ಅಂತರಾಷ್ಟ್ರೀಯ

ಸಮುದ್ರ ಮಟ್ಟ ಏರಿಕೆ: ನಾಸಾ ವಿಜ್ಞಾನಿಗಳು

Pinterest LinkedIn Tumblr

Sea Planeವಾಷಿಂಗ್ಟನ್, ಆ.27: ಜಗತ್ತಿನಾದ್ಯಂತ ಸಮು್ರಗಳ ಮಟ್ಟಗಳಲ್ಲಿ ಏರಿಕೆ ಕಂಡು ಬರುತ್ತಿದೆ ಹಾಗೂ ಉಪಗ್ರಹಗಳಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಮುಂದಿನ 100ರಿಂದ 200 ವರ್ಷಗಳ ಅವಧಿಯಲ್ಲಿ ಒಂದು ಮೀಟರ್ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳವಾಗುವುದನ್ನು ತಪ್ಪಿಸಲಾಗದು ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.
ಗ್ರೀನ್‌ಲ್ಯಾಂಡ್ ಹಾಗೂ ಅಂಟಾರ್ಕ್ಟಿಕಾಗಳಲ್ಲಿ ಹಿಮಪದರಗಳು ಹಿಂದೆಂದಿಗಿಂತಲೂ ಅಧಿಕ ವೇಗದಲ್ಲಿ ಕರಗುತ್ತಿವೆ ಹಾಗೂ ಸಾಗರಗಳಲ್ಲಿ ತಾಪಮಾನ ಏರುತ್ತಿದೆ ಮತ್ತು ಇದು ಈ ಹಿಂದಿನ ವರ್ಷಗಳ ಅವಧಿಗಿಂತಲೂ ಅತಿ ವೇಗದಲ್ಲಿ ಹೆಚ್ಚುತ್ತಿದೆ ಎಂದವರು ವಿವರಿಸಿದ್ದಾರೆ.
ಸಮುದ್ರ ಮಟ್ಟದಲ್ಲಿನ ಹೆಚ್ಚಳವು ಜಗತ್ತಿನಾದ್ಯಂತ ಗಾಢ ಪರಿಣಾಮವನ್ನುಂಟು ಮಾಡಲಿದೆ ಎಂದು ನಾಸಾ ಭೂ ವಿಜ್ಞಾನ ವಿಭಾಗದ ನಿರ್ದೇಕ ಮೈಕೆಲ್ ಫ್ರೆಲಿಕ್ ಹೇಳಿದ್ದಾರೆ.
ಸುಮಾರು 150 ದಶಲಕ್ಷಕ್ಕಿಂತಲೂ ಅಧಿಕ ಜನರು ಪ್ರಸಕ್ತ ಸಮುದ್ರ ಮಟ್ಟದಿಂದ ಒಂದು ಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಫ್ಲೋರಿಡಾದಂತಹ ತಗ್ಗು ಭಾಗಗಳು ಕಣ್ಮರೆಯಾಗುವ ಅಪಾಯವಿದ್ದು ಸಿಂಗಾಪುರ ಹಾಗೂ ಟೋಕಿಯೊದಂತಹ ಜಗತ್ತಿನ ಕೆಲವು ಪ್ರಮುಖ ನಗರಗಳು ಕೂಡಾ ಈ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದವರು ಅಂದಾಜಿಸಿದ್ದಾರೆ.
ಕೆಲವು ಪೆಸಿಫಿಕ್ ದ್ವೀಪ ಪ್ರದೇಶಗಳ ಮೇಲೂ ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದವರು ಹೇಳಿದ್ದಾರೆ.

Write A Comment