– ಶ್ರೀಹರ್ಷ ಸಾಲಿಮಠ
ಈಗಾಗಲೇ ವಿಡಿಯೋ ಕರೆಗಳನ್ನು ಮಾಡುವ ಕಾಲ ಬಂದಿದೆ. ಮುಂದೊಂದು ದಿನ ಹೆಚ್ಚೇನಲ್ಲ ಇನ್ನು ಕೆಲವೇ ವರ್ಷಗಳಲ್ಲಿ ಇನ್ನೊಂದು ಕರೆಯ ವಿಧಾನ ಬರಲಿದೆ. ಸೀದಾ ಹೋಗಿ ಕಂಪ್ಯೂಟರ್ ಮುಂದೆ ನಿಂತು ಇಂಥವರಿಗೆ ಕರೆ ಮಾಡು ಎಂದು ಹೇಳುತ್ತೀರಿ. ನಿಮ್ಮಿಂದ ಕರೆ ಸ್ವೀಕರಿಸಿದ ವ್ಯಕ್ತಿ ನಿಮ್ಮೆದುರಿಗೆ ಬರುತ್ತಾರೆ. ತನ್ನ ಮನೆಯ ಕುರ್ಚಿಯ ಮೇಲೆ ಕುಳಿತು ನಿಮ್ಮೊಡನೆ ಎದುರು ಬದುರು ಮಾತನಾಡುತ್ತಾರೆ. ಯಾವುದಾದರೂ ವಸ್ತುವನ್ನು ತೋರಿಸುವುದಿದ್ದರೆ ಕೈಯಲ್ಲಿ ಹಿಡಿದು ತೋರಿಸುತ್ತಾರೆ. ಅದೇ ರೀತಿ ಅವರ ಎದುರಿಗೂ ನೀವು ಕೂತಿರುತ್ತೀರಿ. ಮಾತನಾಡುತ್ತೀರಿ. ಮಾತು ಮುಗಿದ ಕೂಡಲೆ ತಮ್ಮ ಕುರ್ಚಿಯ ಸಮೇತ ಮಾಯವಾಗುತ್ತಾರೆ. ಒಂದೇ ವ್ಯತ್ಯಾಸವೆಂದರೆ ನೀವು ಅವರನ್ನು ಮುಟ್ಟಲಾಗದು, ನೋಡಬಹುದು ಕೇಳಬಹುದು ಅಷ್ಟೇ!
ಮಾಯಾಬಜಾರ್ ನೆನಪಿಗೆ ಬಂತೆ? ಇದು ಈಗಾಗಲೇ ಪ್ರಚಲಿತವಿರುವ ತಂತ್ರಜ್ಞಾನ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಪ್ರಸಾರದ ಸಮಯದಲ್ಲಿ ಒಂದೇ ಸಮಯದಲ್ಲಿ ಸಾವಿರಾರು ಮೈಲಿಗಳ ದೂರದಲ್ಲಿರುವ ಹತ್ತು ವಿವಿಧ ಸ್ವತಃ ಸ್ಥಳಗಳಲ್ಲಿ ಭಾಷಣ ಮಾಡಿದ್ದರು. ಆಗ ಅವರು ಬಳಸಿದ್ದು ಇದೇ 3ಡಿ ಹಾಲೋಗ್ರಾಫಿಕ್ ಪ್ರೊಜೆಕ್ಷನ್ ತಂತ್ರಜ್ಞಾನ. ಕನ್ನಡದಲ್ಲಿ ಸೀಳುಬೆಳಕು ಚಿಮ್ಮಿಸುವ ಯಂತ್ರ ಎನ್ನಬಹುದು. ರಜನಿಕಾಂತ್ ರ “ರೋಬೋ” ಸಿನಿಮಾ ನೋಡಿದ್ದರೆ ನಾಯಕನು ತನ್ನ ರೋಬೋ ಜೊತೆ ಬೇರೆ ಜಾಗದಲ್ಲಿದ್ದಾಗ ಎದುರು ಬದುರು ನಿಂತು ಮಾತನಾಡುವ ದೃಶ್ಯ ಎಲ್ಲರಿಗೂ ನೆನಪಿರಬಹುದು. ನಾಯಕನೆದುರಿನ ಗಾಳಿಯಲ್ಲಿ ರೋಬೋನ ಯಥಾವತ್ ಗೊಂಬೆ ಬಂದು ನಿಂತು ಮಾತನಾಡುತ್ತಿತ್ತು. ಅದೂ ಸಹ ಹಾಲೋಗ್ರಾಫಿಕ್ ಪ್ರೊಜೆಕ್ಷನ್ ತಂತ್ರಜ್ಞಾನ. “ಹಾಲೋಗ್ರಾಮ್” ಎಲ್ಲರಿಗೂ ತಿಳಿದಿರುವಂತದ್ದೇ. ನಮ್ಮ ವಿಶ್ವವಿದ್ಯಾಲಯದ ಅಂಕಪಟ್ಟಿಯ ಮೇಲೆ ಹೊಳೆಯುವಂತೆ ಅಂಟಿಸಿರುತ್ತಾರಲ್ಲ ಅದೇ! ಚಿಕ್ಕವರಿದ್ದಾಗ ಆಟವಾಡಲು ಟಿವಿ ಮಾದರಿಯ ಗೊಂಬೆ ಬರುತ್ತಿತ್ತು. ಅದನ್ನು ಮೇಲೆ ಕೆಳಗೆ ಅಲ್ಲಾಡಿಸಿದಾಗ ಅದರಲ್ಲಿರುವ ಗೊಂಬೆಯ ಚಿತ್ರವು ಕಣ್ಣು ಮುಚ್ಚುವುದು ತೆರೆಯುವುದು ಮಾಡುತ್ತಿತ್ತು! 3ಡಿ ಹಾಲೋಗ್ರಾಫಿಕ್ ತಂತ್ರಜ್ಞಾನವೂ ಸಹ ಇದೇ ಚಳಕದ ಮುಂದುವರಿದ ಭಾಗ!
