‘ಮಿಸ್ಟರ್ ಬೀನ್’ ಎಂಬ ಹೆಸರು ಕೇಳಿದಾಕ್ಷಣ ಮುಖದಲ್ಲಿ ಮುಗುಳ್ನಗು ಮೂಡದಿರಲು ಸಾಧ್ಯವೇ ಇಲ್ಲ. ಇವನ ಮುಖ ಪರಿಚಯವಿಲ್ಲದ ಮಕ್ಕಳಿರಲಿಕ್ಕಿಲ್ಲ. ಪುಟ್ಟ ಮಕ್ಕಳ ಅಪ್ಪ-ಅಮ್ಮ ಮತ್ತು ಅವರ ಅಪ್ಪಪ್ಪ-ಅಮ್ಮಮ್ಮನವರಿಗೆಲ್ಲ ಚಿರಪರಿಚಿತ ಈ ಮಿ. ಬೀನ್. ತನ್ನ ವಿಚಿತ್ರ, ವಿಭಿನ್ನ, ವಿಶಿಷ್ಟ, ವಿನೋದಮಯ ಹಾವಭಾವ, ಆಂಗೀಕ ಅಭಿನಯದಿಂದ, ತುಂಟತನ, ತರಲೆ, ಮುಗ್ಧತೆಗಳಿಂದ ನೋಡುಗರನ್ನು ನಗೆಗಡಲಲ್ಲಿ ಮುಳುಗಿಸುವ ಇವರ ಕಾರ್ಟೂನ್ ಷೋಗಳು ಎಲ್ಲರಿಗೂ ಅಚ್ಚುಮೆಚ್ಚು. ಜಗತ್ತಿನ ಹಲವಾರು ದೇಶಗಳ ನೂರಾರು ಛಾನೆಲ್ ಗಳಲ್ಲಿ ಪ್ರತಿದಿನ ಇವರ ಕಾಮಿಡಿ, ಕಾರ್ಟೂನ್ ಷೋಗಳು ಪ್ರಸಾರವಾಗುತ್ತಲೇ ಇರುತ್ತವೆ.
ಹೆಚ್ಚು ಮಾತುಗಳಿಲ್ಲದ, ಮೂಕಿ ಚಿತ್ರವನ್ನು ನೋಡಿದ ಅನುಭವವನ್ನು ನೀಡುವ, ನಕ್ಕು ನಗಿಸುವ ಮಿ.ಬೀನ್ ಕಾರ್ಯಕ್ರಮ ಸರಣಿಯು ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. 2012ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಿ.ಬೀನ್ ರ ಲೈವ್ ಷೋ ವನ್ನು ನೋಡುತ್ತಿದ್ದ ಜಗತ್ತಿನ ಎಲ್ಲೆಡೆಯ ಜನ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಬ್ರಿಟಿಷ್ ರಾಣಿಯು ಮಿ.ಬೀನ್ ರಿಗೆ ಅಭಿನಂದಿಸಿದರು. ಜನಪ್ರಿಯತೆಯ ಉತ್ತುಂಗದಲ್ಲಿರುವ ಈ ನಟನೇನು ಉದ್ಭವ ಮೂರ್ತಿಯಲ್ಲ ಅಥವಾ ರಾತ್ರೋರಾತ್ರಿ ಬಿಗ್ ಸ್ಟಾರ್ ಆದವನಲ್ಲ. ಯಾವುದೇ ಗಾಡ್ ಫಾದರ್ ಗಳಿಲ್ಲದ ಅಪ್ಪಟ ಪ್ರತಿಭಾವಂತನಾದ ಈ ನಟ ಸಾಗಿಬಂದ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸೋಣ ಈ ಲೇಖನದಲ್ಲಿ.
