ಅಂತರಾಷ್ಟ್ರೀಯ

ಹೆಚ್ಚಿನ ಪ್ರಗತಿಗೆ ಸುಧಾರಣಾ ಕ್ರಮಗಳ ಮುಂದುವರಿಕೆ: ಜೇಟ್ಲಿ

Pinterest LinkedIn Tumblr

arun jetlyಹಾಂಗ್‌ಕಾಂಗ್, ಸೆ.21: ವ್ಯಾಪಾರ ನಿಯಮಾವಳಿ ಸರಳಗೊಳಿಸುವ ಭರವಸೆಯೊಂದಿಗೆ ವಿದೇಶಿ ಹೂಡಿಕೆದಾರರನ್ನು ಓಲೈಸಿರುವ ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ, ಜಾಗತಿಕ ಆರ್ಥಿಕ ಕುಸಿತದ ಹೊರತಾಗಿಯೂ ಭಾರತದ ಆರ್ಥಿಕ ಪ್ರಗತಿ ದರವನ್ನು ಕಳೆದ ವರ್ಷದ ಶೇಕಡಾ 7.3ರಿಂದ ಹೆಚ್ಚಿಸಲು ಬೇಕಾದ ಸುಧಾರಣಾ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ಜಾಗತಿಕ ಆರ್ಥಿಕ ವೈಪರೀತ್ಯದ ವಾತಾವರಣದಲ್ಲೂ ಪ್ರಗತಿಯ ಭರವಸೆಯನ್ನು ಮೂಡಿಸಲು ಭಾರತ ಸಮರ್ಥವಾಗಿದೆ ಎಂದಿರುವ ಜೇಟ್ಲಿ, ಆರ್ಥಿಕ ಹಿಂಜರಿತವು ಕಡಿಮೆಯಾಗುತ್ತಿದೆ ಹಾಗೂ ಹಣದುಬ್ಬರವು ಗಣನೀಯವಾಗಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿ ಅಂತಾರಾಷ್ಟ್ರೀಯ ಹೂಡಿಕೆದಾರರ ಗಮನಸೆಳೆಯಲು ಯತ್ನಿಸಿರುವ ಜೇಟ್ಲಿಯವರು, ಭಾರತದಲ್ಲಿ ಆರ್ಥಿಕ ನೆರವನ್ನು ಅಪೇಕ್ಷಿಸುವ ಮೂಲಸೌಲಭ್ಯ, ಉತ್ಪಾದನಾ ಹಾಗೂ ಇತರ ಪ್ರಮುಖ ವಲಯಗಳಲ್ಲಿ ಬಂಡವಾಳ ಹೂಡುವಂತೆ ಅವರನ್ನು ಕೇಳಿಕೊಂಡಿದ್ದಾರೆ.

ಜಾಗತಿಕವಾಗಿ ಆರ್ಥಿಕತೆಯು ಹದಗೆಟ್ಟಿರುವ ವಾತಾವರಣದಲ್ಲೂ ಭಾರತವು ಒಂದು ಭರವಸೆಯ ಬೆಳಕಾಗಿ ಮುಂದುವರಿದಿದೆ ಎಂದು ತಾನು ಭಾವಿಸಿರುವುದಾಗಿ ನಾಲ್ಕು ದಿನಗಳ ಸಿಂಗಾಪುರ ಹಾಗೂ ಹಾಂಕ್‌ಕಾಂಗ್ ಭೇಟಿಯನ್ನು ಮುಕ್ತಾಯಗೊಳಿಸಿದ ಸಂದರ್ಭದಲ್ಲಿ ಅರುಣ್ ಜೇಟ್ಲಿ ಹೇಳಿದ್ದಾರೆ.

Write A Comment