ಅಂತರಾಷ್ಟ್ರೀಯ

ಉಗ್ರರ ನಿಗ್ರಹಕ್ಕೆ ಫ್ರಾನ್ ಜೊತೆ ಕೈ ಜೋಡಿಸಿದ ರಷ್ಯಾ : ದೊಡ್ಡಣ್ಣನಿಗೆ ಇರಿಸು ಮುರಿಸು

Pinterest LinkedIn Tumblr

rashyaಪ್ಯಾರಿಸ್, ನ.19-ಇಡೀ ವಿಶ್ವವನ್ನೇ ಕಂಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ -ಸಿರಿಯಾ (ಐಞಎಸ್‌ಐಎಸ್) ಉಗ್ರ ನಿಗ್ರಹಕ್ಕೆ ಪಣ ತೊಟ್ಟಿರುವ ಫ್ರಾನ್ಸ್ ಜತೆ ಬೃಹತ್ ಸೇನಾ ಬಲದ ರಷ್ಯಾ ಕೂಡ ಈಗ ಕೈ ಜೋಡಿಸಿರುವುದರಿಂದಾಗಿ, ಸದ್ಯ ತಾನೇ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕಕ್ಕೆ ಕೊಂಚ ಇರಿಸು-ಮುರಿಸು ಉಂಟಾದಂತಾಗಿದೆ. ಕಳೆದ ಶುಕ್ರವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಕ್ರೀಡಾಂಗಣದ ಆವರಣದಲ್ಲಿನ ಬಟಾಕ್ಲಾನ್ ಸಭಾಂಗಣದಲ್ಲಿ ನಡೆದ ಅಮಾಯಕರ ಸಾಮೂಹಿಕ ನರಮೇಧದ ಬಳಿಕ ಐಎಸ್‌ಐಎಸ್ ಉಗ್ರ ಸಂಘಟನೆಯ ಸರ್ವನಾಶಕ್ಕೆ ಫ್ರಾನ್ಸ್ ನೇರ ಯುದ್ಧವನ್ನೇ ಸಾರಿತು. ಇತರ ಎಲ್ಲಾ ರಾಷ್ಟ್ರಗಳೂ ಕೂಡ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದವು.

ತನ್ನ ನೆಲದ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ ಐಸಿಸ್ ಉಗ್ರರ ವಿರುದ್ಧ ರಷ್ಯಾ ಕೂಡ ಈ ಹಿಂದೆಯೇ ಸಮರ ಸಾರಿತ್ತು. ರಷ್ಯಾ ನಡೆಸಿದ ತೀವ್ರ ಬಾಂಬ್ ದಾಳಿಯಲ್ಲಿ ಹಲವು ಉಗ್ರರ ನೆಲೆಗಳು ನಾಶವಾಗಿದ್ದವು. ಆದರೆ, ಇಂತಹ ಸಾಮೂಹಿಕ ದಾಳಿಯಿಂದ ಮುಗ್ಧ ಜನರು ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಆಗ ಅಮೆರಿಕ ರಾಗ ಎಳೆದಿತ್ತು. ಆದರೆ ಪ್ರಸಕ್ತ ಪರಿಸ್ಥಿತಿ ಬದಲಾಗಿದೆ. ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಕೈಜೋಡಿಸಿದ್ದಾರೆ. ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಇದೊಂದು ಮಹತ್ವದ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ. ಐರೋಪ್ಯ ರಾಷ್ಟ್ರಗಳು ಒಗ್ಗಟ್ಟಾಗಿ ನಡೆಸುತ್ತಿರುವ ಉಗ್ರ ನಿಗ್ರಹದಲ್ಲಿ ಈತ ವಿಶ್ವದ ಅನೇಕ ಪ್ರಬಲ ರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ. ಇದರಲ್ಲಿ ರಷ್ಯಾ, ಭಾರತಗಳ ಪಾತ್ರವೂ ಮಹತ್ವದ್ದಾಗಿದೆ.

ಜಾಗತಿಕ ಸಮುದಾಯ ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಸಮರ ಸಾರಿರುವುದು ಕಳೆದ ಶುಕ್ರವಾರದಿಂದ ಈಚೆಗಿನ ಬೆಳವಣಿಗೆ. ಈಗ ಅಮೆರಿಕ ಕೂಡ ಇದರಲ್ಲಿ ಮಾಮೂಲಿನಂತೆ ಗುರುತಿಸಿಕೊಂಡಿರುವುದರ ದ್ಯೋತಕವಾಗಿ ನಿನ್ನೆಯಷ್ಟೇ ಅಧ್ಯಕ್ಷ ಬರಾಕ್ ಒಬಾಮಾ ಅವರು ಹಿಜ್ಬುಲ್ ಮುಜಾಹಿದ್ದೀನ್ (ಹೆಚ್‌ಎಂ), ಲಷ್ಕರ್-ಎ-ತಯ್ಬಾ (ಎಲ್‌ಇಟಿ) ಸೇರಿದಂತೆ ಉಗ್ರಗಾಮಿ ಸಂಘಟನೆಗಳನ್ನು ಮಟ್ಟ ಹಾಕುವಂತೆ ಪಾಕಿಸ್ಥಾನಕ್ಕೆ ಖಡಕ್ ಆಗಿ ಎಚ್ಚರಿಕೆ ನೀಡಿದೆ. ಈ ಮೊದಲು ಅಮೆರಿಕ ಉಗ್ರರ ದಮನ ಕುರಿತಂತೆ ಪಾಕಿಸ್ಥಾನದ ಜತೆ ವಾಡಿಕೆಯಂತೆಯೇ ಮಾತನಾಡಿಕೊಂಡು ಬಂದಿತ್ತು. ಆದರೆ ಹೊಸ ಜಾಗತಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕವು ಪಾಕಿಸ್ಥಾನ ಆಡಳಿತಕ್ಕೆ ಗಟ್ಟಿ ಧ್ವನಿಯಲ್ಲಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಈಗ ಎಲ್ಲಾ ದೇಶಗಳೂ ಒಟ್ಟಾಗಿ ಉಗ್ರರ ವಿರುದ್ಧ ಹೋರಾಡಲಿದ್ದರೆ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಭಯ ಎಲ್ಲರಲ್ಲೂ ಸಾಕಷ್ಟು ಮನೆ ಮಾಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಗೂ ಸಿದ್ಧರಾಗಿರುವುದಾಗಿ ಟ್ವೀಟ್ ಮಾಡಿದ್ದ ಐಎಸ್‌ಐಎಸ್ ಉಗ್ರರು, ರಷ್ಯಾ ವಿಮಾನವನ್ನು ಸ್ಫೋಟಿಸಿರುವುದು ತಾವೇ ಎಂದು ಹೇಳಿಕೊಂಡಿದೆ. ಪುಟಿನ್ ಹಾಗೂ ಹೊಲಾಂಡೆ ಅವರು ಈ ಮೊದಲೇ ಪರಸ್ಪರ ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

Write A Comment