ಷೇರು ಮಾರುಕಟ್ಟೆ ಎಂಬುದು ಕುದುರೆ ರೇಸ್ ಇದ್ದ ಹಾಗೆ ಎಂಬುದು ಕೆಲವರ ಅಭಿಪ್ರಾಯ. ಕೆಲವೊಮ್ಮೆ ಈ ಮಾತು ಸತ್ಯ ಎನಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಜಾಗತಿಕ ಷೇರು ಮಾರುಕಟ್ಟೆ ಹಾಗೂ ಚೀನಾ ಮಾರುಕಟ್ಟೆ ಸೂಚ್ಯಂಕ ಪಾತಳಕ್ಕೆ ಇಳಿಯುತ್ತಿದ್ದಂತೆ ಚೀನಾದ ಅತಿ ಶ್ರೀಮಂತ ವ್ಯಕ್ತಿ ಒಂದೇ ದಿನದಲ್ಲಿ 3.6 ಶತಕೋಟಿ ಡಾಲರ್ ಕಳೆದುಕೊಂಡಿದ್ದಾನೆ.
ಹೌದು. ಕಳೆದ ಹಲವು ದಿನಗಳಿಂದ ಏರಿಳಿತ ಕಾಣುತ್ತಿರುವ ಷೇರು ಮಾರುಕಟ್ಟೆ ಸೋಮವಾರ ಪಾತಾಳಕ್ಕಿಳಿದಿತ್ತು. ಈ ಹಿನ್ನೆಲೆಯಲ್ಲಿ ಆಸ್ತಿ ಹಾಗೂ ಮನರಂಜನೆ ಕಂಪನಿ ಡಲಿಯಾನ್ ವಾಂಡದ ಸ್ಥಾಪಕ, ಅಧ್ಯಕ್ಷ ವಾಂಗ್ ಜೈನ್ಲಿನ್ ಅವರ ಒಟ್ಟು ಆಸ್ತಿ ಮೊತ್ತದಲ್ಲಿ ಶೇ.10ರಷ್ಟನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು ವಿಶ್ವದ ಅತಿ ಶ್ರೀಮಂತರ ಆದಾಯದ ಬಗ್ಗೆ ಮಾಹಿತಿ ಕಲೆ ಹಾಕುವ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಈ ವಿಷಯವನ್ನು ಹೊರಹಾಕಿದೆ.
ಚೀನಾ ಅರ್ಥವ್ಯವಸ್ಥೆಯ ಬಿಕ್ಕಟ್ಟಿನ ಪರಿಣಾಮವಾಗಿ ಮುಂಬಯಿ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಭಾರೀ ನಷ್ಟ ಅನುಭವಿಸುವುದರ ಜತೆಗೆ ಶಾಂಘೈ ಷೇರುಗಳು ಸೋಮವಾರ ಶೇ.8.49ಕ್ಕೆ ಕುಸಿದಿತ್ತು. ಚೀನಾದ ಯುವಾನ್ ಕರೆನ್ಸಿಯ ತೀವ್ರ ಅಪಮೌಲ್ಯ, ಉತ್ಪಾದನೆಯ ಗಣನೀಯ ಇಳಿಕೆ ಮತ್ತು ಅರ್ಥವ್ಯವಸ್ಥೆಯ ಮಂದಗತಿ ಜಾಗತಿಕ ಷೇರು ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿದ್ದು ಹಲವು ಹೂಡಿಕೆದಾರರನ್ನು ನಿದ್ದೆಗೆಡಿಸಿದೆ.