ಅಂತರಾಷ್ಟ್ರೀಯ

ಭಾರತದಲ್ಲೇ ಉಂಟು ಮಂಗಳ ಗ್ರಹದ ಮೇಲಿನ ‘ಪರಿಸರ’!

Pinterest LinkedIn Tumblr

mars-india-web-1ಕೋಲ್ಕತ: ಅಂತರ್ ಗ್ರಹ ಅನುಭವಕ್ಕಾಗಿ ಮಂಗಳ ಗ್ರಹಕ್ಕೆ ತೆರಳಲು ಲಕ್ಷಾಂತರ ಡಾಲರ್ ಮೌಲ್ಯದ ಟಿಕೆಟ್​ಗಾಗಿ ಏತಕ್ಕೆ ಕಾಯುತ್ತೀರಿ? ಅದೂ ಭಾರತದಲ್ಲೇ ಅಂತಹ ಅನುಭವ ಪಡೆಯಲು ಸಾಧ್ಯವಿರುವಾಗ?

ಹೌದು, ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಕೆಂಪುಗ್ರಹ ಮಂಗಳನ ಮೇಲಿನ ಅನುಭವ ಇಲ್ಲೇ, ಭಾರತದ ಪಶ್ಚಿಮ ಭಾಗದ ಗುಜರಾತ್​ನಲ್ಲೇ ಸಾಧ್ಯ. ಕೆಂಪುಗ್ರಹದ ಮೇಲ್ಮೈಯಲ್ಲಿ ಇರುವಂತಹುದೇ ಶಿಲಾ ಮೇಲ್ಮೈ ಗುಜರಾತ್​ನಲ್ಲೂ ಇದೆ ಎಂದು ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ.

ಗುಜರಾತಿನ ಭುಜ್​ನಿಂದ 85 ಕಿಮೀ ವಾಯವ್ಯದ ಮತಾನುಮಧ್ ಪ್ರದೇಶದಲ್ಲಿ ಕೆಂಪು ಗ್ರಹ ಮಂಗಳದಲ್ಲಿ ಇರುವಂತಹ ಅಪರೂಪದ ಜಾರೋಸೈಟ್ ಖನಿಜ ಇದೆ ಎಂಬುದನ್ನು ಅಹ್ಮದಾಬಾದ್​ನ ಬಾಹ್ಯಾಕಾಶ ಅನ್ವಯಿಕ ಕೇಂದ್ರ (ಎಸ್​ಎಸಿ-ಇಸ್ರೊ), ಖರಗಪುರದ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಮತ್ತು ಹೈದರಾಬಾದಿನ ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆಯ (ಎನ್​ಜಿಆರ್​ಐ) ವಿಜ್ಞಾನಿಗಳು ಅಧ್ಯಯನ ಬಳಿಕ ಖಚಿತಪಡಿಸಿದ್ದಾರೆ. ಇಸ್ರೋ ಸಂಸ್ಥೆಯು ತನ್ನ ಮಂಗಳಯಾನ ಯೋಜನೆಯ ಅಡಿಯಲ್ಲಿ ಕೈಗೊಂಡ ಎಸ್​ಎಸಿ-ಇಸ್ರೊ ಯೋಜನೆಯ ಭಾಗವಾಗಿ ಈ ಅಧ್ಯಯನ ನಡೆಸಲಾಗಿತ್ತು.

ಮತಾನುಮಧ್ ಪ್ರದೇಶದಲ್ಲಿ ಜಾರೋಸೈಟ್ ಅಪರೂಪದ ಖನಿಜ, ಕಂದು ಬಣ್ಣದ ಅಗ್ನಿಶಿಲಾ ಪದರ ಸೇರಿದಂತೆ, ಮಂಗಳ ಗ್ರಹದ ಮೇಲ್ಮೈಯಲ್ಲಿ ಇರುವಂತಹುದೇ ಪರಿಸರ ಇರುವುದು ಕಂಡುಬಂದಿದೆ ಎಂದು ಐಐಟಿ ಖರಗಪುರದ ಭೂಗರ್ಭಶಾಸ್ತ್ರ ಮತ್ತು ಭೂಭೌತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸೈಬಲ್ ಗುಪ್ತ ಹೇಳಿದ್ದಾರೆ.

ಮಂಗಳಗ್ರಹದ ಮೇಲ್ಮೈಯಲ್ಲಿ ಕೆಲವಡೆ ಇಂತಹ ಪರಿಸರ ಇರುವ ಬಗ್ಗೆ 2004ರಲ್ಲಿ ನಾಸಾದ ಮಂಗಳ ಅಧ್ಯಯನ ನೌಕೆ ರೋವರ್ ಅಪರ್ಚುನಿಟಿ ವರದಿ ಮಾಡಿತ್ತು. ಆ ಬಳಿಕ ರೋವರ್​ಗಳು ಮಂಗಳ ಗ್ರಹದ ಮೇಲೆ ಹಲವಡೆ ಇಂತಹ ಪರಿಸರ ಇರುವ ಬಗ್ಗೆ ತಿಳಿಸಿದ್ದವು. ಕೆಲವೇ ಪ್ರದೇಶಗಳಲ್ಲಿ ಜಾರೋಸೈಟ್ ಖನಿಜ ಕಂಡು ಬಂದಿದೆ ಎಂದರೆ ಅದರ ಸೃಷ್ಟಿಗೆ ಅತ್ಯಂತ ತೀವ್ರ ಸ್ವರೂಪದ ಅತ್ಯಪರೂಪದ ಪರಿಸ್ಥಿತಿಯ ಅಗತ್ಯವಿತ್ತು ಎಂದು ಅರ್ಥವಾಗುತ್ತದೆ. ಮಂಗಳ ಗ್ರಹದಲ್ಲಿ ಸ್ವಲ್ಪ ಕಾಲ ಅಂತಹ ಪರಿಸರ ಇದ್ದಿರಬಹುದು. ಭೂಮಿಯಲ್ಲಿ ಇಂತಹ ಜಾರೊಸೈಟ್ ಖನಿಜ ಇರುವ ಪ್ರದೇಶವನ್ನು ಅಧ್ಯಯನವು ಮಂಗಳಗ್ರಹದಲ್ಲಿ ಮಾನವರನ್ನು ಇಳಿಸಲು ಬೇಕಾದ ಸಿದ್ಧತೆಗಳಿಗೆ ಅನುಕೂಲವಾಗಬಲ್ಲುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Write A Comment