ಜಿನೀವಾ: ಪ್ರಪಂಚದಲ್ಲಿ ಮೂವರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದ್ದು, ಬೊಜ್ಜಿನ ಸಮಸ್ಯೆ ನಿವಾರಿಸಲು ಸ್ವಸ್ಥ ಆಹಾರ ಪದ್ಧತಿ ಕುರಿತು ಅರಿವು ಮೂಡಿಸಬೇಕು ಎಂದು ಡಬ್ಲ್ಯೂಎಚ್ಒ ತಿಳಿಸಿದೆ.
ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಮಾನದಂಡದ ಪ್ರಕಾರ ಒಬ್ಬ ಮನುಷ್ಯನ ಬಿಎಂಐ 30 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಬೊಜ್ಜು ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ 37% ಪುರುಷರು ಮತ್ತು 38% ಮಹಿಳೆಯರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಡಬ್ಲ್ಯೂಎಚ್ಒ ತನ್ನ ವರದಿಯಲ್ಲಿ ತಿಳಿಸಿದೆ.
1980 ರಿಂದ 2013ರ ನಡುವೆ ಬೊಜ್ಜಿನಿಂದ ಬಳಲುತ್ತಿರುವವರ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಪುರುಷರಲ್ಲಿ ಬೊಜ್ಜಿನ ಸಮಸ್ಯೆಯ ಉಳ್ಳವರ ಪ್ರಮಾಣ 28.8% ದಿಂದ 36.9 %ಕ್ಕೆ ಏರಿಕೆಯಾಗಿದೆ. ಮಹಿಳೆಯರಲ್ಲಿ ಈ ಪ್ರಮಾಣ 29.8% ದಿಂದ 38% ಕ್ಕೆ ಏರಿಕೆಯಾಗಿದೆ. ಈ ಪ್ರವೃತ್ತಿ ಮುಂದುವರೆದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಬೊಜ್ಜಿನ ಸಮಸ್ಯೆ ಏರಿಕೆಯಾಗುತ್ತಿರುವ ಅನೇಕ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ. ಮುಖ್ಯವಾಗಿ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೆಲವು ವಿಧದ ಕ್ಯಾನ್ಸರ್ಗಳು ಕಂಡು ಬರುತ್ತಿವೆ. ಹಾಗಾಗಿ ಸರ್ಕಾರಗಳು ತಮ್ಮ ರಾಷ್ಟ್ರದಲ್ಲಿ ಬೊಜ್ಜಿನ ಪ್ರಮಾಣ ಕಡಿಮೆ ಮಾಡಲು ಆಹಾರ ಪಾಲಿಸಿಗಳಲ್ಲಿ ಬದಲಾವಣೆ ತರಬೇಕು ಎಂದು ಡಬ್ಲ್ಯೂಎಚ್ಒ ಅಭಿಪ್ರಾಯ ಪಟ್ಟಿದೆ.