ಲಂಡನ್: ಚಿಟ್ಟೆಯ ರಂಗು, ಅದರ ಹಾರಾಟ, ರೆಕ್ಕೆ ಬಡಿಯುವ ಪರಿಯನ್ನು ನೋಡಿ ನಾವೆಲ್ಲ ಆನಂದಿಸುತ್ತೇವೆ. ಇನ್ನು ಕವಿ ಮನಸ್ಸಿನವರಿದ್ದರಂತೂ ಸ್ಪೂರ್ತಿಯೊಂದಿಗೆ ಒಂದಷ್ಟು ಸಾಲುಗಳನ್ನು ಗೀಚಿ ಖುಷಿಪಡುತ್ತಾರೆ. ಆದರೆ, ವಿಜ್ಞಾನಿಗಳಿಗೆ ಇದರ ಹಾರಾಟವೇ ಹೊಸ ಸಂಶೋಧನೆಗೆ ಪ್ರೇರೆಣೆ ನೀಡಿದೆ.
ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ನೆರವಾಗುವ ಹೊಸ ಸಂಶೋಧನೆಗೆ ಚಿಟ್ಟೆಯೇ ಸ್ಫೂರ್ತಿಯಾಗಿದೆ. ಚಿಟ್ಟೆ ಹಾರುವ ಮುನ್ನ ತನ್ನ ರೆಕ್ಕೆಗಳನ್ನು ಇಂಗ್ಲಿಷ್ ಅಕ್ಷರ ‘ವಿ’ ಆಕಾರದಲ್ಲಿ ಜೋಡಿಸಿಕೊಳ್ಳುತ್ತದೆ. ಇದು ಚಿಟ್ಟೆಗೆ ಬಹುಬೇಗ ಹಾರುವ ಶಕ್ತಿಯನ್ನು ನೀಡುತ್ತದೆ. ಈ ಅಂಶ ವಿಜ್ಞಾನಿಗಳ ಗಮನ ಸೆಳೆದಿದ್ದು, ಇದೇ ತಂತ್ರ ಆಧರಿಸಿ ಸೌರ ವಿದ್ಯುತ್ ಉತ್ಪಾದಿಸಿದರೆ ಶೇಕಡ 50ರಷ್ಟು ವೆಚ್ಚ ತಗ್ಗುವುದರ ಜತೆಗೆ ಉತ್ಪಾದನಾ ವೇಗವೂ ಹೆಚ್ಚಲಿದೆ ಎಂಬ ತರ್ಕ ಮುಂದಿಟ್ಟಿದ್ದಾರೆ.
”ಎಂಜಿನಿಯರಿಂಗ್‌ನಲ್ಲಿ ಬಯೋಕೆಮಿಸ್ಟ್ರಿ ಬಳಕೆ ಹೊಸದೇನಲ್ಲ. ಆದರೆ, ಹಿಂದೆಂದಿಗಿಂತಲೂ ಕಡಿಮೆ ವೆಚ್ಚದ ಸೌರ ವಿದ್ಯುತ್ ಉತ್ಪಾದನೆಯ ಹೊಸ ಸಾಧ್ಯತೆಗಳನ್ನು ಅಂತರ್‌ಶಿಸ್ತೀಯ ಸಂಶೋಧನೆಗಳು ತೆರೆದಿವೆ,” ಎಂದು ಬ್ರಿಟನ್‌ನ ಎಕ್ಸೀಟರ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಸಂಶೋಧನಾ ಯೋಜನೆಯ ಮುಖ್ಯಸ್ಥ ತಪಸ್ ಮಲಿಕ್ ಹೇಳಿದ್ದಾರೆ.
ಏನಿದು ಸಂಶೋಧನೆ? ‘ಕ್ಯಾಬೇಜ್ ವೈಟ್’ ಎಂಬ ಚಿಟ್ಟೆಗಳು ಮೋಡ ಕವಿದ ವಾತಾವರಣದಲ್ಲೂ ಹಾರಾಡುವುದಕ್ಕೆ ಹೆಸರುವಾಸಿ. ಇವು, ವಾತಾವರಣದಲ್ಲಿ ಕಡಿಮೆ ಉಷ್ಣತೆ ಇರುವಾಗ ಹಾರುವ ಮುನ್ನ ರೆಕ್ಕೆಗಳನ್ನು ‘ವಿ’ ಆಕಾರದಲ್ಲಿ ಮಡಿಚಿಕೊಳ್ಳುತ್ತವೆ. ಈ ಮೂಲಕ ದೇಹದ ಉಷ್ಣಾಂಶವನ್ನು ಬಹುಬೇಗ ಹೆಚ್ಚಿಸಿಕೊಂಡು ಹಾರುತ್ತವೆ. ಇದೇ ತಾಂತ್ರಿಕತೆಯನ್ನು ವಿಜ್ಞಾನಿಗಳು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಬಳಸಿಕೊಳ್ಳುವ ಸಂಶೋಧನೆ ನಡೆಸಿ ಯಶಸ್ವಿಯಾಗಿದ್ದಾರೆ.
ಚಿಟ್ಟೆ ಗಳು ತನ್ನ ತೆಳುವಾದ ರೆಕ್ಕೆಗಳಿಂದ ಸೂರ್ಯನ ಶಾಖವನ್ನು ಹೀರಿಕೊಂಡು ಬಳಿಕ ‘ವಿ’ ಆಕಾರದಲ್ಲಿ ಮಡಿಚಿಕೊಳ್ಳುವ ಮೂಲಕ ಉಷ್ಣತೆಯನ್ನು ಎದೆ ಭಾಗಕ್ಕೆ ಕೇಂದ್ರೀಕರಿಸಿಕೊಳ್ಳುತ್ತವೆ. ಈ ಮೂಲಕ ಹಾರಲು ಬೇಕಾದ ಶಕ್ತಿಯನ್ನು ಸಂಚಯಿಸಿಕೊಳ್ಳುತ್ತದೆ. ಇದೇ ಆಧಾರದಲ್ಲಿ ಸೌರ ಫಲಕಗಳನ್ನು ಅಭಿವೃದ್ಧಿಪಡಿಸಿದರೆ ಸೌರವಿದ್ಯುತ್ ಉತ್ಪಾದನೆಯ ವೇಗವನ್ನು ಹೆಚ್ಚಿಸುವುದರ ಜತೆಗೆ ಉತ್ಪಾದನಾ ವೆಚ್ಚವನ್ನು ಶೇ 50ರಷ್ಟು ತಗ್ಗಿಸಬಹುದು. ಈ ಹೊಸ ಸಂಶೋಧನೆ ಮುಂದಿನ ದಿನಗಳಲ್ಲಿ ಸೌರಶಕ್ತಿ ಕೇಂದ್ರೀತ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಲಿದೆ ಎಂದು ‘ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್’ನ ವರದಿಯಲ್ಲಿ ಹೇಳಲಾಗಿದೆ.