ಇಸ್ಲಾಮಾಬಾದ್, ಆ.27: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗೀಲಾನಿಯವರನ್ನು ಬಂಧಿಸುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಗುರುವಾರ ಆದೇಶ ಹೊರಡಿಸಿದೆ.
ಪಾಕ್‌ನ ನ್ಯಾಶನಲ್ ಇನ್ಸೂರೆನ್ಸ್ ಲಿಮಿಟೆಡ್ ಕಂಪೆನಿ(ಎನ್‌ಐಸಿಎಲ್) ಹಗರಣದಲ್ಲಿ ಭಾಗಿಯಾಗಿದ್ದರೆನ್ನಲಾಗಿರುವ ಗೀಲಾನಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ವ್ಯಾಪಾರ ಅಭಿವೃದ್ಧಿ ಪ್ರಾಧಿಕಾರ(ಟಿಡಿಎ)ದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಫೆಡರಲ್ ತನಿಖಾ ಸಂಸ್ಥೆ(ಎಫ್‌ಐಎ) ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಯೂಸುಫ್ ರಝಾ ಗೀಲಾನಿ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ನಾಯಕ ಮಖ್ದೂಮ್ ಅಮೀನ್ ಫಾಹಿಮ್ ವಿರುದ್ಧ ಬಂಧನಾದೇಶ ಜಾರಿಗೊಳಿಸಿದೆ ಎಂದು ‘ಡಾನ್’ ವರದಿ ಮಾಡಿದೆ.
ನಕಲಿ ಕಂಪೆನಿಗಳ ಮೂಲಕ ಕೋಟ್ಯಂತರ ರೂಪಾಯಿಗಳ ವಂಚನೆ ನಡೆಸಿರುವ ಆರೋಪದಡಿ ಎಫ್‌ಐಎ ಎಫ್‌ಐಆರ್ ದಾಖಲಿಸಿತ್ತು. ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗದ ಗೀಲಾನಿ ಹಾಗೂ ಫಾಹಿಮ್ ವಿರುದ್ಧ ಬಂಧನಾದೇಶ ಜಾರಿಗೊಂಡಿದೆ. ಆರೋಪಗಳು ಸಾಬೀತಾದಲ್ಲಿ ಏಳು ವರ್ಷಗಳವರೆಗಿನ ಜೈಲು ಶಿಕ್ಷೆ ಹಾಗೂ ದಂಡ ಅನುಭವಿಸಬೇಕಾಗುತ್ತದೆ.