– ಶ್ರೀಹರ್ಷ ಸಾಲಿಮಠ
ಪಂಚೇಂದ್ರಿಯಗಳು ನಮ್ಮ ಸುತ್ತಮುತ್ತಲಿನ ಭೌತಿಕ ಅರಿವನ್ನು ನಮಗೆ ಮೂಡಿಸುತ್ತವೆ. ಕಣ್ಣು ನೋಡುತ್ತದೆ, ಕಿವಿ ಕೇಳುತ್ತದೆ, ಮೂಗು ವಾಸನೆ ನೋಡುತ್ತದೆ, ನಾಲಗೆ ರುಚಿ ನೋಡುತ್ತದೆ, ಚರ್ಮ ಸ್ಪರ್ಶಜ್ಞಾನವನ್ನು ಕೊಡುತ್ತದೆ. ಇವೆಲ್ಲವುಗಳ ಅರಿವು ನಮಗಾಗಬೇಕಾದರೆ ಆಯಾ ಇಂದ್ರಿಯಗಳಿಂದ ನಮ್ಮ ಮೆದುಳಿಗೆ ಸಂದೇಶ ಹೋಗಬೇಕು. ಮೆದುಳು ಇಂದ್ರಿಯಗಳಿಂದ ಬಂದ ಸಂದೇಶಗಳನ್ನು ಗ್ರಹಿಸಿ ಬೆಳಕು, ಬಣ್ಣ, ನೋವು, ಕಚಗುಳಿ, ಕೆರೆತ, ಘಮ, ಖಾರ, ಹುಳಿ ಇವಷ್ಟೇ ಅಲ್ಲದೆ ಹಸಿವು, ನೀರಡಿಕೆ, ಮಾಂಸಖಂಡಗಳ ನೋವು, ಇತ್ಯಾದಿಗಳನ್ನು ಆಯಾ ಅಂಗಗಳ ಮೂಲಕ ಗ್ರಹಿಸುತ್ತದೆ. ಈ ಅಂಗಗಳಿಂದ ಮೆದುಳಿಗೆ ಸಂದೇಶಗಳನ್ನು ಕಳಿಸುವ ಕೆಲಸವನ್ನು ನರ ಮಂಡಲವು ಮಾಡುತ್ತದೆ. ನರಗಳು ವಿದ್ಯುತ್ ಅಲೆಗಳ ಮೂಲಕ ಇಂದ್ರಿಯಗಳ ಸಂದೇಶವನ್ನು ಮೆದುಳಿಗೆ ತಲುಪಿಸುತ್ತವೆ. ನರಗಳಲ್ಲಿರುವ ಜೀವ ಕೋಶಗಳಿಗೆ “ನ್ಯೂರಾನ್” ಎನ್ನುತ್ತಾರೆ.
ನಮ್ಮ ಮೆದುಳಿನಲ್ಲಿ ಸುಮಾರು ನೂರು ಬಿಲಿಯನ್ ನ್ಯೂರಾನ್ ಗಳಿರಬಹುದೆಂದು ಅಂದಾಜು ಲೆಕ್ಕ ಹಾಕಲಾಗಿದೆ.ನಮ್ಮ ಜ್ಞಾಪಕ ಶಕ್ತಿ, ಯೋಚನಾ ಶಕ್ತಿ ಪ್ರತಿಯೊಂದೂ ನಿಂತಿರುವುದು ಈ ನ್ಯೂರಾನ್ ಗಳ ಮೇಲೆ! ನ್ಯೂರಾನ್ ಗಳು ವಿದ್ಯುತ್ ಅಲೆಗಳ ಮೂಲಕ ತಮ್ಮ ತಮ್ಮ ನಡುವೆ ಸಂಪರ್ಕ ಏರ್ಪಡಿಸಿಕೊಳ್ಳುತ್ತವೆ. ಈ ವಿದ್ಯುತ್ ಅಲೆಗಳನ್ನು ಕೆಲ ಸೂಕ್ಷ್ಮ ಯಂತ್ರಗಳಿಂದ ಅಳೆಯಬಹುದು. ಮೆದುಳಲ್ಲಿ ಹರಿಯುತ್ತಿರುವ ವಿದ್ಯುತ್ ನಲ್ಲಿ ಉಂಟಾಗುವ ವ್ಯತ್ಯಯಗಳನ್ನು ತಾಳೆ ಹಾಕಿ ನೋಡಿ ಮೆದುಳಲ್ಲಿ ಏನಾದರೂ ತೊಂದರೆಗಳಿವೆಯೇ ಎಂದು ಕಂಡುಹಿಡಿಯಬಹುದು. ಈ ಲೆಕ್ಕ ಎಷ್ಟು ಕರಾರುವಾಕ್ಕಾಗಿರುತ್ತದೆಂದರೆ ಮನುಷ್ಯನು ಎಷ್ಟು ವೇಗವಾಗಿ ಯೋಚಿಸಬಲ್ಲ, ನೆನಪಿನ ಶಕ್ತಿ ಎಷ್ಟು ಭದ್ರವಾಗಿದೆ, ನಿದ್ದೆ ಮಾಡುತ್ತಿದ್ದಾನೆಯೇ, ಮೆದುಳಿಗೆ ಯಾವುದಾದರೂ ಖಾಯಿಲೆ ತಗುಲಿದೆಯೇ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು.