ಫ್ಲಾಶ್ ಬ್ಯಾಕ್: ರೋವನ್ ಸೆಬಾಸ್ಟಿಯನ್ ಎಟ್ಕಿನ್ಸನ್ (Rowan Sebastian Atkinson) ಎಂಬ ಉದ್ದ ಹೆಸರಿನ ‘ರೋ’ ಎಂಬ ಸಣ್ಣ ನಿಕ್ ನೇಮ್, 5 ಅಡಿ 11 ಇಂಚು ಎತ್ತರದ 6 ನೇ ಜನವರಿ 1955 ರಲ್ಲಿ ಇಂಗ್ಲೆಂಡ್ ನ ಪುಟ್ಟಹಳ್ಳಿಯೊಂದರಲ್ಲಿ ಜನಿಸಿದ ಈತನ ತಾಯಿ ಎಲ್ಲಾಮೇ, ತಂದೆ ಎರಿಕ್ ಎಟ್ಕಿನ್ಸನ್ ಫಾರಂ ಹೌಸ್ ಮಾಲೀಕನಾದ ಎರಿಕ್ ಗೆ, ರುಪರ್ಟ್, ರೋಡ್ನಿ ಎಂಬ ಗಂಡುಮಕ್ಕಳ ನಂತರ ಹುಟ್ಟಿದವನೇ ರೋವನ್. ನ್ಯೂ ಕಾಷಲ್ ಎಂಬ ನಗರದಲ್ಲಿ ಶಿಕ್ಷಣ ಪೂರೈಸಿದ ನಂತರದಲ್ಲಿ ಪ್ರತಿಷ್ಠಿತ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ 1975 ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದು ನಂತರ ಅಲ್ಲಿಯೇ ಮಾಸ್ಟರ್ ಡಿಗ್ರಿ ಪಡೆದ ‘ರೋ’ವಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ನಟನೆಯಲ್ಲಿ ಆಸಕ್ತಿ.
ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಓದುತ್ತಿರುವಾಗಲೇ ‘ಆಕ್ಸ್ ಫರ್ಡ್ ಯೂನಿವರ್ಸಿಟಿ ಡ್ರಾಮಾ ಕ್ಲಬ್’ , ‘ಆಕ್ಸ್ ಫರ್ಡ್ ರಿವ್ಯೂ’, ‘ಎಕ್ಸ್ ಪೆರಿಮೆಂಟಲ್ ಥಿಯೇಟರ್ ಕ್ಲಬ್’ ಗಳಲ್ಲಿ ನಟಿಸುತ್ತಿದ್ದ. ಎಂಜಿನಿಯರಿಂಗ್ ಪದವಿ ಪಡೆದು ನಿರುದ್ಯೋಗಿಯಾಗಿ ಕಷ್ಟದ ದಿನಗಳಲ್ಲಿದ್ದಾಗ ಹೊಟ್ಟೆಪಾಡಿಗಾಗಿ ಬೃಹತ್ ಲಾರಿ ಡ್ರೈವರ್ ಚಾಲಕನ ಲೈಸೆನ್ಸ್ ಸಹ ಪಡೆದು ದುಡಿಯುತ್ತಿದ್ದ. ಸಣ್ಣಪುಟ್ಟ ನಾಟಕಗಳಲ್ಲಿ ಪಾತ್ರ ವಹಿಸುತ್ತ, ಟಿ.ವಿ. ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಅಂಗಲಾಚುತ್ತಿದ್ದ. ಇದೇ ಸಂದರ್ಭದಲ್ಲಿ ‘ರೋ’ನಿಗೆ ಒಂದೊಮ್ಮೆ ರಂಗ ನಿರ್ದೇಶಕ, ಸಿನೆಮಾ ಕಥಾಲೇಖಕ ರಿಚರ್ಡ್ ಕರ್ಟಿಸ್ ರ ಪರಿಚಯವಾಗುತ್ತದೆ. ಅವರ ಗರಡಿಯಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ‘ಸೈ’ ಎನಿಸಿಕೊಂಡ. ಅವರೊಂದಿಗೆ ಸಹ ಕಥಾ ಲೇಖಕನಾಗಿ, ಕೆಲವು ಹಾಸ್ಯ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ.
