* ಸರಯೂ
ಮಹಿಳೆಯರಲ್ಲಿ ಬೊಜ್ಜು ಸಂತಾನೋತ್ಪತ್ತಿಗೆ ಸಮಸ್ಯೆಯಾಗುತ್ತಿದೆ. ಬೊಜ್ಜಿನಿಂದ ಪಿಸಿಒಡಿ, ಥೈರಾಯ್್ಡಮುಂತಾದ ಸಮಸ್ಯೆಗಳು ಮಹಿಳೆಯರನ್ನು ಎಡಬಿಡದೆ ಕಾಡುತ್ತಿದೆ. ಈ ಕಾರಣಕ್ಕೆ ಮಕ್ಕಳಾಗದೆ, ಬಂಜೆ ಎಂಬ ಪಟ್ಟ ಮಹಿಳೆಗೆ. ಹಾಗಿದ್ದರೆ ಈ ಬೊಜ್ಜನ್ನು ತಡೆಗಟ್ಟವುದು ಹೇಗೆ? ಬೇರಿಯಾಟ್ರಿಕ್ ಸರ್ಜನ್ ಎಂದೇ ಖ್ಯಾತರಾದ ಬೆಂಗಳೂರಿನ ಗುಣಶೀಲ ಆಸ್ಪತ್ರೆಯ ಡಾ. ರಾಜಶೇಖರ್ ನಾಯಕ್ ಈ ಕುರಿತು ಇಲ್ಲಿ ವಿವರಿಸಿದ್ದಾರೆ.
***
*ಬೊಜ್ಜಿನಿಂದ ಬರುವ ಸಮಸ್ಯೆಗಳು
ವ್ಯಕ್ತಿಯ ದೇಹದ್ರವ್ಯ ಸೂಚ್ಯಂಕವು 37ನ್ನು ಮೀರಿದಾಗ ಅಪಾಯಕಾರಿ ಬೊಜ್ಜು ಉಂಟಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ದೇಹದ್ರವ್ಯ ಸೂಚ್ಯಂಕವು 23-25 ರ ನಡುವೆ ಇರಬೇಕು. ತೀವ್ರ ತೆರನಾದ ಬೊಜ್ಜು ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಹಲವು ವಿಧದ ರೋಗಗಳಿಗೆ ಸುಲಭವಾಗಿ ತುತ್ತಾಗುವಂತೆ ಮಾಡುತ್ತದೆ. ಸಕ್ಕರೆ ಕಾಯಿಲೆ, ಅತಿಯಾದ ರಕ್ತದೊತ್ತಡ, ಅತಿಯಾದ ಕೊಲೆಸ್ಟ್ರಾಲ್ ಮಟ್ಟ, ಲಿವರಿನಲ್ಲಿ ಕೊಬ್ಬಿನ ಸಂಗ್ರಹ, ನಿದ್ರೆಯ ತೊಂದರೆ, ಖಿನ್ನತೆ, ಸಂದಿವಾತ ಇವೇ ಮುಂತಾದ ರೋಗಗಳು ಭಾದಿಸುತ್ತವೆ. ಅತಿಯಾದ ಕೊಬ್ಬಿನಿಂದ ದೇಹದ ಎಲ್ಲ ಅಂಗಾಂಗಗಳಿಗೂ ಹಾನಿಯುಂಟಾಗುತ್ತದೆ. ಬಂಜೆತನವೂ ಕಾಡಬಹುದು. ಆದ್ದರಿಂದ ಅತಿಯಾದ ಬೊಜ್ಜನ್ನು ರೋಗವೆಂದೇ ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ಚಿಕಿತ್ಸೆಯ ಅಗತ್ಯವಿದೆ.
*ಬೊಜ್ಜು ದೇಹಕ್ಕೆ ಕಾರಣವೇನು?