ಗಾಳಿಯಲ್ಲಿ ನಮ್ಮ 3ಡಿ ಚಿತ್ರವನ್ನು ಮೂಡಿಸುವ ಹಾಲೋಗ್ರಾಮ್ ಪ್ರೊಜೆಕ್ಟರ್ ನಲ್ಲಿ ಕನಿಷ್ಠ ಮೂರು ಪ್ರೊಜೆಕ್ಟರ್ ಗಳಿರುತ್ತವೆ. ನಮ್ಮ ಕರೆ ಸ್ವೀಕರಿಸಿದ ವ್ಯಕ್ತಿಯಿರುವ ಕಡೆ ಸೂಕ್ಷ್ಮ ಕ್ಯಾಮೆರಾಗಳಿದ್ದು ಆ ವ್ಯಕ್ತಿಯ ಚಲನವಲನಗಳನ್ನು, ಚಹರೆಗಳನ್ನು, ಬಣ್ಣಗಳನ್ನು, ದೂರವನ್ನು ಹಾಗೂ ಧ್ವನಿಯನ್ನು ಸೆರೆಹಿಡಿಯುತ್ತವೆ. ಇವೆಲ್ಲ ಮಾಹಿತಿಯನ್ನು ಇಂಟರ್ ನೆಟ್ ಮುಖಾಂತರ ನಮ್ಮ ಬಳಿಯ ಪ್ರೊಜೆಕ್ಟರ್ ಗಳಿಗೆ ಕಳುಹಿಸಲಾಗುತ್ತದೆ. ನಮ್ಮ ಪ್ರೊಜೆಕ್ಟರ್ ಗಳು ತಮಗೆ ಸೂಕ್ತವಾದ ಕ್ಯಾಮೆರಾಗಳಿಂದ ಬರುವ ಮಾಹಿತಿಯನ್ನು ಹೆಕ್ಕಿಕೊಂಡು ಆ ವ್ಯಕ್ತಿಯ ಚಹರೆ ಚಲನವಲನ ಇತ್ಯಾದಿಗಳನ್ನು ಮರುರೂಪಿಸಿಕೊಳ್ಳುತ್ತವೆ. ಹೀಗೆ ಮರುರೂಪಿಸಿಕೊಂಡ ಚಿತ್ರವನ್ನು ನಮ್ಮ ಎದುರಿನ ಆವರಣದಲ್ಲಿ ಮೂಡಿಸುತ್ತವೆ. ನಾವು ಕರೆ ಮಾಡಿದ ವ್ಯಕ್ತಿಯ ಯಥಾವತ್ ಚಿತ್ರ ನಮ್ಮೆದುರಿಗೆ ಮೂಡುತ್ತದೆ. ಸಿನಿಮಾಗಳಲ್ಲಿ ಬಳಸುವ ಪ್ರೊಜೆಕ್ಟರ್ ಗಳಿಗೂ ಹಾಲೋಗ್ರಾಮ್ ಪ್ರೊಜೆಕ್ಟರ್ ಗಳಿಗೂ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ ಸಿನಿಮಾ ಪ್ರೊಜೆಕ್ಟರ್ ಗಳಲ್ಲಿ ಬೆಳಕಿನ ಕಿರಣಗಳು ಪರದೆಯ ಮೇಲೆ ಮೂಡಿಸಿ ತಿರುಗಿ ನಮ್ಮ ಕಣ್ಣಿಗೆ ಬಡಿಯುತ್ತವೆ. ಅಂದರೆ ಪ್ರತಿಫಲಿಸುತ್ತವೆ(Reflection). ಆದರೆ ಹಾಲೋಗ್ರಾಮ್ ಪ್ರೊಜೆಕ್ಟರ್ ನಲ್ಲಿ ಚಿತ್ರವನ್ನು ಮೂಡಿಸಬೇಕಾದ ಸ್ಥಳದಲ್ಲಿ ಚಿತ್ರದ ದಡದ ಗುಂಟ ಬಾಗಿಕೊಂಡು ಆಚೆ ಹೋಗುತ್ತವೆ. ಅಂದರೆ ಇಲ್ಲಿ ಬೆಳಕಿನ ವಕ್ರೀಭವನ (Refraction) ಆಗುತ್ತದೆ. ಬಾಗಿಕೊಂಡು ಆಚೆ ಹೋದ ಕಿರಣಗಳು ಮತ್ತೆ ಕೂಡಿಕೊಂಡು ನಮ್ಮ ಕಣ್ಣಿನ ಮೇಲೆ ಬೀಳುತ್ತವೆ. ಆದ್ದರಿಂದಲೇ ಇದನ್ನು ಸೀಳು ಬೆಳಕಿನ ಚಿಮ್ಮುಗೆ ಎಂದು ಕರೆಯಲಾಗುತ್ತದೆ.