ಅಂತರಾಷ್ಟ್ರೀಯ

ಚೀನಾದ ಮೈತ್ರಿಯೊಂದಿಗೆ ಭಾರತದ ಕಾಲೆಳೆಯುತ್ತಿದೆ ಪಾಕ್

Pinterest LinkedIn Tumblr

nawazಪಾಕಿಸ್ತಾನ, ದೆಹಲಿಯನ್ನು ಕೆರಳಿಸುತ್ತಾ, ಕಾಲೆಳೆಯುತ್ತಾ ರಂಜನೆ ಪಡೆಯುತ್ತಿದೆ. ಭಾರತದ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಪಾಕ್, ಇವತ್ತು ಪ್ರಧಾನಮಂತ್ರಿಗಳ ಮಟ್ಟದಲ್ಲಿ ಕೈಕುಲುಕಿ ಸ್ನೇಹದ ನಗೆ ಬೀರಿದರೆ, ನಾಳೆ ಗಡಿಯಲ್ಲಿ ನಮ್ಮ ಪಡೆಗಳ ಮೇಲೆ ದಾಳಿ ಮಾಡುತ್ತಿದೆ. ಭಯೋತ್ಪಾದಕ ವಿಷಯದಲ್ಲಿ ಒಮ್ಮೆ ತಾನು ಸಹಕರಿಸುವುದಾಗಿ ಹೇಳಿದರೆ, ಮಗದೊಮ್ಮೆ ಅದೇ ಭಯೋತ್ಪಾಕರ ರಕ್ಷಣೆಗೆ ಟೊಂಕ ಕಟ್ಟಿ ನಿಲುತ್ತಿದೆ. ಅಲ್ಲಿನ ಸೇನಾ ಮುಖ್ಯಸ್ಥರು ಭಾರತವನ್ನು ಕೆರಳಿಸಿ ಮಜಾ ನೋಡುವ ಆಟಕ್ಕೆ ಪ್ರಧಾನಿ ನವಾಜ್ ಷರೀಫ್ ಅವರನ್ನು ದಾಳ ಮಾಡಿಕೊಂಡಂತಿದೆ.

ಯುದ್ಧಭೂಮಿಯಲ್ಲಿ ಒಂದಲ್ಲ, ಎರಡು ಬಾರಿ ಮಣ್ಣುಮುಕ್ಕಿಸಿರುವುದು ಮತ್ತು ಗಾತ್ರ, ಆರ್ಥಿಕ ಸಂಪನ್ಮೂಲ ಹಾಗೂ ತಾಂತ್ರಿಕ ಮುನ್ನಡೆಯಲ್ಲಿ ತಾನು ಹತ್ತಾರು ಪಟ್ಟು ಪ್ರಬಲ ಎನ್ನುವ ಕಾರಣಕ್ಕಾಗಿ ಭಾರತ ಪಾಕಿಸ್ತಾನದ ಶಕ್ತಿ-ಸಾಮಥ್ರ್ಯವನ್ನು ನಗಣ್ಯವೆಂದೇ ಭಾವಿಸುವ ಸಂಪ್ರದಾಯ ರೂಢಿಸಿಕೊಂಡಿದೆ. ಆದರೆ, ವಾಸ್ತವ ಬೇರೆಯದೇ ಇದೆ. ತಮ್ಮದೇ ಆದ ಬೇರೆ-ಬೇರೆ ಕಾರಣಕ್ಕಾಗಿ ಸಂಕಷ್ಟದಲ್ಲಿ ಅದರೊಂದಿಗೆ ನಿಲ್ಲುವ ಬಲಾಢ್ಯ ಮಿತ್ರರಾಷ್ಟ್ರಗಳನ್ನು ಸಂಪಾದಿಸಿರುವ ಪಾಕ್‍ಗೆ ಹೋಲಿಸಿದರೆ ಭಾರತದ ಮಿತ್ರರಾಷ್ಟ್ರಗಳು ತೀರಾ ದುರ್ಬಲ.

