ಚೆಚೆನ್ಯ: ಐಸಿಸ್ ಉಗ್ರರು ತಮ್ಮ ಕ್ರೂರತನದ ಹತ್ಯೆಗಳ ಕಾರಣಕ್ಕಾಗಿ ಇಂದು ಕುಖ್ಯಾತರಾಗಿದ್ದಾರೆ. ಆದರೆ ಇಂತಹ ಹಿನ್ನೆಲೆಯುಳ್ಳ ಐಸಿಸ್ ಉಗ್ರರಿಗೆ ಮೂವರು ಯುವತಿಯರು ಟೋಪಿ ಹಾಕಿರುವ ಘಟನೆ ಇಲ್ಲಿದೆ ನೋಡಿ.
ರಷ್ಯಾದ ಚೆಚೆನ್ಯ ಪ್ರಾಂತ್ಯಕ್ಕೆ ಸೇರಿದ ಈ ಯುವತಿಯರಿಗೆ ರಜಾ ಅವಧಿಯಲ್ಲಿ ಮೋಜು ಮಾಡಬೇಕೆಂಬ ಅಭಿಲಾಷೆ ಹುಟ್ಟಿದೆ. ಆದರೆ ಅದಕ್ಕೆ ಅವರ ಬಳಿ ಹಣ ಇರಲಿಲ್ಲ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸ್ನೇಹಿತರ ಬಳಿ ಸಾಲ ಪಡೆದೋ ಅಥವಾ ಹೆಚ್ಚುವರಿ ಕೆಲಸ ಮಾಡುವ ಮೂಲಕ ಹಣ ಗಳಿಸಿ ಮೋಜು ಮಸ್ತಿ ಮಾಡುತ್ತಾರೆ.
ಆದರೆ ಅದಕ್ಕೆ ಈ ಯುವತಿಯರು ಆರಿಸಿಕೊಂಡಿದ್ದು, ಮಾತ್ರ ವಿಭಿನ್ನ ಹಾದಿ. ಐಸಿಸ್ ಉಗ್ರರು ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಸಂಘಟನೆಗೆ ಯುವಕ- ಯುವತಿಯರನ್ನು ಸೆಳೆಯುತ್ತಿದ್ದ ಸಂಗತಿ ಈ ಯುವತಿಯರ ಗಮನದಲ್ಲಿತ್ತು. ಅದರಲ್ಲೂ ಮುಸ್ಲಿಂ ಪ್ರಾಬಲ್ಯವಿರುವ ಚೆಚೆನ್ಯದ ಯುವ ಜನಾಂಗವನ್ನು ತಮ್ಮತ್ತ ಸೆಳೆಯಲು ಐಸಿಸ್ ಉಗ್ರರು ಹಲವಾರು ಆಮಿಷಗಳನ್ನು ಒಡ್ಡುತ್ತಿರುವ ಸಂಗತಿಯೂ ಯುವತಿಯರಿಗೆ ಗೊತ್ತಿತ್ತು.
ತಾವು ಐಸಿಸ್ ಸೇರಲು ಸಿದ್ದವಾಗಿದ್ದು, ಸಿರಿಯಾಕ್ಕೆ ತೆರಳಲು ಸಜ್ಜಾಗಿರುವುದಾಗಿ ತಮ್ಮನ್ನು ಸಾಮಾಜಿಕ ಜಾಲ ತಾಣದಲ್ಲಿ ಸಂಪರ್ಕಿಸಿದ್ದ ಐಸಿಸ್ ನಾಯಕನಿಗೆ ಈ ಯುವತಿಯರು ತಿಳಿಸಿದ್ದರು. ಅಲ್ಲದೇ ವಂಚನೆ ಮಾಡುವ ಉದ್ದೇಶದಿಂದಲೇ ಸಾಮಾಜಿಕ ಜಾಲ ತಾಣದಲ್ಲಿ ಅಕೌಂಟ್ ಸೃಷ್ಟಿಸಿ ನಕಲಿ ಫೋಟೋ ಹಾಕಿದ್ದರು.
ಸರಿ. ಇವರ ಮಾತನ್ನು ನಂಬಿದ ಐಸಿಸ್ ಉಗ್ರರು ಇವರುಗಳು ಕೊಟ್ಟಿದ್ದ ಖಾತೆಗೆ ವಿಮಾನ ಪ್ರಯಾಣ ಸೇರಿದಂತೆ ಇನ್ನಿತರೆ ವೆಚ್ಚಕ್ಕಾಗಿ ಹಣ ಹಾಕಿದ್ದರು. ಹಣ ಪಡೆದ ಬಳಿಕ ಈ ಯುವತಿಯರು ತಮ್ಮ ಖಾತೆಗಳನ್ನೆಲ್ಲಾ ಬಂದ್ ಮಾಡಿ ಬಂದ ಹಣವನ್ನು ಬಿಂದಾಸ್ ಆಗಿ ಖರ್ಚು ಮಾಡಿದ್ದಾರೆ. ಆದರೆ ಉಗ್ರರ ನಿಗ್ರಹಕ್ಕಾಗಿ ಸಾಮಾಜಿಕ ಜಾಲ ತಾಣದ ಮೇಲೆ ಕಣ್ಣಿಟ್ಟಿದ್ದ ಪೊಲೀಸರಿಗೆ ಈ ಯುವತಿಯರು ಐಸಿಸ್ ಸಂಘಟನೆಯಿಂದ ಹಣ ಪಡೆದ ವಿಚಾರ ತಿಳಿದ ಬಳಿಕ ಈಗ ಯುವತಿಯರನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಈ ಯುವತಿಯರು ಐಸಿಸ್ ಉಗ್ರರಿಗೆ ಟೋಪಿ ಹಾಕಿದರೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಐಸಿಸ್ ಉಗ್ರರಿಗೆ ಚಳ್ಳೆಹಣ್ಣು ತಿನ್ನಿಸಿದ ಯುವತಿಯರಿಗೆ ಈಗ ಬಹುಮಾನ ನೀಡಲಾಗುತ್ತದೋ ಅಥವಾ ಶಿಕ್ಷೆ ನೀಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.