ಅಂತರಾಷ್ಟ್ರೀಯ

ತಾಯ್ನಡಿಗೆ ಖಾತೆ ವಿವರ ನೀಡುವಂತೆ ಭಾರತೀಯರಿಗೆ ಸ್ವಿಸ್‌ಬ್ಯಾಂಕ್ ಮನವಿ

Pinterest LinkedIn Tumblr

4swissaccountsಜುರಿಚ್/ಲಂಡನ್, ಆ.30: ಕಪ್ಪುಹಣಕ್ಕೆ ಸಂಬಂಧಪಟ್ಟ ಹೊಸ ನೀತಿಗೆ ಬೆದರಿರುವ ಅನೇಕ ಸ್ವಿಸ್ ಹಾಗೂ ಯುರೋಪಿ ಯನ್ ಬ್ಯಾಂಕ್‌ಗಳು ಭಾರತೀಯ ಗ್ರಾಹಕರು ತಮ್ಮ ಖಾತೆಗಳ ವಿವರಗಳನ್ನು ಭಾರತದಲ್ಲಿನ ತೆರಿಗೆ ಪ್ರಾಧಿಕಾರಗಳಿಗೆ ಒದಗಿಸು ವಂತೆ ಕೇಳಿಕೊಂಡಿವೆ.
ಭಾರತೀಯರ ತೆರಿಗೆ ವಂಚಿತ ಆಸ್ತಿಗಳನ್ನು ಕೂಡಿಡುವಲ್ಲಿ ತಾವು ಕುಮ್ಮಕ್ಕು ನೀಡುತ್ತಿರುವ ಆರೋಪ ಎದುರಿಸಬಹು ದೆಂಬ ಭೀತಿಯಿಂದ ಅವು ಈ ಕ್ರಮ ಕೈಗೊಂಡಿವೆ ಎಂದು ವಿಶ್ಲೇಷಿಸಲಾಗಿದೆ.
ಅನಿವಾಸಿ ಭಾರತೀಯರಾಗಿ ಪರಿವರ್ತನೆಗೊಂಡಿರುವ ಗ್ರಾಹಕರು ಸೇರಿದಂತೆ ಭಾರತದಲ್ಲಿನ ತಮ್ಮ ಎಲ್ಲ ಗ್ರಾಹಕರು ಭಾರತೀಯ ತೆರಿಗೆ ಪ್ರಾಧಿಕಾರ ಒದಗಿಸಿರುವ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ಅಘೋಷಿತ ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸುವಂತೆ ಸ್ವಿಝರ್‌ಲ್ಯಾಂಡ್ ಹಾಗೂ ಲಂಡನ್‌ನಲ್ಲಿ ಪ್ರಧಾನ ಕಚೇರಿಗಳನ್ನು ಹೊಂದಿರುವ ಈ ಬ್ಯಾಂಕ್‌ಗಳು ಒತ್ತಾಯಿಸಿವೆ.
ಮಾತ್ರವಲ್ಲದೆ, ತಮ್ಮ ಗ್ರಾಹಕರೆಲ್ಲರೂ ತಮ್ಮ ರಾಷ್ಟ್ರಗಳಲ್ಲಿನ ಎಲ್ಲ ಕಾನೂನು ನಿಯಮಾವಳಿಗೆ ಬದ್ಧವಾಗಿರುವುದಾಗಿ ಹೊಸ ಹೊಣೆಗಾರಿಕೆ ಪತ್ರಗಳನ್ನು ಸಲ್ಲಿಸುವಂತೆಯೂ ಬ್ಯಾಂಕ್‌ಗಳು ಕೇಳಿಕೊಂಡಿವೆ ಎಂದು ಈ ಬೃಹತ್ ಹಣಕಾಸು ಸಂಸ್ಥೆಗಳಲ್ಲಿರುವ ಕೆಲವು ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕಾನೂನಿನನ್ವಯ, ಗ್ರಾಹಕರು ತಮ್ಮ ಅಘೋಷಿತ ಆಸ್ತಿ ವಿವರ ನೀಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಮುಂದಿನ ತಿಂಗಳು ಅದು ಮುಕ್ತಾಯಗೊಳ್ಳಲಿದೆ. ಈ ‘ಒಪ್ಪಿಗೆ ಗವಾಕ್ಷಿ’ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವು ಕೋರಿವೆ. ತನ್ಮೂಲಕ ಗ್ರಾಹಕರು ಶೇಕಡಾ 30 ತೆರಿಗೆ ಹಾಗೂ ಶೇಕಡಾ 30 ಹೆಚ್ಚುವರಿ ದಂಡ ನೀಡಬೇಕಾಗಿದ್ದು, ಮುಂದಿನ ಕಾನೂನುಕ್ರಮದಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಕಾಶದ ಬಳಿಕ ಯಾವುದೇ ಗ್ರಾಹಕರು ತಮ್ಮ ಆಸ್ತಿ ವಿವರ ಘೋಷಿಸದ ಪ್ರಕರಣ ಕಂಡು ಬಂದಲ್ಲಿ ಅಂತಹವರು ಶೇಕಡಾ 30 ತೆರಿಗೆಯ ಜೊತೆಗೆ ಶೇಕಡಾ 90 ದಂಡ ಹಾಗೂ 10 ವರ್ಷಗಳವರೆಗಿನ ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಎಚ್‌ಎಸ್‌ಬಿಸಿಯ ಜಿನೇವ ಶಾಖೆಯಲ್ಲಿ ತನ್ನ ನಾಗರಿಕರು ಹಣ ಇರಿಸಿರುವ ಪ್ರಕರಣ ಗಳ ತನಿಖೆ  ಯನ್ನು ಭಾರತೀಯ ಪ್ರಾಧಿಕಾರಗಳು ಈಗಾಗಲೇ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Write A Comment