ನಗರೀಕರಣ, ಸುಧಾರಿತ ಜೀವನ ಪದ್ಧತಿ, ಆರಾಮ ಜೀವನ, ಅತಿಯಾಗಿ ತಿನ್ನುವ ಅಭ್ಯಾಸ, ವ್ಯಾಯಾಮ ರಹಿತ ಜೀವನ, ಮುಂತಾದ ಕಾರಣಗಳಿಂದ ದೇಶದಲ್ಲಿ ಬೊಜ್ಜಿನ ಪ್ರಮಾಣವು ಗಂಭೀರ ರೂಪದಲ್ಲಿ ಜಾಸ್ತಿಯಾಗುತ್ತಿದೆ. ವಾಂಶವಾಹಿನಿ ಮೂಲಕವೂ ಬೊಜ್ಜು ಕಾಣಿಸುತ್ತದೆ. ಭಾರತವು ಈಗ ಅತಿ ಹೆಚ್ಚು ಸಂಖ್ಯೆಯ ಸಂತಾನೋತ್ಪತ್ತಿ ವಯಸ್ಸಿನ ಯುವ ಸಮುದಾಯವನ್ನು ಹೊಂದಿದ್ದು, ಬೊಜ್ಜು ಸಂತಾನೋತ್ಪತ್ತಿಯ ಮೇಲೂ ಪರಿಣಾಮ ಬೀರುತ್ತಿದೆ.
* ಬಂಜೆತನಕ್ಕೆ ಹೇಗೆ ಕಾರಣವಾಗುತ್ತದೆ?
ಪಾಲಿಸಿಸ್ಟಿಕ್ ಅಂಡಾಶಯದ ಸಮಸ್ಯೆಯ ರೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಹಿಳೆಯರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಪಾಲಿಸಿಸ್ಟಿಕ್ ಅಂಡಾಶಯ ಸಮಸ್ಯೆಯು ಬಂಜೆತನದ ಸಾಮಾನ್ಯ ಕಾರಣವಾಗಿದ್ದು, ತೂಕವನ್ನು ಇಳಿಸಿಕೊಳ್ಳುವುದೊಂದೇ ಇದಕ್ಕಿರುವ ಪರಿಣಾಮವಾಗಿದೆ. ಆದರೆ ಈ ಬಗ್ಗೆ ಜಾಗೃತಿಯ ಕೊರತೆಯಿದೆ. ಬೊಜ್ಜನ್ನು ಹೊಂದಿ ಬಂಜೆತನದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಇನ್ಸುಲಿನ್, ಜೀವಕೋಶಗಳ ಇನ್ಸುಲಿನ್ ನಿರೋಧಕ ಗುಣದಿಂದಾಗಿ ಅಸಹಜ ಗ್ಲೂಕೋಸ್ ಸಹಿಷ್ಣುತೆ ಇರುವುದು ಕಂಡುಬಂದಿದೆ. ಬೊಜ್ಜಿರುವ ಮಹಿಳೆಯರಲ್ಲಿ ಟೆಸ್ಟೋಸ್ಟೆರೋನ್ (ಪುರುಷ ಹಾಮೋನು) ನ ಹೆಚ್ಚಳದಿಂದ ಮುಖದ ಮೇಲೆ ಕೂದಲು ಹಾಗೂ ಗುಳ್ಳೆಗಳು ಉಂಟಾಗಬಹುದು. ಹಾಮೋನಿನ ಅಸಮತೋಲನದಿಂದಾಗಿ ಋತುಚಕ್ರವು ಅನಿಯಮಿತವಾಗುವುದಲ್ಲದೇ ಅಂಡಾಣು ಬಿಡುಗಡೆಗೆ ಅಡ್ಡಿಯಾಗಬಹುದು. ಹೀಗಾಗಿ ಗರ್ಭ ಕಟ್ಟುವ ಸಂಭವ ಕಡಿಮೆಯಾಗುತ್ತದೆ. ತೀವ್ರ ಬೊಜ್ಜಿನ ಬಂಜೆತನದ ವ್ಯಕ್ತಿಗಳಿಗೆ ಐವಿಎಫ್ ಚಿಕಿತ್ಸೆ ಕೂಡ ವಿಫಲವಾಗಬಹುದು.
ಈ ವ್ಯಕ್ತಿಗಳು ಔಷಧಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುವುದಿಲ್ಲ. ಬಂಜೆತನ ಸಮಸ್ಯೆಗಳಿಗೆ ಸರ್ಕಾರ ಧನಸಹಾಯ ನೀಡುವ ದೇಶಗಳಲ್ಲಿ ಸಹ 35ಕ್ಕಿಂತ ಹೆಚ್ಚಿನ ದೇಹದ್ರವ್ಯ ಸೂಚ್ಯಂಕ (ಅತಿ ಬೊಜ್ಜು) ಹೊಂದಿರುವ ವ್ಯಕ್ತಿಗಳಿಗೆ ಸಹಾಯವನ್ನು ನಿರಾಕರಿಸಲಾಗುತ್ತದೆ.
