ನ್ಯೂಯಾರ್ಕ್: ನ್ಯೂಯಾರ್ಕ್ ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಕಾಳಿ ಮಾತೆ ಪ್ರತ್ಯಕ್ಷವಾಗಿದ್ದನ್ನು ಕಂಡ ಜನ ನಿಬ್ಬೆರಾಗದ ಘಟನೆ ವರದಿಯಾಗಿದೆ.
ಅಂದ ಹಾಗೇ ಕಾಳಿ ಮಾತೆ ಭಾರತದಲ್ಲಿ ಪ್ರತ್ಯಕ್ಷವಾಗಿದ್ದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಅದೂ ನ್ಯೂಯಾರ್ಕಿನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಕಾಳಿ ಮಾತೆ ಪ್ರತ್ಯಕ್ಷವಾಗಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ನ್ಯೂಯಾರ್ಕ್ ನಲ್ಲಿರುವ ಎಂಪೈರ್ ಸ್ಟೇಟ್ ಕಟ್ಟಡದ ಉದ್ದಕ್ಕೂ ಕಾಳಿ ಮಾತೆಯ ಚಿತ್ರ ಡಿಜಿಟಲ್ ಪರದೆಯಲ್ಲಿ ಪ್ರದರ್ಶನಗೊಂಡಿದ್ದನ್ನು ಕಂಡ ಭಕ್ತರು, ದೇವಿಯೇ ಆಕಾಶದಿಂದ ಎದ್ದು ಬಂದಿರಬಹುದೆಂದು ಭಾವಿಸಿದ್ದರು. ಖ್ಯಾತ ಕಲಾವಿದ ಆಂಡ್ರ್ಯೂ ಜೋನ್ಸ್, ಕಾಳಿ ಮಾತೆಯ ಈ ಭವ್ಯ ಚಿತ್ರವನ್ನು ರಚಿಸಿದ್ದರು.
ಮಾನವನ ದುರಾಸೆಯಿಂದ ಪ್ರಕೃತಿ ಮಾತೆಗೆ ಆಪತ್ತು ಬಂದಿದೆ. ಇದರ ಬಗ್ಗೆ ತಿಳಿ ಹೇಳಲು ಸ್ವತಃ ಪ್ರಕೃತಿ ಮಾತೆಯೇ ಕಾಳಿ ದೇವಿಯ ರೂಪದಲ್ಲಿ ಬಂದಿರುವ ರೀತಿಯಲ್ಲಿ ಚಿತ್ರ ರಚಿಸಲಾಗಿತ್ತು. ಪ್ರಕೃತಿಯನ್ನು ಉಳಿಸುವ ಮಹತ್ವದ ಸಂದೇಶ ಸಾರುವ ದೃಷ್ಟಿಯಿಂದ ಕಟ್ಟಡದ ಮೇಲೆ ಕಾಳಿ ಮಾತೆಯ ಚಿತ್ರ ಪ್ರದರ್ಶಿಸಲಾಯಿತು ಎಂದು ವರದಿಯಾಗಿದೆ. ಮತ್ತೊಂದು ಸಂಗತಿಯೆಂದರೆ ಈ ಹಿಂದೆಯೂ ಹಲವು ಬಾರಿ ಮಹತ್ವದ ಸಂದೇಶ ಸಾರುವ ಚಿತ್ರಗಳನ್ನು ಪ್ರತಿಷ್ಟಿತ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಪ್ರದರ್ಶಿಸಲಾಗಿದೆ. ಇತ್ತೀಚೆಗೆ ಅಳಿವಿನಂಚಿನಲ್ಲಿರುವ ಸಿಸಿಲ್ ಎಂಬ ಸಿಂಹದ ಚಿತ್ರ ಪ್ರದರ್ಶಿಸಿ ಅಳಿವಿನಂಚಿನಲ್ಲಿರುವ ಅದರ ಸಂತತಿ ಉಳಿಸುವಂತೆ ಜಾಗೃತಿ ಮೂಡಿಸಲಾಗಿತ್ತು.