಾತ್ರ ನಿಲ್ಲದು. ಚಳವಳಿ ಮುಂದುವರಿಯುತ್ತದೆ’ ಎಂದು ಟೇಡ್ ಕ್ರೂಜ್‌ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು.
ಟ್ರಂಪ್‌ ಪರ ಜಿಂದಾಲ್‌!
ವಾಷಿಂಗ್ಟನ್‌: ಒಂದು ಕಾಲದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಕಠಿಣವಾಗಿ ಟೀಕಿಸುತ್ತಿದ್ದ ಮತ್ತು ಅಧ್ಯಕ್ಷೀಯ ಸ್ಥಾನಾಕಾಂಕ್ಷಿಯೂ ಆಗಿದ್ದ ಭಾರತೀಯ ಸಂಜಾತ ಬಾಬ್ಬಿ ಜಿಂದಾಲ್‌ ಅವರು ಟ್ರಂಪ್‌ ಅವರಿಗೆ ಮತ ಹಾಕುವುದಾಗಿ ಹೇಳಿದ್ದಾರೆ.
‘ಹಿಲರಿಗಿಂತ ಟ್ರಂಪ್‌ ಉತ್ತಮ ಎಂದು ಭಾವಿಸುತ್ತೇನೆ. ವೈಯಕ್ತಿಕವಾಗಿ ನಾನು ಟ್ರಂಪ್‌ಗೆ ಮತ ಚಲಾಯಿಸುತ್ತೇನೆ’ ಎಂದು ಜಿಂದಾಲ್‌ ಅವರು ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
ಲೂಸಿಯಾನಾದ ಮಾಜಿ ಗವರ್ನರ್‌ ಆಗಿರುವ ಜಿಂದಾಲ್ ಅವರು ಕೆಲ ತಿಂಗಳ ಹಿಂದಿನವರೆಗೂ ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದರು. ಕಳೆದ ವರ್ಷ ನ್ಯಾಶನಲ್‌ ಪ್ರೆಸ್‌ ಕ್ಲಬ್‌ನಲ್ಲಿ ಟ್ರಂಪ್‌ ವಿರುದ್ಧ ಟೀಕೆ ಶುರು ಮಾಡಿದ ಬೆನ್ನಲ್ಲೇ ಜಿಂದಾಲ್‌ ಜನಪ್ರಿಯತೆ ಕುಸಿದಿತ್ತು.

Write A Comment