ಅಬು ಧಾಬಿ: ಆಗಸ್ಟ್ ೧೬-೧೭ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸ್ವಾಗತಕ್ಕೆ ಇಲ್ಲಿಯವರೆಗೂ ೪೮ ಸಾವಿರ ಭಾರತೀಯರು ನೊಂದಾಯಿಸಿಕೊಂಡಿದ್ದಾರೆ.
ಆಗಸ್ಟ್ ೧೭ ರಂದು ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಈ ಸ್ವಾಗತ ಕಾರ್ಯಕ್ರಮ ನಡೆಯಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಅಧಿಕೃತ ಅಂತರ್ಜಾಲ ತಾಣವಾದ www.namoindubai.ae ದಲ್ಲಿ ಬುಧವಾರ ಸಂಜೆಯವರೆಗೆ ೪೮ ಸಾವಿರ ಅನಿವಾಸಿ ಭಾರತೀಯರು ಈ ಕಾರ್ಯಕ್ರಮಕ್ಕೆ ನೊಂದಣಿ ಮಾಡಿಕೊಂಡಿದ್ದಾರೆ.
“ನೊಂದಣಿಗೆ ಅಂತರ್ಜಾಲ ತೆರೆದಾಕ್ಷಣ ಆಗಲೇ ೧೫೦೦೦ ಮನವಿಗಳಿದ್ದವು. ಬುಧವಾರದ ಮಧ್ಯಾಹ್ನದ ಹೊತ್ತಿಗೆ ಇದು ತೀವ್ರವಾಗಿ ೪೨೦೦೦ ನೊಂದಣಿಗಳು ಯಶಸ್ವಿಯಾದವು” ಎಂದು ಕಾರ್ಯಕ್ರಮದ ಆಯೋಜಕ ಮಂಡಲಿಯ ಸದಸ್ಯ ಬಿ ಆರ್ ಶೆಟ್ಟಿ ತಿಳಿಸಿದ್ದಾರೆ.
ಇದು ೫೦೦೦೦ ದವರೆಗೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಈಗ ದುಬೈನಲ್ಲಿ ತಾಪಾಂಶ ೪೨ ಡಿಗ್ರಿ ಸೆಲ್ಷಿಯಸ್ ಗಿಂತಲೂ ಹೆಚ್ಚಿದ್ದು, ಮೈದಾನವನ್ನು ಹವಾ ನಿಯಂತ್ರಿತಗೊಳಿಸಲು ಸಜ್ಜು ಮಾಡಲಾಗುತ್ತಿದೆ.
ಈ ಸ್ವಾಗತದ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನೆರೆದವರಿಗೆ ಉಚಿತ ಊಟ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ.