ನ್ಯೂಯಾರ್ಕ್, ಆ.26: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ 27ರಂದು ನೀಡಲಿರುವ ಅಮೆರಿಕ ಭೇಟಿಯ ವೇಳೆ ಸಿಲಿಕಾನ್ ವ್ಯಾಲಿಯಲ್ಲಿ ಆಯೋಜಿಸಲಾಗುವ ಸಮಾರಂಭವನ್ನುದ್ದೇಶಿಸಿ ಮಾಡುವ ಭಾಷಣವನ್ನು ಆಲಿಸಲು 40 ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಏರ್ಪಡಿಸಿದ್ದ ಭಾಷಣಕ್ಕೆ 30 ಸಾವಿರ ಜನ ನೋಂದಾಯಿಸಲ್ಪಟ್ಟಿದ್ದ ದಾಖಲೆಯನ್ನು ಇದು ಮುರಿದಿದೆ.
ಸೆಪ್ಟಂಬರ್‌ನಲ್ಲಿ ಅಮೆರಿಕಕ್ಕೆ ಮತ್ತೊಮ್ಮೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರು ಅಲ್ಲಿ ತಾಂತ್ರಿಕ ಹಾಗೂ ಉದ್ಯಮಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಮಾತ್ರವಲ್ಲದೆ ಸಂಶೋಧನೆ, ಡಿಜಿಟಲ್ ಆವಿಷ್ಕಾರ ಹಾಗೂ ಆರ್ಥಿಕತೆ ಹಾಗೂ ನವೀಕರಿಸಬಹುದಾದ ಇಂಧನಗಳ ಕುರಿತು ಹೆಚ್ಚು ಗಮನ ಹರಿಸಲಿದ್ದಾರೆ ಎಂದು ಭಾರತೀಯ ರಾಯಭಾರಿ ಅರುಣ್ ಕೆ. ಸಿಂಗ್ ಹೇಳಿದ್ದಾರೆ.
ಸೆಪ್ಟಂಬರ್ 27ಕ್ಕೆ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.