ಟಿ.ವಿ. ಷೋ: 1979ರಲ್ಲಿ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದ ಟಿ.ವಿ. ಧಾರವಾಹಿ ‘Not the nine ‘o’ clock news ‘(ನಾಟ್ ದಿ ನೈನ್ ಓ ಕ್ಲಾಕ್ ನ್ಯೂಸ್) ಸರಣಿಯು ‘ರೋ’ನನ್ನು ಖ್ಯಾತಿಯ ಶಿಖರಕ್ಕೆ ಕೊಂಡೊಯ್ಯಿತು. ಈ ನಾಟಕ ಸರಣಿಯು 1980ರಲ್ಲಿ ಲಘು ಪ್ರಹಸನ ನಾಟಕ ವಿಭಾಗದಲ್ಲಿ ‘ಎಮ್ಮಿ ಇಂಟರ್ ನ್ಯಾಷನಲ್ ಪ್ರಶಸ್ತಿ’ ಗೆ ಭಾಜನವಾಯಿತು. ತದನಂತರದಲ್ಲಿ ಈ ನಾಟಕದ ಸರಣಿಯ ಜನಮೆಚ್ಚುಗೆಯ ದ್ಯೋತಕವಾಗಿ ಬಿಬಿಸಿ ಯು ಅವರನ್ನು ‘ವರ್ಷದ ವ್ಯಕ್ತಿ’ಯಾಗಿ ಆಯ್ಕೆ ಮಾಡಿತು. ಇಲ್ಲಿಂದ ‘ರೋ’ ಎಂದೂ ಹಿಂತಿರುಗಿ ನೋಡಲಿಲ್ಲ. ಟಿ.ವಿ, ಸಿನಿಮಾಗಳು ಅವರನ್ನು ಬರಸೆಳೆದವು.
ಅವರು ನಟಿಸಿದ, ಹೆಸರಿಸಬಹುದಾದ ಕೆಲವು ಚಿತ್ರಗಳೆಂದರೆ Dead on Time’ (1983), Never Say never again (1983), The tall guy (1989), Pleasure at her majestry (1986) ಅತೀ ಹೆಚ್ಚು ಜನಮನ್ನಣೆ ಗಳಿಸಿದ ಟಿ.ವಿ. ಸೀರಿಯಲ್ ಗಳೆಂದರೆ Black Adder” (1983), Funny Business (1992) ಇನ್ನೂ ಮುಂತಾದವು.
ಮಿ. ಬೀನ್ ಸ್ಟೋರಿ: ಒಬ್ಬ ವಯಸ್ಕ ಮನುಷ್ಯನ ದೇಹದಲ್ಲಿ ಒಂದು ಪುಟ್ಟ ಮಗುವಿನ ಮನಸ್ಸು ಪರಾಕಾಯ ಪ್ರವೇಶ ಮಾಡಿಬಿಟ್ಟರೆ… !! ಹೇಗಿರಬಹುದು ? ಎಂಬ ಒಂದು ಸಾಲಿನ ಕಥೆಯ ಎಳೆ ಒಬ್ಬ ಪ್ರತಿಭಾವಂತ ನಿರ್ದೇಶಕನ ತಲೆಯಲ್ಲಿ ಹೊಕ್ಕು, ಒಂದೇ ಸಾಲಿನ ಕಥೆಯ ಐಡಿಯಾಗೆ ಜೀವ ತುಂಬಿದಾಗ ಹೊರಬಂದದ್ದೇ ಇಂದಿನ ಮಿ.ಬೀನ್. 1990ರಲ್ಲಿ ಬ್ರಿಟಿಷ್ ಟೆಲಿವಿಷನ್ ನಲ್ಲಿ ಅದ್ಭುತ ದಾಖಲೆ ನಿರ್ಮಿಸಿದ ಕಾಮಿಡಿ ಷೋ. ಇಂದು ವಿಶ್ವ ಪ್ರಸಿದ್ಧಿಗೊಂಡಿದೆ.