ಉದಾಹರಣೆಗೆ; ಅಮೆರಿಕ, ವರ್ಷಗಳಿಂದ ಪಾಕಿಸ್ತಾನದ ಅರ್ಥವ್ಯವಸ್ಥೆಯ ಮುಖ್ಯ ನೆಲೆಯಾಗಿದ್ದು, ಪ್ರತಿ ವರ್ಷ ಅದು ನೀಡುವ ಆರ್ಥಿಕ ಅನುದಾನ, ಸೇನಾ ನೆರವಿನೊಂದಿಗೆ ಪೈಪೋಟಿಗೆ ಇಳಿದಂತಿದೆ.ಮಹತ್ವದ ಆಘ್ನಾನ್ ಕಾರ್ಯಾಚರಣೆಗಳಲ್ಲಿ ತನ್ನ ಸಹಕಾರ ನಿರ್ಣಾಯಕವಾಗಿರುವಂತೆ ನೋಡಿಕೊಳ್ಳುವ ಮೂಲಕ ಪಾಕ್, ಅಮೆರಿಕವನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದೆ. ಅಮೆರಿಕ ಕೂಡ ಪಾಕ್‍ನೊಂದಿಗಿನ ತನ್ನ ಬಾಂಧವ್ಯಕ್ಕೆ ಎಷ್ಟೊಂದು ಮಹತ್ವ ನೀಡಿದೆ ಎಂಬುದು ಮುಂಬೈ ದಾಳಿ ಪ್ರಕರಣದ ಡೇವಿಡ್ ಹೆಡ್ಲಿ ವಶಕ್ಕೆ ಪಡೆಯಲು ಭಾರತ ಯತ್ನಿಸಿದಾಗ ಅದು ನಡೆದುಕೊಂಡ ರೀತಿಯೇ ನಿದರ್ಶನ. ಆ ಸಂದರ್ಭದಲ್ಲಿ ಭಾರತ ಎದುರಿಸಿದ ಅವಮಾನ, ಮುಜುಗರ ಅಮೆರಿಕದ

ಆದ್ಯತೆ ಯಾರು ಎಂಬುದನ್ನು ಬಹಿರಂಗಗೊಳಿಸಿದೆ.

ಆದರೆ, ಚೀನಾ ಪಾಕಿಸ್ತಾನದೊಂದಿಗೆ ಹೊಂದಿರುವ ಅಚಲ ನಂಟು, ಭಾರತದ ದೃಷ್ಟಿಯಿಂದ ಬಹಳ ದೊಡ್ಡಮಟ್ಟದ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಸ್ವಾತಂತ್ರ್ಯೋತ್ತರ ಘಟ್ಟದಲ್ಲಿ ತನಗೆ ಪೈಪೋಟಿ ನೀಡಬಲ್ಲ ಏಷ್ಯಾದ ಏಕೈಕ ಸಶಕ್ತ ರಾಷ್ಟ್ರವೆಂದೇ ಚೀನಾ ಭಾರತವನ್ನು ಪರಿಗಣಿಸಿದೆ. ಆದರೆ, ತನ್ನ ಮುಂದಿನ ಈ ಗುರುತರವಾದ ಸವಾಲನ್ನು ಮಣಿಸಲು ಚೀನಾದ ಚಾಣಾಕ್ಷ ಮತ್ತು ದೂರದೃಷ್ಟಿಯ ನಾಯಕತ್ವ ತನ್ನದೇ ಸುಲಭೋಪಾಯಗಳನ್ನು ಹೊಂಚಿಕೊಂಡಿದೆ. ಹಾಗೇ, 1962ರ ನಿರ್ಣಾಯಕ ಗಡಿ ಸಮರದ ಸೋಲು ಭಾರತದ ಜಂಘಾಬಲವನ್ನೇ ಉಡುಗಿಸಿದೆ.