್ಝಹಾಗಿದ್ದರೆ ಬಂಜೆತನ ನಿವಾರಣೆ ಹೇಗೆ?
ತೂಕ ಇಳಿಸಿಕೊಳ್ಳುವುದೊಂದೇ ಇದಕ್ಕಿರುವ ಪರಿಹಾರ. ತೀವ್ರತೆರನಾದ ಬೊಜ್ಜಿನ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಬೆರಿಯಾಟ್ರಿಕ್ ಸರ್ಜರಿಯಿಂದ ಈ ಎಲ್ಲ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಬಹುದು. ಈ ಮೂಲಕ ಇನ್ಸುಲಿನ್ ನಿರೋಧಕತೆ ಕಡಿಮೆಯಾಗಿ, ಪುರುಷ ಮತ್ತು ಸ್ತ್ರೀ ಹಾಮೋನು ಪ್ರಮಾಣದಲ್ಲಿ ಸಮತೋಲನವುಂಟಾಗಿ, ನಿಯಮಿತ ಋತುಚಕ್ರ ಹಾಗೂ ಸಹಜ ಅಂಡಾಣು ಬಿಡುಗಡೆ ಉಂಟಾಗುತ್ತದೆ. ಇದರಿಂದ ಸಹಜವಾಗಿ ಗರ್ಭಧರಿಸುವ ಅವಕಾಶವು ಹೆಚ್ಚುತ್ತದೆ. ಒಂದುವೇಳೆ ಸಹಜ ಗರ್ಭಧಾರಣೆ ಸಾಧ್ಯವಾಗದಿದ್ದರೂ, ವೈದ್ಯಕೀಯ ಚಿಕಿತ್ಸೆಗಳ (ಐ.ವಿ.ಎಫ್) ಸಹಾಯದಿಂದ ಗರ್ಭಧರಿಸುವ ಸಂಭಾವನೀಯತೆ ಜಾಸ್ತಿಯಾಗುತ್ತದೆ. ಕೆಲವು ಬಾರಿ ಅತಿಯಾದ ಬೊಜ್ಜಿರುವವರಿಗೆ ಐವಿಎಫ್ ಕೂಡ ಸಾಧ್ಯವಾಗದೇ ಹೋಗಬಹುದು. ಅಂಥವರು ಅನಿವಾರ್ಯವಾಗಿ ಬೊಜ್ಜಿಳಿಸಿಕೊಳ್ಳಲೇ ಬೇಕಾಗುತ್ತದೆ.
ಬೇರಿಯಾಟ್ರಿಕ್ ಸರ್ಜರಿ ನಂತರ ಅತಿ ಬೊಜ್ಜಿನ ವ್ಯಕ್ತಿಗಳು ಗರ್ಭಧರಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆಯೂ ಎಚ್ಚರ ವಹಿಸಬೇಕಾಗುತ್ತದೆ. ಗರ್ಭಧಾರಣೆ ಸಮಯದಲ್ಲಿ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಉಂಟಾಗುವ ಸಾಧ್ಯತೆ ಜಾಸ್ತಿ. ಇದರಿಂದ ಕ್ಲಿಷ್ಟ ಪರಿಸ್ಥಿತಿ ಉಂಟಾಗಿ ತಾಯಿ ಮತ್ತು ಮಗು ಇಬ್ಬರಿಗೂ ಅಪಾಯಕಾರಿಯಾಗಬಹುದು. ಗರ್ಭಧಾರಣೆಯ ಸಮಯದಲ್ಲಿ ಪದೇಪದೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಹೆಚ್ಚಿನ ಕಾಳಜಿ, ಚಿಕಿತ್ಸೆ, ಜಾಸ್ತಿ ಔಷಧ ಸೇವನೆ, ಆಸ್ಪತ್ರೆಗೆ ದಾಖಲು ಮಾಡಬೇಕಾಗಿಯೂ ಬರಬಹುದು. ಇವೆಲ್ಲವೂ ವೈದ್ಯರು ಮತ್ತು ರೋಗಿ ಇಬ್ಬರಿಗೂ ಆತಂಕದ ಕ್ಷಣಗಳನ್ನು ತಂದೊಡ್ಡುತ್ತವೆ. ಅವಧಿಗೆ ಮುನ್ನ ಹೆರಿಗೆ, ಹೆರಿಗೆ ಮುನ್ನ ಮತ್ತು ನಂತರದ ರಕ್ತಸ್ರಾವ, ರಕ್ತ ನೀಡಬೇಕಾದ ಸಂದರ್ಭಗಳು ಕೂಡ ಇವರಲ್ಲಿ ಜಾಸ್ತಿ.
