ಅಂತರಾಷ್ಟ್ರೀಯ

ಕಾಶ್ಮೀರವೆಂದೂ ಪಾಕ್‌ನ ಭಾಗವಾಗದು: ಫಾರೂಕ್ ಅಬ್ದುಲ್ಲಾ

Pinterest LinkedIn Tumblr

3Farooq_Abdullahಲಂಡನ್, ಸೆ. 19: ಪರಮಾಣು ಯುದ್ಧದ ಬೆದರಿಕೆಯು ಕಾಶ್ಮೀರ ವಿವಾದವನ್ನು ಬಗೆಹರಿಸಲಾರದು ಎಂದು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕಾಶ್ಮೀರವು ಎಂದೂ ಪಾಕಿಸ್ತಾನದ ಭಾಗವಾಗದು ಹಾಗೂ ಮಾತುಕತೆಯೊಂದೇ ವಿವಾದವನ್ನು ಬಗೆಹರಿಸುವ ಅತ್ಯುತ್ತಮ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಮಟ್ಟಿಗೆ ಕಾಶ್ಮೀರ ಪ್ರಮುಖ ವಿಚಾರ ಎಂಬುದನ್ನು ಒಪ್ಪಿಕೊಂಡ ಅಬ್ದುಲ್ಲಾ, ‘‘ತಿಳುವಳಿಕೆಯ ಹಂತವೊಂದಕ್ಕೆ ತಲುಪಲು ಉಭಯ ದೇಶಗಳ ನಡುವೆ ಮಾತುಕತೆ ನಡೆಯುವುದು ಮುಖ್ಯವಾಗಿದೆ’’ ಎಂದರು.
‘‘ಅನ್ಯ ಮಾರ್ಗವಿಲ್ಲ. ಯುದ್ಧದ ಅಥವಾ ಪರಮಾಣು ಬಾಂಬನ್ನು ಬಳಸುವ ಬೆದರಿಕೆ ಅಥವಾ ನಮ್ಮಲ್ಲಿ ಪರಮಾಣು ಅಸ್ತ್ರಗಳಿವೆ ಎಂದು ಹೇಳುವುದು ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ನಾವು ಮಾಡಬೇಕಿರುವುದು ತಿಳುವಳಿಕೆಯ ಹಂತವೊಂದನ್ನು ತಲುಪುವುದಕ್ಕಾಗಿ ದಾರಿಗಳನ್ನು ಮತ್ತು ವಿಧಾನಗಳನ್ನು ಹುಡುಕುವುದು’’ ಎಂದರು.
‘‘ಒಂದಂತೂ ಸ್ಪಷ್ಟ. ಗಡಿಗಳು ಬದಲಾಗಬೇಕೆಂದು ದೇಶಗಳು ಎಷ್ಟೇ ಪ್ರಯತ್ನ ಪಟ್ಟರೂ ಗಡಿಗಳು ಬದಲಾಗುವುದಿಲ್ಲ’’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನುಡಿದರು.
ಅವರು ಶುಕ್ರವಾರ ರಾತ್ರಿ ಇಲ್ಲಿ ಏರ್ಪಡಿಸಲಾದ ‘ಜಮ್ಮು ಮತ್ತು ಕಾಶ್ಮೀರ ಕುರಿತ ಸಂಭಾಷಣೆ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ‘ರಾ’ದ ಮಾಜಿ ಮುಖ್ಯಸ್ಥ ಎ.ಎಸ್. ದೂಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ಪತ್ರಕರ್ತ ಆಶಿಸ್ ರೇ ನಿರೂಪಿಸಿದರು.

Write A Comment