ಈ ಕಥೆಯ ಕಥಾನಾಯಕನಿಗೆ ಅತ್ಯಂತ ಸರಳವೆನಿಸುವ, ಕರೆಯಲು, ನೆನಪಿಟ್ಟುಕೊಳ್ಳಲು ಸುಲಭವೆನಿಸುವ ಯಾವುದಾದರೂ ತರಕಾರಿಯ ಹೆಸರನ್ನು ಇಡಬಹುದೆಂಬ ಚರ್ಚೆಯಲ್ಲಿ ಮಿ.ಕ್ಯಾರೆಟ್, ಮಿ.ವೈಟ್, ಮಿ.ಕಾಲಿಫ್ಲವರ್ ಇತ್ಯಾದಿ ಹೆಸರುಗಳು ತೇಲಿ ಬಂದು ಅಂತಿಮವಾಗಿ ‘ಮಿ.ಬೀನ್’ ಹೆಸರು ಆಯ್ಕೆಗೊಂಡಿತ್ತು. ಈ ಪಾತ್ರಕ್ಕೆ ಜೀವ ತುಂಬುವ, ಭರವಸೆಯ ನಟನಾಗಿ ‘ರೋ’ ಹೆಸರು ಸಹ ಅಂತಿಮಗೊಂಡಿತ್ತು. ಮಿ.ಬೀನ್ ಪಾತ್ರ ಮತ್ತು ಪಾತ್ರಧಾರಿ ದೃಶ್ಯ ಮಾಧ್ಯಮವಾದ ದೂರದರ್ಶನದಲ್ಲಿ ಪವಾಡವೆನಿಸುವ ರೀತಿಯಲ್ಲಿ ಒಂದು ಹೊಸ ಸಂಚಲನವನ್ನೇ ಸೃಷ್ಠಿಸಿಬಿಟ್ಟಿತು. ಇಂದು ಮಿ.ಬೀನ್ ವಿಶ್ವ ಪ್ರಸಿದ್ಧರು.
1979ರಲ್ಲಿ ಮೊದಲ ಬಾರಿಗೆ ಇಂದಿನ ಮಿ.ಬೀನ್ ಶೈಲಿಯ ಪಾತ್ರವನ್ನು ‘Robert Box’ ಎಂಬ ಟೆಲಿ ಧಾರಾವಾಹಿಯಲ್ಲಿ ಪರಿಚಯಿಸಲಾಯಿತು. ಆಗಿನ್ನೂ ಮಿ.ಬೀನ್ ಎಂಬ ಹೆಸರು ನಾಮಕರಣವಾಗಿರಲಿಲ್ಲ. ಮಿ.ಬೀನ್ ಎಂಬ ಟಿ.ವಿ. ಧಾರಾವಾಹಿಯು ಸತತವಾಗಿ 5 ವರ್ಷಗಳ ಕಾಲ ಬ್ರಿಟಿಷ್ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗಿದ್ದಲ್ಲದೇ ಸುಮಾರು 22 ಮಿಲಿಯನ್ ಡಾಲರ್ ಬಂಡವಾಳದಲ್ಲಿ ತಯಾರಾದ ‘ಮಿ.ಬೀನ್’ ಮತ್ತು 25 ಮಿಲಿಯನ್ ಡಾಲರ್ ಸುರಿದು ನಿರ್ಮಿಸಿದ ‘ಮಿ.ಬೀನ್ಸ್ ಹಾಲಿಡೇ’ ಎಂಬ ಚಲನಚಿತ್ರಗಳು ಕ್ರಮವಾಗಿ 230 ಮಿಲಿಯನ್ ಮತ್ತು 250 ಮಿಲಿಯನ್ ಡಾಲರ್ ಹಣವನ್ನು ಗಳಿಸಿಕೊಟ್ಟವು.
ಭಾರತದ ಅಳಿಯ: ಈ ಮಿ.ಬೀನ್ ನಮ್ಮ ದೇಶದ ಅಳಿಯ. ಕಾರಣ 1990ರಲ್ಲಿ ಭಾರತೀಯ ಸಂಜಾತೆಯಾದ ಒಬ್ಬ ಮೇಕಪ್ ಕಲಾವಿದೆ ಸುನೇತ್ರಾ ಶಾಸ್ತ್ರಿಯವರೊಂದಿಗೆ ವಿವಾಹವಾದ ‘ರೋ’ ದಂಪತಿಗಳಿಗೆ 1993ರಲ್ಲಿ ‘ಬೆಂಜಮಿನ್’ ಎಂಬ ಮಗನೂ, 1995ರಲ್ಲಿ ‘ಲಿಲಿ’ ಎಂಬ ಮಗಳೂ ಜನಿಸಿದರು. ವೇಗದ ಕಾರುಗಳನ್ನು ಅತಿಯಾಗಿ ಪ್ರೀತಿಸುವ ‘ರೋ’ನ ಸಂಗ್ರಹದಲ್ಲಿ ಅತ್ಯಂತ ಬೆಲೆಬಾಳುವ ಪ್ರಸಿದ್ಧ ಕಂಪನಿಯ ಕಾರುಗಳಿವೆ.
