ಅಂತರಾಷ್ಟ್ರೀಯ

ಶಾಂತಿ ಯತ್ನಗಳಿಗೆ ಧಕ್ಕೆ: ಭಾರತದ ವಿರುದ್ಧ ಪಾಕ್ ಆರೋಪ

Pinterest LinkedIn Tumblr

nisar-ali-khan-3ಇಸ್ಲಾಮಾಬಾದ್, ಆ.29: ಶಾಂತಿಯತ್ನಗಳಿಗೆ ಭಾರತವು ಧಕ್ಕೆಯುಂಟು ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ದ್ವಿಪಕ್ಷೀಯ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಒಳಗೊಂಡಿರುವುದನ್ನು ಆಕ್ಷೇಪಿಸುವ ಮೂಲಕ ಭಾರತವು ಪ್ರಾದೇಶಿಕ ಭದ್ರತೆ ಹಾಗೂ ಸ್ಥಿರತೆಯನ್ನು ಪಣಕ್ಕೊಡ್ಡುತ್ತಿದೆ ಎಂದು ಪಾಕ್ ಗಂಭೀರ ಆರೋಪವನ್ನು ಮಾಡಿದೆ.
‘‘ಪ್ರಾದೇಶಿಕ ಶಾಂತಿಗೆ ಸಂಬಂಧಿಸಿ ಪಾಕಿಸ್ತಾನವು ಸ್ಪಷ್ಟ ಕಲ್ಪನೆಯನ್ನು ಹೊಂದಿದೆ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧಗಳನ್ನು ಬಯಸುತ್ತದೆ. ಆದರೆ ದುರದೃಷ್ಟವಶಾತ್, ಇತರ ರಾಷ್ಟ್ರಗಳು ನಮ್ಮಾಂದಿಗೆ ಇದೇ ರೀತಿಯಲ್ಲಿ ಸ್ಪಂದಿಸಲು ಮುಂದಾಗುತ್ತಿಲ್ಲ’’ ಎಂದು ಇಸ್ಲಾಮಾಬಾದ್‌ನಲ್ಲಿ ಬಿಡುಗಡೆಗೊಳಿಸಿರುವ ಹೇಳಿಕೆಯೊಂದರಲ್ಲಿ ಆಂತರಿಕ ಸಚಿವ ನಿಸಾರ್ ಅಲಿ ಖಾನ್ ವಿವರಿಸಿದ್ದಾರೆ.
‘‘ಕಾಶ್ಮೀರಿ ಮುಖಂಡರೊಂದಿಗೆ ಸಮಾಲೋಚನೆ ನಡೆಸುವುದರ ಬಗೆಗಿನ ಭಾರತ ಸರಕಾರದ ಆಕ್ಷೇಪಣೆಯು ನ್ಯಾಯಸಮ್ಮತವಲ್ಲ’’ ಎಂದವರು ಅಭಿಪ್ರಾಯಿಸಿದ್ದಾರೆ.
ಕಳೆದ ವಾರ ಹೊಸದಿಲ್ಲಿಯಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾರತೀಯ ಸೋದ್ಯೋಗಿ ಅಜಿತ್ ದೋವಲ್‌ರೊಂದಿಗೆ ಮಾತುಕತೆ ನಡೆಸಲು ಪಾಕ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಝೀಝ್‌ರನ್ನು ಭಾರತಕ್ಕೆ ಕಳುಹಿಸಲು ಇಸ್ಲಾಮಾಬಾದ್ ನಿರಾಕರಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಇನ್ನಷ್ಟು ತೀವ್ರಗೊಂಡಂತಾಗಿದೆ.
ಮಾತುಕತೆಯ ಕಾರ್ಯಸೂಚಿಯ ಬಗ್ಗೆ ಉಭಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಹಾಗೂ ಪ್ರಸ್ತಾಪಿತ ಮಾತುಕತೆಗೆ ಪೂರ್ವಭಾವಿಯಾಗಿ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಸರ್ತಾಜ್ ಅಝೀಝ್ ಭೇಟಿಯಾಗಲು ನಿರ್ಧರಿಸಿದ್ದುದು ನಿಗದಿತ ಸಭೆ ರದ್ದುಗೊಳ್ಳಲು ಕಾರಣವಾಗಿತ್ತು.
ಒಂದಿಲ್ಲೊಂದು ನೆಪವೊಡ್ಡುವ ಮೂಲಕ ಭಾರತವು ಶಾಂತಿ ಯತ್ನಗಳನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಪ್ರಾದೇಶಿಕ ಭದ್ರತೆ ಹಾಗೂ ಸ್ಥಿರತೆಯನ್ನು ಪಣಕ್ಕೊಡ್ಡುತ್ತಿದೆ ಎಂದು ಖಾನ್ ಆಪಾದಿಸಿದ್ದಾರೆ.
‘‘ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸಹಜಗೊಳಿಸುವಲ್ಲಿ ಹಾಗೂ ಪ್ರಾದೇಶಿಕ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿವಾದವು ಒಂದು ಪ್ರಮುಖ ಅಡಚಣೆಯಾಗಿದೆ’’ ಎಂದು ಲಂಡನ್‌ನಲ್ಲಿ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಫಿಲಿಪ್ ಹ್ಯಾಮಂಡ್‌ರೊಂದಿಗೆ ನಡೆದ ಮಾತುಕತೆಯ ವೇಳೆ ಶುಕ್ರವಾರ ಖಾನ್ ಹೇಳಿದ್ದರು.

ಕಾಶ್ಮೀರ ವಿವಾದದ ಕುರಿತು ಚರ್ಚಿಸದೆ ಮಾತುಕತೆ ಪ್ರಕ್ರಿಯೆಯು ಮುಂದುವರಿಯಲು ಸಾಧ್ಯವಿಲ್ಲವೆಂಬುದನ್ನು ಭಾರತ ಅರಿತುಕೊಳ್ಳಬೇಕು ಎಂದವರು ಹೇಳಿದ್ದಾರೆ. ಪಾಕಿಸ್ತಾನವು ಪ್ರಾದೇಶಿಕ ಶಾಂತಿ ಸ್ಥಾಪನೆಯ ಯತ್ನಗಳನ್ನು ಮುಂದುವರಿಸಲಿದೆ. ಆದರೆ ಯಾವುದೇ ರಾಷ್ಟ್ರದ ದಬ್ಬಾಳಿಕೆ ಅಥವಾ ಪ್ರಾಬಲ್ಯಕ್ಕೆ ತಲೆಬಾಗದು ಎಂದವರು ತಿಳಿಸಿದ್ದಾರೆ.

Write A Comment