ಮೆದುಳನ್ನು ಓದುವ ಈ ಪ್ರಕ್ರಿಯೆಗೆ electroencephalogram ಎನ್ನುತ್ತಾರೆ. ಮೊದಲಿಗೆ ಮೆದುಳನ್ನೋದಬೇಕಾದ ವ್ಯಕ್ತಿಯ ತಲೆಗೆ ರಬ್ಬರ್ ಟೋಪಿಯನ್ನು ಹಾಕಲಾಗುತ್ತದೆ. ರಬ್ಬರ್ ಟೋಪಿಯ ಮೇಲೆ ಮೆದುಳಿನಲ್ಲಿ ಹರಿಯುತ್ತಿರುವ ವಿದ್ಯುತ್ ನ ತರಂಗಾಂತರ, ಅಗಲ, ಆಳಗಳನ್ನು ಅಳೆಯಬಲ್ಲ ಹತ್ತೊಂಬತ್ತು ಸೆನ್ಸರ್ ಗಳನ್ನು ಚುಚ್ಚಲಾಗಿರುತ್ತದೆ. ಹತ್ತರಿಂದ ಮೂವತ್ತು ನಿಮಿಷಗಳ ವರೆಗೆ ಮೆದುಳಿನಲ್ಲಿ ಹರಿಯುವ ವಿದ್ಯುತ್ ನ ಮಾಹಿತಿಯನ್ನು ಓದಲಾಗುತ್ತದೆ. ಈ ಸಮಯದಲ್ಲಿ ಸೆನ್ಸರ್ ಅಳವಡಿಸಲ್ಪಟ್ಟ ವ್ಯಕ್ತಿಗೆ ಕಣ್ಣು ಮುಚ್ಚುವುದು, ತೆರೆಯುವುದು, ಓದವುದು, ಸರಳ ಗಣಿತದ ಸಮಸ್ಯೆಗಳನ್ನು ಬಿಡಿಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಲು ಹೇಳಲಾಗುತ್ತದೆ. ಸೆನ್ಸರ್ ಗಳಿಗೆ ಬರುವ ಮಾಹಿತಿಯನ್ನು ಕಂಪ್ಯೂಟರ್ ಗಳಿಗೆ ಉಣಿಸಲಾಗುತ್ತದೆ.
ಕಂಪ್ಯೂಟರ್ ನಲ್ಲಿ ಮೊದಲೇ ನೂರಾರು ಆರೋಗ್ಯವಂತ ವ್ಯಕ್ತಿಗಳ ಮೆದುಳಿನ ಕಾರ್ಯಪ್ರವೃತ್ತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಇಟ್ಟಿರಲಾಗಿರುತ್ತದೆ. ಹಳೆಯ ಮಾಹಿತಿಯ ಜೊತೆ ಈಗ ಅಳೆಯಲಾದ ವ್ಯಕ್ತಿಯ ಮಾಹಿತಿಯನ್ನು ಕಂಪ್ಯೂಟರ್ ಗಳು ತಾಳೆ ಮಾಡಿ ನೋಡುತ್ತವೆ. ತಾಳೆ ಮಾಡಿ ಬಂದ ಫಲಿತಾಂಶದ ಮೇಲೆ ವ್ಯಕ್ತಿಯ ಮೆದುಳಿನ ಆರೋಗ್ಯವನ್ನು ನಿರ್ಧರಿಸಲಾಗುತ್ತದೆ. ಅನೇಕರಿಗೆ ಅನೇಕ ಮಾನಸಿಕ ರೋಗಗಳು ಮೆದುಳಿನಲ್ಲಿನ ನ್ಯೂನತೆಗಳಿಂದಾಗಿಯೂ ಬರುತ್ತವೆ. ಈ ನ್ಯೂನತೆಗಳಿಗೆ ತಕ್ಕಂತೆ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಮೆದುಳಿನ ವಿದ್ಯುತ್ ಅಲೆಗಳನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿದೆ . ಆಲ್ಪಾ, ಬೀಟಾ, ಗಾಮಾ,ಡೆಲ್ಟಾ, ತೀಟಾ ಎಂದು ಈ ಸ್ಥಿತಿಗಳನ್ನು ಕರೆಯಲಾಗುತ್ತದೆ. ಡೆಲ್ಟಾ ಸ್ಥಿತಿ ಎಂದರೆ ಆಳವಾದ ನಿದ್ದೆಯ ಅಥವಾ ಕೋಮಾಸ್ಥಿತಿ, ತೀಟಾ ಎಂದರೆ ಸಾಮಾನ್ಯ ನಿದ್ದೆಯ, ಕನಸಿನ ಸಮಯದಲ್ಲಿರುವಂತಹ ಸ್ಥಿತಿ, ಆಲ್ಪಾ ಎಂದರೆ ಸಾಮಾನ್ಯವಾದ ಎಚ್ಚರದ ಸ್ಥಿತಿ. ನಾವು ದೈನಂದಿನ ಕೆಲಸಗಳನ್ನು ಮಾಡುವಾಗ ಈ ಸ್ಥಿತಿಯಲ್ಲಿರುತ್ತೇವೆ. ಬೀಟಾ ಸ್ಥಿತಿ ಎಂದರೆ ಯೋಚನೆ ಮಾಡುವುದು, ಲೆಕ್ಕಾಚಾರ ಹಾಕುವುದು ಅಥವಾ ಬಹುತೇಕ ನಮ್ಮ ವೃತ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಈ ಸ್ಥಿತಿಯಲ್ಲಿರುತ್ತೇವೆ. ಇನ್ನು ಗಾಮಾ ಸ್ಥಿತಿಯೆಂದರೆ ಅತಿಯಾದ ಚಿಂತನೆಗಳಿಂದ ಕೂಡಿರುವುದು. ಕೋಪಿಷ್ಠ ಸ್ಥಿತಿಯಲ್ಲಿರುವುದು, ಪರೀಕ್ಷೆ ಬರೆಯುವಾಗ, ಸೂಕ್ಷ್ಮ ಲೆಕ್ಕಾಚಾರದ ಕೆಲಸಗಳನ್ನು ಮಾಡುವಾಗ ಮೆದುಳು ಗಾಮಾ ಸ್ಥಿತಿಯುಲ್ಲಿರುತ್ತದೆ. ಡೆಲ್ಟಾ ಸ್ಥಿತಯಲ್ಲಿ ವಿದ್ಯುತ್ ಸಂವಹನ ತೀರ ಮಂದಸ್ಥಿತಿಯಲ್ಲಿದ್ದರೆ ತೀಟಾ,ಅಲ್ಫಾ,ಬೀಟಾ ಸ್ಥಿತಿಯಲ್ಲಿ ಈ ಸಂವಹನ ಹೆಚ್ಚುತ್ತಾ ಬರುತ್ತದೆ ಕಡೆಗೆ ಗಾಮಾ ಸ್ಥಿತಿಯಲ್ಲಿ ಅತ್ಯಂತ ಹೆಚ್ಚಾಗಿರುತ್ತದೆ. ಮೆದುಳಿನ ಅಲೆಗಳನ್ನು ಅಳೆಯುವಾಗ ಆಲ್ಫಾ ಮತ್ತು ಬೀಟಾ ಸ್ಥಿತಿಗೆ ಮೆದುಳನ್ನು ತಂದು ಅಳೆಯಲಾಗುತ್ತದೆ.
ಸಮಾಧಾನಕರ ವಿಷಯವೆಂದರೆ ಮನುಷ್ಯನ ಮೆದುಳಿನ ಎಲ್ಲ ಸೂಕ್ಷ್ಮಗಳನ್ನು ಓದುವುದು ಈ ಮೆಶಿನುಗಳಿಂದ ಸಾಧ್ಯವಾಗುತ್ತದೆಯಾದರೂ ಮನುಷ್ಯನ ಮನಸ್ಸನ್ನು ಓದುವ ಯಂತ್ರವು ಇನ್ನೂ ಬಂದಿಲ್ಲ ಕಾಲಾಂತರದಲ್ಲಿ ಬರುವ ಸಾಧ್ಯತೆಗಳೂ ಇಲ್ಲ!