ಅವುಗಳಲ್ಲಿ ಆಸ್ಟಿನ್ ಮಾರ್ಟಿನ್, ವಿಂಟೇಜ್ ಇತ್ಯಾದಿ ಕಂಪನಿಯ ಕಾರುಗಳ ಒಡೆಯನೀತ. ಬ್ರಿಟಿಷ್ ಕಾರ್ ಮ್ಯಾಗಝೀನ್ ಗಳಿಗೆ ವೈವಿಧ್ಯಮಯ ಲೇಖನಗಳನ್ನು ಬರೆಯುವ ಹವ್ಯಾಸವುಳ್ಳ ‘ರೋ’ ತಾನು ನಟಿಸಿದ ‘ಜಾನಿ ಇಂಗ್ಲೀಷ್’ (2003) ಚಿತ್ರದಲ್ಲಿ ತನ್ನ ಸ್ವಂತ ‘ಆಸ್ಟಿನ್ ಮಾರ್ಟಿನ್ ಕಾರನ್ನೇ ಬಳಸಿದ. ಸುದ್ಧಿ ಮಾಧ್ಯಮಗಳಿಂದ ಸದಾ ದೂರವಿರಲು ಬಯಸುವ ಸಂಕೋಚ ಪ್ರವೃತ್ತಿಯ ‘ರೋ’ವಿಗೆ 2013ರಲ್ಲಿ ಬ್ರಿಟಿಷ್ ಎಂಪ್ಟೆರ್ (ಸಿಬಿಇ) ದೊರಕಿದೆ. ನಾಟಕ, ಸಿನಿಮಾ ಮತ್ತು ಸಮಾಜಸೇವೆಗಾಗಿ ವಿಕ್ಟೋರಿಯಾ ರಾಣಿಯ ಹುಟ್ಟುಹಬ್ಬದಂದು ವಿಶೇಷ ಸನ್ಮಾನ, ಪುರಸ್ಕಾರಗಳನ್ನು ಪಡೆದಿದ್ದಾರೆ.
ಒಂದು ಕಾಲದಲ್ಲಿ ಜೀವನ ನಿರ್ವಹಣೆಗೆ ಮಾಸ್ಟರ್ ಡಿಗ್ರಿ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರನಾದ ‘ರೋ’ ಜೀವನ ಚಕ್ರದಲ್ಲಿ ಹಲವು ಏಳುಬೀಳುಗಳನ್ನು ಕಂಡ ಈ ಅದ್ಭುತ ಹಾಸ್ಯ ನಟ. ಸುಖಿ ಸಂಸಾರದ ಯಜಮಾನನಾದ ‘ಮಿ. ಬೀನ್’ ಕಾಮಿಡಿ ಶೋಗಳನ್ನು ನೋಡಿ ಮೆಚ್ಚಿಕೊಳ್ಳುವ ನಮ್ಮ ಮಕ್ಕಳು ಒಮ್ಮೆ ಇವರ ಜೀವನ ಕಥನವನ್ನು ಓದಿ ಸ್ಫೂರ್ತಿ ಪಡೆಯಬಹುದಾಗಿದೆ. ಇಂದು 150 ಮಿಲಿಯನ್ ಡಾಲರ್ ಆಸ್ತಿಯ ಒಡೆಯ. ಪದವಿ ಮತ್ತು ಪ್ರತಿಭೆಗಳ ಸಂಗಮವಾದ ‘ಮಿ. ಬೀನ್’ನ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ಹಾಸ್ಯ ಪಾತ್ರಗಳಲ್ಲಿ ಬದುಕು ಕಂಡುಕೊಳ್ಳುತ್ತಿರುವ ಎಲ್ಲರಿಗೂ ‘ಮಿ.ಬೀನ್’ ಬೆಳಕಾಗಿರಬಲ್ಲರು.
ಲೇಖನ: ಅನಿಲಕುಮಾರ್ ಹೆಚ್.ಶೆಟ್ಟರ್