ಅದರೊಂದಿಗೆ ಚೀನಾ ತನ್ನ ಪರಮಾಪ್ತ ಮಿತ್ರನಾಗಿ ಪಾಕಿಸ್ತಾನವನ್ನು ಅಪ್ಪಿಕೊಂಡು, ಭಾರತವನ್ನು ಕುಗ್ಗಿಸುವ ಒಂದು ಶಕ್ತಿಯಾಗಿ ಅದನ್ನು ಬೆಳೆಸತೊಡಗಿದೆ. ಪರಮಾಣು ರಾಷ್ಟ್ರವಾಗಿ ಪಾಕ್ ಸೇನಾಬಲದಲ್ಲಿ ಭಾರತಕ್ಕೆ ಸೆಡ್ಡುಹೊಡೆಯುವಂತೆ ಬೆಂಬಲಕ್ಕೆ ನಿಂತು ಸಮಬಲ ಸೃಷ್ಟಿಸಿದೆ. ಪಾಕ್‍ನಲ್ಲಿ ಈಗಾಗಲೇ ಪೂರ್ಣಗೊಂಡಿರುವ ಎರಡು ಅಣು ಸ್ಥಾವರಗಳೊಂದಿಗೆ ಚೀನಾ ಇದೀಗ ಹೆಚ್ಚುವರಿಯಾಗಿ ನಾಲ್ಕು ಸ್ಥಾವರ ನಿರ್ಮಾಣ ಆರಂಭಿಸಿದೆ. ಅದೂ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಗಾಳಿಗೆ ತೂರಿ!

ಪಾಕಿಸ್ತಾನದ ಮೂಲಸೌಕರ್ಯಕ್ಕೆ ಚೀನಾದ ನೆರವಿನ ವಿಷಯದಲ್ಲಿ ಬಹಳ ನಿರ್ಣಾಯಕವಾದದ್ದೆಂದರೆ; ಬಲೂಚಿಸ್ತಾನದಲ್ಲಿ ನಿರ್ಮಿಸಿರುವ ಗ್ವದಾರ್ ಬಂದರು ಮತ್ತು ಅದಕ್ಕೆ ಚೀನಾದ ಜಿನ್‍ಜಾಂಗ್ ಸಂಪರ್ಕ ಕಲ್ಪಿಸುವ 3000 ಕಿ.ಮೀ. ರಸ್ತೆ ನಿಮರ್ಮಾಣ. ಇದರೊಂದಿಗೆ ಪಾಕ್‍ನ ಸಾಲು- ಸಾಲು ಅಭಿವೃದ್ಧಿ ಯೋನೆಗಳಿಗೆ ಚಾಲನೆ ನೀಡಿರುವ ಚೀನಾ, ಜಲಾಶಯ, ಇಂಧನ ಸರಬರಾಜು, ಹೊಸ ನಗರ ನಿಮರ್ಮಾಣಗಳನ್ನು ಕೈಗೆತ್ತಿಕೊಂಡಿದೆ.

ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ, ಚೀನಾದ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಎಷ್ಟರಮಟ್ಟಿಗೆ ಎಂದರೆ, ತನ್ನ ದೇಶದ ಗಡಿಯೊಳಗಿರುವ ಚೀನಾದ ಆಸ್ತಿಗಳ ರಕ್ಷಣೆಗಾಗಿ ವಿಶೇಷ ಸೇನಾ ಪಡೆಯನ್ನೇ ಪಾಕ್ ಸಿದ್ಧಗೊಳಿಸಿದೆ. ಅಮೆರಿಕದ ನೀತಿಗೆ ಆಫ್ಘಾನ್ ಎಷ್ಟು ನಿರ್ಣಾಯಕವೋ ಚೀನಾದ ಆರ್ಥಿಕ ಮತ್ತು ಮಿಲಿಟರಿ ತಂತ್ರಗಾರಿಕೆಯ ಪ್ರಮುಖ ಭಾಗವಾದ ಮಹತ್ವದ ಸಿಲ್ಕ್-ರೋಡ್ ನೆಟ್‍ವರ್ಕ್ ನೀತಿಗೂ ಪಾಕ್ ಅಷ್ಟೇ ನಿರ್ಣಾಯಕ. ಆ ದೃಷ್ಟಿಯಲ್ಲಿ ಚೀನಾದ ಪಾಲಿಗೆ ಪಾಕ್ ಈಗ ಕೇವಲ ಭಾರತದ ವಿರುದ್ಧ ಬಳಸಬಹುದಾದ ಅಸ್ತ್ರವಷ್ಟೇ ಅಲ್ಲ. ಬದಲಾಗಿ ಪ್ರಬಲ ದಾಳ.

