ಡಮಾಸ್ಕಸ್, ಫೆ.22-ಅಂತಾರಾಷ್ಟ್ರೀಯ ಸಮುದಾಯ ಕದನ ವಿರಾಮ ಒಪ್ಪಂದದ ಪ್ರಸ್ತಾವನೆಯಲ್ಲಿರುವಾಗಲೇ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಹಿಂಸಾಚಾರದಲ್ಲಿ ಡಮಾಸ್ಕಸ್ ಹಾಗೂ ಹಾಮ್ಸ್ ನಗರಗಳಲ್ಲಿ 150ಕ್ಕೂ ಹೆಚ್ಚು ಅಮಾಯಕರು ಮೃತಪಟ್ಟಿದ್ದಾರೆ. 250ಕ್ಕೂ ಅಕ ಮಂದಿ ಗಾಯಗೊಂಡಿದ್ದಾರೆ. ಈಗಾಗಲೇ ಕದನ ವಿರಾಮದ ಮಾತುಕತೆಗಳು ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದು ಜಾರಿಗೆ ಬರುವಷ್ಟರಲ್ಲೇ ಉಗ್ರರು ಈ ಅಮಾನವೀಯ ಕೃತ್ಯಗಳನ್ನು ನಡೆಸಿದ್ದಾರೆ ಎಂದು ಅಮೆರಿಕ ಕಾರ್ಯದರ್ಶಿ ಜಾನ್‌ಕರ್ರಿ ಹೇಳಿದ್ದಾರೆ.
ಡಮಾಸ್ಕಸ್‌ನ ಸಯ್ಯಾದಾ ಝಿನಾಬ್ ನಗರದಲ್ಲಿ ನಡೆಸಿದ ಸರಣಿ ಬಾಂಬ್ ಸೋಟಕ್ಕೆ 83 ಜನ ಬಲಿಯಾಗಿ 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೆರೆಯ ಹಾಮ್ಸ್‌ನಲ್ಲಿ ನಡೆದ ಸರಣಿ ಸೋಟಕ್ಕೆ ಕನಿಷ್ಠ 57 ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ 11 ಮಂದಿ ಮಹಿಳೆಯರೂ ಸೇರಿದ್ದಾರೆ. ಒಟ್ಟಾರೆ 150 ಜನ ಸಾವನ್ನಪ್ಪಿ, ಸುಮಾರು 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.