ನ್ಯೂಯಾರ್ಕ್, ಆ.26: ನೇರಪ್ರಸಾರ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಬುಧವಾರ ಅಮೆರಿಕದ ಇಬ್ಬರು ಪತ್ರಕರ್ತರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ವರ್ಜೀನಿಯದ ಬೆಡ್‌ಫೋರ್ಡ್‌ನಿಂದ ವರದಿಯಾಗಿದೆ.
ನೇರಪ್ರಸಾರದಲ್ಲಿ ವರದಿ ಮಾಡುತ್ತಿದ್ದ ಪತ್ರಕರ್ತರಿಬ್ಬರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ.
ಡಬ್ಲುಡಿಬಿಜೆ7 ಟವಿಯ ವರದಿಗಾರ್ತಿ ಅಲಿಸನ್ ಪಾರ್ಕರ್(24) ಹಾಗೂ ಕ್ಯಾಮರಾಮನ್ ಆ್ಯಡಂ ವಾರ್ಡ್(27) ಮೃತಪಟ್ಟವರು ಎಂದು ಟಿವಿ ಕೇಂದ್ರ ತಿಳಿಸಿದೆ.
ಪತ್ರಕರ್ತರಿಬ್ಬರ ಮೇಲೆ ಗುಂಡಿನ ದಾಳಿಯಾಗಿರುವುದು ನೇರಪ್ರಸಾರದಲ್ಲಿ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಸ್ಥಳೀಯ ಕಾಲಮಾನ ಬುಧವಾರ ಮುಂಜಾನೆ 6:45ರ ವೇಳೆಗೆ ಸ್ಮಿತ್ ವೌಂಟೆನ್ ಲೇಕ್ ಸಮೀಪದ ಬೃಹತ್ ವಾಣಿಜ್ಯ ಮಾರಾಟ ಕೇಂದ್ರ ‘ಬ್ರಿಜ್‌ವಾಟರ್ ಪ್ಲಾಝಾ’ದಲ್ಲಿ ದುರಂತ ಸಂಭವಿಸಿದೆ.
ಹತ್ಯೆಯ ಹಿನ್ನೆಲೆ ಏನೆಂದು ತಿಳಿದುಬಂದಿಲ್ಲವೆನ್ನಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ಪ್ರಾರಂಭಿಸಿರುವ ಪೊಲೀಸರು ಶಂಕಿತರಿಗಾಗಿ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
‘‘ದಾಳಿಯ ಹಿಂದಿನ ಉದ್ದೇಶವೇನೆಂದು ನಮಗೆ ತಿಳಿಯುತ್ತಿಲ್ಲ. ಶಂಕಿತರು ಅಥವಾ ಹಂತಕರು ಯಾರೆಂಬುದೂ ನಮಗೆ ತಿಳಿಯದು’’ ಎಂದು ಟಿವಿ ಕೇಂದ್ರದ ಮಹಾವ್ಯವಸ್ಥಾಪಕ ಜೆಫ್ರಿ ಮಾರ್ಕ್ ಹೇಳಿದ್ದಾರೆ.