ನೆರೆಹೊರೆಯಲ್ಲಿ ಇಷ್ಟೆಲ್ಲಾ ಪ್ರಾದೇಶಿಕ ಪ್ರಾಬಲ್ಯ ತಂತ್ರಗಾರಿಕೆಗಳು ಮೆರೆಯುತ್ತಿದ್ದರೂ, ಸದ್ಯಕ್ಕಂತೂ ಇದಕ್ಕೆಲ್ಲಾ ಪ್ರತಿತಂತ್ರ ರೂಪಿಸುವ ಪ್ರಯತ್ನಗಳು ಭಾರತದ ಕಡೆಯಿಂದ ಕಾಣಿಸುತ್ತಿಲ್ಲ. ಚೀನಾದ ತಂತ್ರಗಾರಿಕೆಯನ್ನು ಕಟ್ಟಿಹಾಕುವ ಮಾತಿರಲಿ, ಕನಿಷ್ಠ ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳುವ ನಿಟ್ಟಿನಲ್ಲೂ ಭಾರತ ಇನ್ನೂ ಕಾಯ್ರೋನ್ಮುಖವಾದಂತಿಲ್ಲ. ರಷ್ಯಾದಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ ವೇಳೆ ಪ್ರಧಾನಿ ಮೋದಿ, ಭಯೋತ್ಪಾದಕ ಲಕ್ವಿ ವಿಷಯದಲ್ಲಿ ಭಾರತದ ನಡೆಯನ್ನು ವಿರೋಧಿಸಿ ವಿಶ್ವಸಂಸ್ಥೆಯಲ್ಲಿ ವಿಟೋ ಮಂಡಿಸಿದ ಅವರ ಕ್ರಮ `ಸ್ವೀಕಾರಾರ್ಹವಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರತಿಕ್ರಿಯೆ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ರನ್ನು ನಡುಗಿಸಿರಬಹುದು. ಪ್ರಧಾನಿ ಮೋದಿಯವರು ಒಮ್ಮೊಮ್ಮೆ ಇಂತಹ ಬಿಗು ನಿಲುವು ತಳೆದ ವರದಿಗಳಿವೆ.

