ಕಾಬೂಲ್,ಜ.17- ಅಫ್ಘಾನಿಸ್ತಾನದ ಪ್ರಮುಖ ನಗರ ಜಲಾಲಾಬಾದ್‌ನಲ್ಲಿ ಇಂದು ಬೆಳಗ್ಗೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.
ಜಲಾಲಾಬಾದ್ ನಗರದ ಹೃದಯ ಭಾಗದಲ್ಲಿರುವ ಅಧಿಕಾರಿಗಳ ಮನೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸರ್ಕಾರದ ವಕ್ತಾರ ಅತಾಉಲ್ಲಾ ಖ್ಯೋಗನಿ ಹೇಳಿದ್ದಾರೆ.
ಇಂದು ಮುಂಜಾನೆ 10.30ರ ಸಮಯದಲ್ಲಿ ಉಗ್ರನೊಬ್ಬ ರಾಜ್ಯದ ಮುಖ್ಯ ಅಧಿಕಾರಿ ಬಚೀದುಲ್ಲಾ ಶಿನ್ವಾರಿ ಅವರ ನಿವಾಸದ ಬಳಿಗೆ ರಭಸದಿಂದ ನುಗ್ಗಿ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ. ಶಿನ್ವಾರಿ ನಂಗರ್‌ಹಾರ್ ಪ್ರಾಂತ್ಯದ ಮಂಡಳಿಯ ಮುಖ್ಯಸ್ಥರಾಗಿದ್ದು, ಅವರ ಕುಟುಂಬದ ಬಹುತೇಕರು ಸ್ಥಳೀಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶಿನ್ವಾರಿ ನಿವಾಸದಲ್ಲಿ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಾರೀ ಜನವೇ ಸೇರಿದ್ದರು.
ಅತಿಥಿಗಳೆಲ್ಲರೂ ಗೆಸ್ಟ್‌ಹೌಸ್‌ನಲ್ಲಿ ಜಮಾಯಿಸಿದ್ದರು. ಇದೇ ವೇಳೆ ಆತ್ಮಾಹುತಿ ದಾಳಿ ನಡೆದಿತ್ತು. ಸಾವುನೋವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿದೆ. ಶಿನ್ವಾರಿ ನಿವಾಸವು ಪಾಕಿಸ್ತಾನದ ದೂತವಾಸದ ಕಚೇರಿಯ ಪಕ್ಕದಲ್ಲೇ ಇದೆ. ಸ್ಥಳಕ್ಕೆ ಭಾರೀ ಸಂಖ್ಯೆಯ ಪೊಲೀಸರು ಧಾವಿಸಿದ್ದು , ಬಿಗಿಬಂದೋಬಸ್ತ್ ಮಾಡಲಾಗಿದೆ.