ಅಂತರಾಷ್ಟ್ರೀಯ

ಭಾರತ ಯುದ್ಧ ಸಾರಿದರೆ ನಾವು ಸುಮ್ಮನಿರಲ್ಲ: ಪಾಕ್

Pinterest LinkedIn Tumblr

wagah_borderಇಸ್ಲಾಮಾಬಾದ್: ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಆಗಾಗ್ಗೆ ಗುಂಡಿನ ದಾಳಿ ನಡೆಯುತ್ತಿದೆ. ಹೀಗಿರುವಾಗ ಒಂದು ವೇಳೆ ಭಾರತ ನಮ್ಮ ವಿರುದ್ಧ ಯುದ್ಧ ಸಾರಿದರೆ ನಾವು ಅದಕ್ಕೆ ಸರಿಯಾದ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಗುರುವಾರ ಹೇಳಿದ್ದಾರೆ.

ಭಾರತ ಯುದ್ದವನ್ನು ಸಾರಿದರೆ ಅದರಲ್ಲಿ ಭಾರತಕ್ಕೆ ಹೆಚ್ಚು ನಷ್ಟವುಂಟಾಗುವಂತೆ ನಾವು ಮಾಡುತ್ತೇವೆ ಎಂದು ಆಸಿಫ್ ಗುಡುಗಿದ್ದಾರೆ.

ಅಗತ್ಯ ಬಂದರೆ ಪಾಕ್ ವಿರುದ್ಧ ಯಾವುದೇ ಕ್ಷಣದಲ್ಲಿ ಯುದ್ಧವನ್ನು ಮಾಡಲು ನಾವು ಸನ್ನದ್ಧರಾಗಿದ್ದೇವೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪಾಕ್‌ನಿಂದ ಈ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರೇಡಿಯೋ ಪಾಕಿಸ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಸಿಫ್, ಪಾಕಿಸ್ತಾನ ಶಾಂತಿ ಸಮಾಧಾನವನ್ನು ಬಯಸುತ್ತಿದೆ. ಆದರೆ ಆಕ್ರಮಣಾ ಪ್ರವೃತ್ತಿಗೆ ಹೇಗೆ ಉತ್ತರಿಸಬೇಕು ಎಂಬುದು ಕೂಡಾ ನಮಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.

ಭಾರತೀಯ ಸೇನಾ ಮುಖ್ಯಸ್ಥರ ಮಾತಿಗೆ ಪ್ರತಿಕ್ರಿಯೆ ನೀಡಿದ ಪಾಕ್ ಸಚಿವ, ಭಾರತವು ಪಾಕ್ ವಿರುದ್ಧ ದೀರ್ಘ ಅಥವಾ ಹೃಸ್ವ ಅವಧಿಯ ಯುದ್ಧ ಸಾರಿದರೂ ನಾವದಕ್ಕೆ ತಿರುಗೇಟು ನೀಡಲು ಸಿದ್ಧರಿದ್ದೇವೆ. ಈ ಹಿಂದಿನ ಯುದ್ಧಗಳ ಬಗ್ಗೆ ಮಾತನಾಡಿದ ಅವರು 1965ರಲ್ಲಿ ಭಾರತ ಲಾಹೋರ್‌ನ್ನು ಕಬಳಿಸಲು ಯತ್ನಿಸಿತ್ತು. ಅದಕ್ಕೆ ತಕ್ಕ ಉತ್ತರವನ್ನು ನೀಡಿದ ನಾವು ಭಾರತೀಯ ಸೇನೆಯ ಸ್ಥಿತಿಯನ್ನೇ ಬದಲಾಯಿಸಿದ್ದೆವು. ಭವಿಷ್ಯತ್ತಿನಲ್ಲಿ ಭಾರತಕ್ಕೆ ನಾವು ಇದೇ ರೀತಿಯ ಹೊಡೆತವನ್ನು ನೀಡಲಿದ್ದೇವೆ.

ನಮ್ಮ ಸೇನೆಯು ಹಲವಾರು ವರುಷಗಳಿಂದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಲೇ ಇದೆ. ನಮ್ಮ ಸೈನಿಕರಿಗೆ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬುದು ಗೊತ್ತಿದೆ. ಏತನ್ಮಧ್ಯೆ, ನಮ್ಮ ಪ್ರಧಾನಿ ನವಾಜ್ ಶರೀಫ್ ಕೂಡಾ ಶಾಂತಿ, ಸಮಾಧಾನವನ್ನೇ ಬಯಸುತ್ತಾರೆ ಎಂದು ಆಸಿಫ್ ಹೇಳಿದ್ದಾರೆ.

Write A Comment