ಅಂತರಾಷ್ಟ್ರೀಯ

ಅಪಘಾತದಲ್ಲಿ ಸತ್ತ ವ್ಯಕ್ತಿ ಎದ್ದು ಬಂದಾಗ ! ಇದೊಂದು ವಿಚಿತ್ರ ಕಥೆ ….

Pinterest LinkedIn Tumblr

death3

ಐರಿಶ್, ಸೆ.3: ಇದೊಂತರಾ ವಿಚಿತ್ರ ಕತೆ. ಎಲ್ಲವನ್ನೂ ದೋಚಿ ಜೀವಂತ ಬಿಟ್ಟುಹೋದ ಕಳ್ಳನಿಗೆ ಧನ್ಯವಾದ ಹೇಳಬೇಕೊ ಅಥವಾ ವಿಧಿಗೆ ಧನ್ಯವಾದ ಅರ್ಪಿಸಬೇಕೊ ತಿಳಿಯದು.

ಜಿಂಬಾಬ್ವೆಯಲ್ಲಿ ಕೆಲಸ ಮಾಡುತ್ತಿದ್ದ ಐರಿಶ್ ಮೂಲದ ಕಿಂಗ್ವಿಮ್ ಎಂಬ ವ್ಯಕ್ತಿಯ ವಿಚಿತ್ರ ಕತೆ ಇದು. ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಳ್ಳನೊಬ್ಬ ಈತನ ಮೇಲೆ ದಾಳಿ ಮಾಡಿ, ಕಾರು, ಪರ್ಸ್, ಮೊಬೈಲ್ ಫೋನ್ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ.

ದಾರಿ ಕಾಣದೇ ಹೆದ್ದಾರಿಯಲ್ಲಿ ನಿಂತಿದ್ದ ಕಿಂಗ್ವಿಮ್‌ನನ್ನು ಅಪರಿಚಿತನೊಬ್ಬ ಸಮೀಪದ ಊರಿಗೆ ಡ್ರಾಪ್ ನೀಡಿದ್ದ. ಅಲ್ಲಿಂದ ತನ್ನ ಮನೆಗೆ ಹಿಂದಿರುಗಲು ಎರಡು ದಿನ ತೆಗೆದುಕೊಂಡ ಕಿಂಗ್ವಿಮ್ ಮನೆಗೆ ಮರಳಿ ಬಂದಾಗ ಆಶ್ಚರ್ಯ ಕಾದಿತ್ತು. ಮನೆಯ ಸುತ್ತ ನೂರಾರು ಜನ ಸೇರಿದ್ದರು. ಕಿಂಗ್ವಿಮ್‌ನ ಹೆಂಡತಿ ಹಾಗೂ ಮಗ ಈತನ ಫೋಟೋ ಮುಂದೆ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದರು.

ಅಷ್ಟೇ ಅಲ್ಲದೇ ಕಿಂಗ್ವಿಮ್‌ನ ಪಾರ್ಥಿವ ಶರೀರ ಶವಪೆಟ್ಟಿಗೆಯಲ್ಲಿ ಮಲಗಿತ್ತು. ಇದೆಲ್ಲವನ್ನೂ ನೋಡಿ ಆಶ್ಚರ್ಯಗೊಂಡ ಕಿಂಗ್ವಿಮ್‌ಗೆ, ತಾನು ತನ್ನದೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರುವುದಾಗಿ ತಿಳಿದುಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಇತ್ತ ಕಿಂಗ್ವಿಮ್‌ನನ್ನು ಜೀವಂತ ಕಂಡ ಮನೆಮಂದಿಯೆಲ್ಲ ಗೋಳೊ ಎಂದು ಅಳುತ್ತಾ ಆತನನ್ನು ಅಪ್ಪಿಕೊಂಡು ಮುದ್ದಾಡಿದ್ದೇ ಮುದ್ದಾಡಿದ್ದು. ಏನಿದೆಲ್ಲಾ ಎಂದು ಪೊಲೀಸರನ್ನು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಅಸಲಿಗೆ ಕಿಂಗ್ವಿಮ್‌ನನ್ನು ದೋಚಿದ್ದ ಕಳ್ಳ ಮುಂದೆ ಹೆದ್ದಾರಿಯಲ್ಲಿ ಹೋಗುವಾಗ ಅತೀ ವೇಗವಾಗಿ ಕಾರು ಚಲಾಯಿಸಿದ ಪರಿಣಾಮವಾಗಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅಪಘಾತ ಎಷ್ಟು ಘೋರವಾಗಿತ್ತೆಂದರೆ ಶವ ಗುರುತು ಸಿಗದ ರೀತಿಯಲ್ಲಿ ಕಾರಿನೊಳಗೆ ಅಪ್ಪಚ್ಚಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಪರಿಶೀಲಿಸಿದಾಗ ಅದರಲ್ಲಿ ಸಿಕ್ಕ ಪರ್ಸ್‌ನ ಸಹಾಯದೊಂದಿಗೆ ಈತ ಕಿಂಗ್ವಿಮ್ ಎಂಬ ನಿರ್ಧಾರಕ್ಕೆ ಬಂದು ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮನೆ ಮಂದಿಯೆಲ್ಲ ಸೇರಿ ಕಿಂಗ್ವಿಮ್‌ನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಸ್ವತಃ ಕಿಂಗ್ವಿಮ್ ಪ್ರತ್ಯಕ್ಷವಾಗಿ ನಡೆದ ಘಟನೆಯನ್ನು ತಿಳಿಸಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

Write A Comment