್ಝಬೊಜ್ಜಿರುವ ಮತ್ತು ಸಂತಾನ ಅಪೇಕ್ಷಿಸುವವರಿಗೆ ನೀಡುವ ಸಾಮಾನ್ಯ ಮಾರ್ಗಸೂಚಿ ಏನು?
ಈ ಘಟ್ಟ ಅತಿ ಮುಖ್ಯವಾದದ್ದು. ಸಾಮಾನ್ಯವಾಗಿ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶು ಕೂಡ ವಂಶವಾಹಿ ನ್ಯೂನತೆಗೆ ಈಡಾಗಬಹುದು. ಅತಿಯಾದ ಬೊಜ್ಜನ್ನು ಹೊಂದಿರುವ ಹೆಚ್ಚಿನ ಮಹಿಳೆಯರು ಬಂಜೆತನದಿಂದ ಬಳಲುತ್ತಿರುವುದನ್ನು ನಾವು ಕಾಣುತ್ತೇವೆ. ಅವರಿಗೆ ಮೊದಲು ವೈದ್ಯಕೀಯ ನಿಗಾದಡಿಯಲ್ಲಿ ತೂಕವನ್ನು ಇಳಿಸಲು ಚಿಕಿತ್ಸೆಯ ಅಗತ್ಯತೆ ಬಗ್ಗೆ ವಿವರಿಸುತ್ತೇವೆ. ಜೀವನಶೈಲಿ, ಆಹಾರ ಪದ್ಧತಿಗಳಿಂದ ಅವರು ತೂಕವನ್ನು ಇಳಿಸುವಂತೆ ಸಲಹೆ ನೀಡುತ್ತೇವೆ. ಎಲ್ಲರಿಗೂ ಬೇರಿಯಾಟ್ರಿಕ್ ಸರ್ಜರಿ ಹೇಳುವುದಿಲ್ಲ. ಯಾಕೆಂದರೆ ಇದು ಎಲ್ಲರಿಗೂ ಎಟುಕುವಂಥದ್ದಲ್ಲ. ಇನ್ಯಾವುದೂ ಮಾರ್ಗ ಇಲ್ಲವೆಂದಾದಾಗ ಮತ್ರ, ಕಡೆಯ ಮಾರ್ಗವಾಗಿ ಇದನ್ನು ಮಾಡಿಸಬಹುದು. ಬೇರಿಯಾಟ್ರಿಕ್ ಚಿಕಿತ್ಸೆಯ ನಂತರ ಕನಿಷ್ಠ 12 ತಿಂಗಳವರೆಗೆ ಗರ್ಭಧರಿಸದಂತೆ ಸೂಚಿಸಲಾಗುವುದು. ಒಮ್ಮೆ ಅವರು ಗರ್ಭಧರಿಸಿದ ಮೇಲೆ ಕೂಡ ಬೆರಿಯಾಟ್ರಿಕ್ ತಂಡ ಮತ್ತು ಪ್ರಸೂತಿ ತಜ್ಞರು ಅವರ ಮೇಲೆ ಸತತ ನಿಗಾ ಇಡ ಬೇಕಾಗುತ್ತದೆ.