ಹಾಗೆ ನೋಡಿದರೆ, ಚೀನಾದ ಮುಂದೆ ಈಗ ಭಾರತ ಪ್ರಬಲ ಗುರಿಯಾಗಿ ಉಳಿದಿಲ್ಲ. ಅಧ್ಯಕ್ಷ ಕ್ಸಿ ಅವರ ನೇತೃತ್ವದಲ್ಲಿ ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿಕೊಳ್ಳುವ ರೀತಿ ನೋಡಿದರೆ ಅದರ ವಿಸ್ತಾರಗೊಂಡಿರುವ ಪ್ರಾಬಲ್ಯದ ಅರಿವಾಗದಿರದು. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯ ವಿವಾದಿತ ಸ್ಪ್ರಾಟ್ಲಿ ದ್ವೀಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ವಿಷಯದಲ್ಲಿ ಅಮೆರಿಕದ ಎಚ್ಚರಿಕೆಯ ಮಾತುಗಳಿಗೆ ಸೊಪ್ಪುಹಾಕದೆ ಮುನ್ನುಗ್ಗಿದ ಚೀನಾ ಕ್ರಮ ಈ ಮಾತುಗಳಿಗೆ ಪುಷ್ಟಿ ನೀಡುತ್ತದೆ. ಎರಡು ತಿಂಗಳ ಹಿಂದೆ ಏಷ್ಯಾ ಮೂಲಸೌಕರ್ಯ ಯೋಜನೆಗಾಗಿ ಜಪಾನ್ ಬರೋಬ್ಬರಿ 110 ಬಿಲಿಯನ್ ಡಾಲರ್ ಅನುದಾನ ಘೋಷಿಸಿದೆ. ಆ ಮೂಲಕ ಚೀನಾ ಪ್ರಾಯೋಜಿತ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್‍ವೆಸ್ಟ್‍ಮೆಂಟ್ ಬ್ಯಾಂಕ್‍ನ ಬಂಡವಾಳಕ್ಕಿಂತ ಹತ್ತು ಬಿಲಿಯನ್ ಅಧಿಕ ನೆರವನ್ನೇ ಜಪಾನ್ ಆ ಯೋಜನೆಗೆ ಮೀಸಲಿಟ್ಟಿದೆ. ಇದು ದೊಡ್ಡಣ್ಣನ ಆಟ. ನರೇಂದ್ರ ಮೋದಿ ಬದಲಾದ ಜಗತ್ತಿಗೆ ಪೂರಕವಲ್ಲದ ವಿದೇಶಾಂಗ ನೀತಿ, ರಾಷ್ಟ್ರೀಯ ಭದ್ರತೆ ಯೋಜನಾ ವ್ಯವಸ್ಥೆ ಹಾಗೂ ಹೊಸ ಚಿಂತನೆಯ ಥಿಂಕ್‍ಟ್ಯಾಂಕ್‍ಗಳ ಕೊರತೆಯ ನಡುವೆಯೇ ಈ ಆಟ ಆಡಬೇಕಿದೆ. ಈ ನಿಟ್ಟಿನಲ್ಲಿ ಈವರೆಗೆ ಪ್ರಧಾನಿ ಮತ್ತು ಅವರ ಸಲಹೆಗಾರರ ಕಡೆಯಿಂದ ಆಗಿರುವುದೇನೆಂದರೆ ನಮ್ಮ ವಿದೇಶಾಂಗ ನೀತಿ ಅಮೆರಿಕ ಪರ ಒಂದಿಷ್ಟು ವಾಲಿರುವುದು ಅಷ್ಟೆ. ಆದರೆ, ಒಂದೆಡೆ ಗಟ್ಟಿಯಾಗಿರುವ ಅಮೆರಿಕ- ಪಾಕ್ ಬಾಂಧವ್ಯ, ಮತ್ತೊಂದೆಡೆ ರಷ್ಯಾ, ಚೀನಾಕ್ಕೆ ಆಪ್ತವಾಗುವ ಮೂಲಕ ಅಮೆರಿಕದ ಸ್ವಹಿತಾಸಕ್ತಿಯ ಏಕಮುಖಿ ಜಗತ್ತಿನ ವಿರುದ್ಧವಾಗಿ ಬಹು-ಸಾಧ್ಯತೆಯ ಜಗತ್ತು ಕಟ್ಟುನಿಟ್ಟಿನಲ್ಲಿ ಯುನೈಟೆಡ್ ಫ್ರಂಟ್ ಕಟ್ಟುತ್ತಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ಅಮೆರಿಕ ಪರ ಒಲವು ಎಷ್ಟರಮಟ್ಟಿಗೆ ನೆರವಿಗೆ ಬರುತ್ತದೆ ಎಂಬುದು ಪ್ರಶ್ನಾರ್ಹ.

ನಾವು ನಿಮಗಿಂತ ಹೆಚ್ಚು ದಿನ ಸಂಸತ್ ಕಲಾಪ ಹಾಳುಗೆಡವಬಲ್ಲೆವು, ನಮ್ಮ ಹಗರಣ, ನಿಮ್ಮಷ್ಟು ದೊಡ್ಡದಲ್ಲ ಎಂದು ಕ್ಷುಲ್ಲಕ ಕಿತ್ತಾಟಗಳಲ್ಲೇ ಮುಳುಗೇಳುವ ಜನರಿಂದ ಈ ‘ದೊಡ್ಡಣ್ಣನ ಆಟ’ ಆಡಲಾಗದು. ನಾವು ನಮ್ಮ-ನಮ್ಮಲ್ಲೇ ಕಿತ್ತಾಡುತ್ತಿದ್ದೇವೆ, ಪರಸ್ಪರ ಕಾಲೆಳೆದುಕೊಳ್ಳುವ ಆಟವಾಡುತ್ತಿದ್ದೇವೆ. ಆದರೆ, ಜಗತ್ತು ನಮ್ಮನ್ನು ಬಿಟ್ಟು ಮುಂದೆ ಸಾಗುತ್ತಿದೆ!

– ಟಿ ಜೆ ಎಸ್ ಜಾರ್ಜ್

Write A Comment