ವಿಶ್ವಸಂಸ್ಥೆ, ಸೆ.2: ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ ಕರಡು 2030ನ್ನು ಅಂಗೀಕರಿಸಿರುವ ಮಹಾಸಭೆಯ ಕ್ರಮವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಶ್ಲಾಘಿಸಿದ್ದಾರೆ.
2030 ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ ಕರಡು ಅಂಗೀಕಾರವು ಅಂತಾರಾಷ್ಟ್ರೀಯ ಸಮುದಾಯವನ್ನು ಒಂದು ನಿರ್ಣಾಯಕ ಹಂತಕ್ಕೆ ಒಯ್ದಿದ್ದು, ಅದರಿಂದ ಜಾಗತಿಕ ಶಾಂತಿಯ ಕನಸು ಹಾಗೂ ಎಲ್ಲರ ಘನತೆಯನ್ನು ಅರಿತುಕೊಳ್ಳುವಲ್ಲಿ ನೆರವಾಗಲಿದೆ.
‘2030 ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ’ ಕರಡನ್ನು ಅಂಗೀಕಾರಕ್ಕಾಗಿ ಈ ತಿಂಗಳ ಕೊನೆಯಲ್ಲಿ ಸದಸ್ಯ ರಾಷ್ಟ್ರಗಳಿಗೆ ಕಳುಹಿಸುವ ನಿರ್ಣಯಕ್ಕೆ ಮಂಗಳವಾರ ವಿಶ್ವಸಂಸ್ಥೆಯ ಮಹಾಧಿವೇಶನ ಒಪ್ಪಿಗೆ ಸೂಚಿಸಿದೆ.
‘‘ಇಂದು ಹೊಸ ಯುಗವೊಂದು ಪ್ರಾರಂಭಗೊಂಡಿದೆ. ಈ ಮುಖ್ಯ ತಿರುವನ್ನು ತಲುಪಲು ನಾವು ಬಲುದೀರ್ಘ ಹಾದಿಯನ್ನು ಜೊತೆಯಾಗಿ ಕ್ರಮಿಸಿದ್ದೇವೆ’’ ಎಂದು ಬಾನ್ ಅಭಿಪ್ರಾಯಿಸಿದ್ದಾರೆ. 2015ರ ನಂತರದ ಹೊಸ ಸುಸ್ಥಿರ ಗುರಿಗಳನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಶತಮಾನದ ಅಭಿವೃದ್ಧಿ ಗುರಿಗಳನ್ನು ಅಂಗೀಕರಿಸಲು ಅಂತಾರಾಷ್ಟ್ರೀಯ ಸಮುದಾಯವು 15 ವರ್ಷಗಳಿಗೂ ಹೆಚ್ಚು ಅವಧಿಯನ್ನು ತೆಗೆದುಕೊಂಡಿದೆ ಎಂದವರು ನೆನಪಿಸಿಕೊಂಡಿದ್ದಾರೆ.
ಈ ತಿಂಗಳ ಕೊನೆಗೆ ನಡೆಯಲಿರುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎಲ್ಲ ರಾಷ್ಟ್ರಗಳ ಮುಖಂಡರು ಕಾರ್ಯಸೂಚಿಗೆ ಅಂಗೀಕಾರ ನೀಡುವುದು ಮಾತ್ರವಲ್ಲದೆ, ಅದರ ಸಕಾಲಿಕ ಅನುಷ್ಠಾನದಲ್ಲಿ ತಮ್ಮ ರಾಜಕೀಯ ಬದ್ಧತೆಯನ್ನು ಖಚಿತಪಡಿಸುವುದನ್ನೂ ನಿರೀಕ್ಷಿಸಲಾಗಿದೆ ಎಂದವರು ಹೇಳಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳ ಕಡೆಗಣನೆ: ಭಾರತ ಟೀಕೆ
ವಿಶ್ವಸಂಸ್ಥೆ, ಸೆ.2: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಡೆಗಣಿಸಿದೆ ಎಂದು ಭಾರತ ಟೀಕಿಸಿದೆ.
2030ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯ ಅನುಷ್ಠಾನಕ್ಕೆ ಸಂಬಂಧಿಸಿ ಅಭವೃದ್ಧಿಶೀಲ ರಾಷ್ಟ್ರಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಭಾರತ ಅಭಿಪ್ರಾಯಿಸಿದೆ.
‘‘ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ) ಪ್ರಾಥಮಿಕವಾಗಿ ಒಂದು ಅಭಿವೃದ್ಧಿ ಸಂಸ್ಥೆಯಾಗಿದ್ದರೂ, ಅದರ ಮೂಲ ಘಟಕ(ಅಭಿವೃದ್ಧಿಶೀಲ ರಾಷ್ಟ್ರಗಳು)ಗಳ ಕಳವಳಗಳನ್ನು ನಿರ್ಲಕ್ಷಿಸಿದೆ’’ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಕೌನ್ಸೆಲರ್ ಪ್ರಕಾಶ್ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಎನ್ಡಿಪಿಯಕಾರ್ಯನಿರ್ವಾಹಕ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ತಮ್ಮ ಅಭಿವೃದ್ಧಿ ಗುರಿಗಳು ಈಡೇರುವಲ್ಲಿ ಯುಎನ್ಡಿಪಿಯ ಪಾತ್ರದ ಬಗ್ಗೆ ಹೆಚ್ಚಿನ ಆಸೆ ಆಕಾಂಕ್ಷೆಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಇರಿಸಿಕೊಂಡಿವೆ ಎಂದವರು ಹೇಳಿದ್ದಾರೆ.