ಅಂತರಾಷ್ಟ್ರೀಯ

ಇದು ಅತಿಂಥ ವಿಮಾನವಲ್ಲ…ವೇಗವಾಗಿ ಹಾರುವ ಸೂಪರ್‌ಸಾನಿಕ್ ಲಕ್ಸುರಿ ; ನ್ಯೂಯಾರ್ಕ್‌ನಿಂದ ಲಂಡನ್‌ಗೆ ಮೂರೇ ಗಂಟೆಗಳಲ್ಲಿ ಯಾನ

Pinterest LinkedIn Tumblr

City1

ಬಾಸ್ಟನ್: ಇದು ಅತಿಂಥ ವಿಮಾನವಲ್ಲ; ಶಬ್ದಕ್ಕಿಂತ ಎರಡು ಪಟ್ಟು ಹೆಚ್ಚು ವೇಗವಾಗಿ ಹಾರುವ ಸೂಪರ್‌ಸಾನಿಕ್ ಲಕ್ಸುರಿ ಲೋಹದ ಹಕ್ಕಿ. ಇದರಲ್ಲಿ ಕೂತು ನಾವು ಪ್ಯಾರಿಸ್‌ನಿಂದ ಬೆಳಗ್ಗೆ ಹೊರಟು ದುಬೈ ತಲುಪಿ, ಶಾಪಿಂಗ್ ಮಾಡಿಕೊಂಡು ಸಂಜೆ ಹೊತ್ತಿಗೆ ಮನೆ ತಲುಪಬಹುದು.
ಭರ್ತಿ 5567 ಕಿ.ಮೀ. ಅಂತರದಲ್ಲಿರುವ ನ್ಯೂಯಾರ್ಕ್‌ನಿಂದ ಲಂಡನ್‌ಗೆ ಬರೀ ಮೂರೇ ಗಂಟೆಯಲ್ಲಿ ತೆರಳಬಹುದು!

ಹೌದು, ಶಬ್ದಕ್ಕಿಂತ 1.8 ಪಟ್ಟು ಹೆಚ್ಚು ವೇಗದಲ್ಲಿ ಚಲಿಸುವ, ಅಂದರೆ ಗಂಟೆಗೆ ಅಜಮಾಸು 2,205 ಕಿ.ಮೀ. ಶರವೇಗದ ಜೆಟ್ ವಿಮಾನವನ್ನು ಅಮೆರಿಕದ ಬಾಸ್ಟನ್ ಮೂಲದ ‘ಸ್ಪೈಕ್ ಏರೋಸ್ಪೇಸ್ ಕಂಪನಿ’ ಅಭಿವೃದ್ಧಿಪಡಿಸುತ್ತಿದೆ. ಎಸ್-512 ಜೆಟ್ ವಿಮಾನವನ್ನು 2013ರಲ್ಲಿ ಅಭಿವೃದ್ಧಿಪಡಿಸಲಾಗಿದ್ದರೂ, ಇದರ ವಿನ್ಯಾಸದಲ್ಲಿ ಹಲವು ಮಾರ್ಪಾಟು ಮಾಡಿ ಅದನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗ ನಡೆಯುತ್ತಿದೆ. ಹೊಸದಾಗಿ ವಿನ್ಯಾಸಗೊಂಡ ಸೂಪರ್‌ಸಾನಿಕ್ ವಿಮಾನದ ವೇಗ ಮತ್ತಷ್ಟು ಹೆಚ್ಚಿರಲಿದೆ ಎಂದು ಕಂಪನಿ ಹೇಳಿದೆ.

ಹೊಸ ವಿನ್ಯಾಸದ ಜೆಟ್‌ನಲ್ಲಿ ವಿಮಾನದ ರೆಕ್ಕೆಗಳು ಪ್ರಮುಖವಾಗಿವೆ. ‘ಡೆಲ್ಟಾ’ ಎಂದು ಹೆಸರಿಡಲಾಗಿರುವ ರೆಕ್ಕೆಗಳನ್ನು ಗಾಳಿಯಲ್ಲಿ ಸರಾಗವಾಗಿ ತೇಲುವ ಹದ್ದಿನ ರೆಕ್ಕೆಗಳ ರೀತಿ ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಅದೇ ಏರೊಡೈನಾಮಿಕ್ ತಂತ್ರವನ್ನು ಡೆಲ್ಟಾ ರೆಕ್ಕೆಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಹಾಗೆಯೇ, ವಿಮಾನದ ಹಿಂಬದಿ ಭಾಗ (ಬಾಲ)ವನ್ನು ಸಹ ಗಾಳಿಯ ಪ್ರತಿರೋಧವನ್ನು ಜಾರಿಕೊಂಡು ಸರಾಗವಾಗಿ ಚಲಿಸಬಲ್ಲ ತಂತ್ರ ಬಳಸಿ ವಿನ್ಯಾಸಗೊಳಿಸಲಾಗುತ್ತಿದೆ.

ಸಾಮಾನ್ಯವಾಗಿ ರೆಕ್ಕೆಗಳು ಹಾಗೂ ವಿಮಾನದ ಬಾಲ ತೂಕವಿದ್ದು, ಗಾಳಿಯ ಪ್ರತಿರೋಧವನ್ನು ಹೆಚ್ಚು ಅನುಭವಿಸುತ್ತಿದ್ದರೆ ವಿಮಾನದ ವೇಗ ಕಡಿಮೆಯಾಗುತ್ತದೆ. ಇಂಜಿನ್ ಕ್ಷಮತೆ ಹಾಗೂ ಇಂಧನ ದಕ್ಷತೆ ಕುಗ್ಗುತ್ತವೆ. ಆದರೆ ಸೂಪರ್‌ಸಾನಿಕ್ ಜೆಟ್‌ನ ವಿಶೇಷ ವಿನ್ಯಾಸದ ಡೆಲ್ಟಾ ರೆಕ್ಕೆಗಳು ಹಾಗೂ ಬಾಲ ಕಡಿಮೆ ತೂಕ ಹೊಂದಿದ್ದು, ಗಾಳಿಯಲ್ಲಿ ಹಕ್ಕಿ ತೇಲುವಂತೆಯೇ ವಿಮಾನ ಭಾರಿ ವೇಗದಲ್ಲಿ ಹಾರಲು ಅನುವು ಮಾಡಲಿವೆ.

ಕೋಟಿ ಖರ್ಚು ಎಸ್-512 ವಿಮಾನವನ್ನು ಬಿಸಿನೆಸ್ ಜೆಟ್ ಆಗಿ ವಿನ್ಯಾಸಗೊಳಿಸಲಾಗುತ್ತಿದ್ದು, ಇದಕ್ಕೆ 380 ಕೋಟಿ ರೂ.ನಿಂದ 506 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಭಾರತೀಯನ ಹೆಗ್ಗಳಿಕೆ ಸೂಪರ್‌ಸಾನಿಕ್ ಜೆಟ್ ಅಭಿವೃದ್ಧಿಪಡಿಸುವ ಪರಿಣತರ ತಂಡದಲ್ಲಿ ಭಾರತೀಯ ಮೂಲದವರೂ ಒಬ್ಬರಿದ್ದಾರೆ. ಅವರ ಹೆಸರು ಅನುತೋಷ್ ಮೊಯಿತ್ರಾ. ಇವರು ಸ್ಪೈಕ್ ಏರೋಸ್ಪೇಸ್ ಕಂಪನಿಯಲ್ಲಿ ಹಿರಿಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರು ಎಸ್-512 ಜೆಟ್ ಮರು ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.

Write A Comment