ಸಂಪರ್ಕಕ್ಕೆ- 080-26673585
***
ಸ್ಥೂಲಕಾಯ ನಿಯಂತ್ರಣ: ಕೆಲವು ಸರಳ ಉಪಾಯಗಳು
*ವ್ಯಾಯಾಮದಿಂದ ಜೀರ್ಣಕ್ರಿಯೆಯ ವೇಗವು ತೀವ್ರಗೊಳ್ಳುತ್ತದೆ. ಆದ್ದರಿಂದ ವ್ಯಾಯಾಮ ಮಾಡುವುದು ಬೊಜ್ಜನ್ನು ಕರಗಿಸಲು ಅತ್ಯಂತ ಪರಿಣಾಮಕಾರಿ ವಿಧಾನ. ಯಾವುದೇ ರೀತಿಯ ವ್ಯಾಯಾಮಗಳನ್ನು, ಉದಾಹರಣೆಗೆ, ನಡೆಯುವುದು, ಈಜುವುದು, ಸೈಕ್ಲಿಂಗ್, ಫೂಟ್ಬಾಲ್ ಆಡುವುದು ಅಥವಾ ಯೋಗಾಭ್ಯಾಸವನ್ನು ಪ್ರತಿದಿನ 30-35 ನಿಮಿಷ ಮಾಡುವುದರಿಂದ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುವುದಲ್ಲದೇ ಹೃದಯಸಂಬಂಧಿ ತೊಂದರೆಗಳು, ಸಕ್ಕರೆ ಕಾಯಿಲೆ ಮತ್ತು ಅರ್ಥರೈಟಿಸ್ನಂತಹ ಗಂಭೀರ ಕಾಯಿಲೆಗಳು ಉಂಟಾಗುವ ಅಪಾಯ ಕಡಿಮೆಯಾಗುತ್ತದೆ.
*ಪ್ರತಿ ದಿನವೂ ನಿಗದಿತ ಸಮಯದಲ್ಲಿ ಊಟ ಮಾಡಿರಿ ಮತ್ತು ಸಮತೋಲಿತ ಆಹಾರ ಸೇವಿಸಿ. ಆಹಾರ ಸೇವೆನೆಯ ಮೇಲೆ ನಿಯಂತ್ರಣವಿಲ್ಲದಿರುವುದರಿಂದಲೂ ತೂಕವು ಹೆಚ್ಚುತ್ತದೆ.
*ನಿಮ್ಮ ನಿತ್ಯದ ಆಹಾರದಲ್ಲಿ ಹೆಚ್ಚುಹೆಚ್ಚು ತರಕಾರಿ, ಹಣ್ಣು ಮತ್ತು ಇಡೀ ಧಾನ್ಯಗಳನ್ನು ಬಳಸಿ.
*ಸಾಕಷ್ಟು ನೀರು ಕುಡಿಯಿರಿ. ಊಟದ ನಡುವೆ ಹಸಿವಾದಲ್ಲಿ ರಸಭರಿತ ಹಣ್ಣುಗಳನ್ನು ಅಥವಾ ಹಣ್ಣಿನ ರಸವನ್ನು ಸೇವಿಸಿ, ಉದಾಹರಣೆಗೆ, ನಿಂಬೆ, ಕಿತ್ತಲೆ, ಕ್ಯಾರೆಟ್. ಗ್ರೀನ್ ಸಲಾಡ್ ಕೂಡ ಆರೋಗ್ಯಕರವಾಗಿದ್ದು, ಹೊಟ್ಟೆ ತುಂಬಿದ ಅನುಭೂತಿಯನ್ನು ನೀಡುತ್ತದೆ.
*ಸಕ್ಕರೆಯ ಸೇವನೆಯನ್ನು ಆದಷ್ಟೂ ತ್ಯಜಿಸಿ ಅಥವಾ ಕಡಿಮೆ ಮಾಡಿ. ದೇಹದಲ್ಲಿ ಹೆಚ್ಚುವರಿ ಕ್ಯಾಲೋರಿಯನ್ನು ಉಂಟುಮಾಡುವ ಸಿಹಿ ಪದಾರ್ಥಗಳು, ಚಾಕೊಲೇಟ್, ಪುಡ್ಡಿಂಗ್, ಕೇಕ್ಗಳನ್ನು ವರ್ಜಿಸಿ. ಅತಿಯಾದ ಕೊಬ್ಬನ್ನು ಹೊಂದಿರುವ ಹಾಲಿನ ಉತ್ಪನ್ನಗಳಾದ ಚೀಸ್ ಮತ್ತು ಬೆಣ್ಣೆಯನ್ನು ಬಳಸದಿರಿ.
* ಕೊನೆಯದಾದ ಮತ್ತು ಪ್ರಮುಖವಾದ ವಿಷಯವೆಂದರೆ, ಯಾವಾಗಲೂ ಸಂತೋಷದಿಂದಿರಲು ಪ್ರಯತ್ನಿಸಿ, ಮಾನಸಿಕವಾಗಿ ಸದೃಢವಾಗಿರಿ ಮತ್ತು ಧನಾತ್ಮಕ ಚಿಂತನೆಯಿಂದ ಒಳ್ಳೆಯ ಫಲಿತಾಂಶ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ.