ಅಂತರಾಷ್ಟ್ರೀಯ

ಸಲಿಂಗಿಗಳ ‘ಅಭಿಮಾನ ಪತಾಕೆ’ ಹಿಂದಿನ ಕಥೆ: ಈ ಅಭಿಮಾನ ಪತಾಕೆಯ ವಿನ್ಯಾಸಕಾರ ಗಿಲ್ಬರ್ಟ್ ಬೆಕರ್

Pinterest LinkedIn Tumblr

gilbert_baker

ಅಮೆರಿಕದಲ್ಲಿ ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಕೂಡಲೇ ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ತಾಣಗಳಲ್ಲಿ ಕಾಮನ ಬಿಲ್ಲಿನ ರಂಗಿನ ಪ್ರೊಫೈಲ್ ಫೋಟೋ, ಕವರ್ ಫೋಟೋಗಳು ರಾರಾಜಿಸಿದ್ದನ್ನು ನಾವು ನೋಡಿದ್ದೇವೆ. ಅಮೆರಿಕದಲ್ಲಿ ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದ್ದನ್ನು ಗೊತ್ತಿಲ್ಲದೇ ಇದ್ದವರೂ ಕೂಡಾ ಫೇಸ್‌ಬುಕ್‌ನಲ್ಲಿ facebook.com/celebratepride ಲಿಂಕ್ ಕ್ಲಿಕ್ ಮಾಡಿ ಪ್ರೊಫೈಲ್ ಫೋಟೋವನ್ನು ಕಾಮನಬಿಲ್ಲಿನ ರಂಗು ರಂಗಾಗಿಸಿದ್ದರು. ಸಾಮಾನ್ಯವಾಗಿ ಕಾಮನಬಿಲ್ಲಿನಲ್ಲಿ ಕೆಂಪು, ಹಸಿರು, ಹಳದಿ, ಕಿತ್ತಳೆ, ನೀಲಿ, ನೇರಳೆ, ಇಂಡಿಗೋ -ಏಳು ಬಣ್ಣಗಳಿರುತ್ತವೆ. ಆದರೆ ಫೇಸ್‌ಬುಕ್‌ನಲ್ಲಿ ಮೂಡಿದ ಕಾಮನಬಿಲ್ಲಿಗೆ  ಏಳು ಬಣ್ಣಗಳಿತ್ತಾ? ಸಂಶಯವಿದ್ದರೆ ಮತ್ತೊಮ್ಮೆ ಅದನ್ನು ನೋಡಿ, ಗೊತ್ತಾಗುತ್ತದೆ.

ಜಗತ್ತಿನಾದ್ಯಂತವಿರುವ ಸಲಿಂಗ ಸ್ನೇಹಿಗಳ ಅಭಿಮಾನದ ಪ್ರತೀಕವಾದ Rainbow Pride Flagನಲ್ಲಿ ಏಳು ಬಣ್ಣಗಳಿಲ್ಲ. ಅದರಲ್ಲಿರುವುದು ಕೆಂಪು, ಕೇಸರಿ, ಹಳದಿ, ಹಸಿರು, ನೀಲಿ ಮತ್ತು ನೇರಳೆ ಬಣ್ಣ ಮಾತ್ರ. ಇದ್ಯಾಕೆ ಹೀಗೆ? ಧ್ವಜ ತಯಾರಿಸುವಾಗ ಎಡವಟ್ಟಾಯ್ತಾ? ಎಂದು ಕೇಳಬೇಡಿ. ಅಂಥದ್ದೇನೂ ಅಲ್ಲ. ಸಲಿಂಗಿಗಳ (LGBT- ಲೆಸ್ಬಿಯನ್, ಗೇ, ಬೈಸೆಕ್ಷ್ಯುವಲ್, ಟ್ರಾನ್ಸ್‌ಜೆಂಡರ್) ಪ್ರೈಡ್ ರೈನ್‌ಬೋ ಧ್ವಜದಲ್ಲಿ ಆರು ಬಣ್ಣಗಳೇ ಇರುವುದು. ಈ ಮೊದಲು 8 ಬಣ್ಣಗಳಿದ್ದ ರೈನ್‌ಬೋ ಫ್ಲಾಗ್ ಆಮೇಲೆ 6 ಬಣ್ಣಗಳಿಗೆ ಆಗಿರುವುದರ ಹಿಂದೆ ಒಂದು ಕಥೆಯಿದೆ.

ಸ್ಯಾನ್‌ಫ್ರಾನ್ಸಿಸ್ಕೋದ ಕಲಾವಿದ ಗಿಲ್ಬರ್ಟ್ ಬೆಕರ್ ಎಂಬಾತ ಮೊದಲ ಬಾರಿ LGBT Pride Flagಗೆ ಕಾಮನಬಿಲ್ಲಿನ ಬಣ್ಣ ನೀಡಿದ್ದರು. ಅಂದು ಅಮೆರಿಕದಲ್ಲಿದ್ದ ಶಾಂತಿಯ ಪ್ರತೀಕವಾದ ಫ್ಲಾಗ್ ಆಫ್‌ದ ರೇಸ್ ಎಂಬ 5 ಬಣ್ಣಗಳ ಪತಾಕೆಯೇ ಈ ಧ್ವಜ ತಯಾರಿಸಲು ಬೆಕರ್‌ಗೆ ಪ್ರೇರಣೆಯಾಗಿತ್ತು. ಆದಾಗ್ಯೂ, ಬೇಕರ್ ತಯಾರಿಸಿದ ಮೊದಲ ಧ್ವಜದಲ್ಲಿ 8 ಬಣ್ಣಗಳಿದ್ದವು. ಗುಲಾಬಿ (ಲಿಂಗಭೇದ), ಇಂಡಿಗೋ (ಒಗ್ಗಟ್ಟು), ಕೆಂಪು (ಬದುಕು), ಕೇಸರಿ (ಸಾಂತ್ವನ), ಹಳದಿ (ಸೂರ್ಯ), ಹಸಿರು (ಪ್ರಕೃತಿ), ನೀಲಿ (ಕಲಾಭಿರುಚಿ), ನೇರಳೆ (ಜೀವನೋತ್ಸಾಹ) ಹೀಗೆ ಪ್ರತೀ ಬಣ್ಣಗೂ ಒಂದೊಂದು ಅರ್ಥ ನೀಡಿ ಬೇಕರ್ ಧ್ವಜ ವಿನ್ಯಾಸ ಮಾಡಿದ್ದರು.

ಏತನ್ಮಧ್ಯೆ, ಸಲಿಂಗಿಗಳಿಗೆ ಮೊದಲ ಬಾರಿ ಸಾರ್ವಜನಿಕವಾಗಿ ಬೆಂಬಲ ಸೂಚಿಸಿದ ಹಾರ್ವಿ ಮಿಲ್ಕ್ ಎಂಬ ಸ್ಯಾನ್‌ಫ್ರಾನ್ಸಿಸ್ಕೋ ಸಿಟಿ ಸೂಪರ್‌ವೈಸರ್‌ನ್ನು ಹತ್ಯೆ ಮಾಡಿದ್ದನ್ನು ಪ್ರತಿಭಟಿಸಿ ನಡೆದ ರ್ಯಾಲಿಗಾಗಿ ಈ ಧ್ವಜ ವಿನ್ಯಾಸ ಮಾಡಲಾಗಿತ್ತು. ಧ್ವಜ ತಯಾರಿಸುವ ಕಂಪನಿಯೊಂದನ್ನು ಸಮೀಪಿಸಿದಾಗ ವಿನ್ಯಾಸದಲ್ಲಿರುವ ‘ಹಾಟ್ ಪಿಂಕ್’ ಬಣ್ಣ ಸಿಗುವುದು ಕಷ್ಟ ಎಂಬುದು ಗೊತ್ತಾಯಿತು. ಆಗ ಪಿಂಕ್ ಬಣ್ಣವನ್ನು ಧ್ವಜದಿಂದ ತೆಗೆಯಲಾಯಿತು. ರ್ಯಾಲಿಯ ಇಕ್ಕೆಲಗಳಲ್ಲಿಯೂ ಮೂರು ಮೂರು ಬಣ್ಣಗಳನ್ನು ಧರಿಸಿ ಜಾಥಾ ನಡೆಸಲು ಸುಲಭವಾಗುತ್ತದೆ ಎಂಬ ಕಾರಣಕ್ಕಾಗಿ ಇಂಡಿಗೋ ಬಣ್ಣವನ್ನೂ ಅದರಿಂದ ಕೈ ಬಿಡಲಾಯಿತು.

1978 ಜೂನ್ 25ರಂದು ನಡೆದ ‘ಗೇ ಫ್ರೀಡಂ ಡೇ ‘(Gay Freedom Day)ಪರೇಡ್‌ನಲ್ಲಿ ಬೆಕರ್ ಅವರು ವಿನ್ಯಾಸ ಮಾಡಿದ 6 ಬಣ್ಣಗಳಿರುವ ಧ್ವಜವನ್ನು ಮೊದಲ ಬಾರಿ ಹಾರಿಸಲಾಯಿತು. ಇದಾದನಂತರ ಧ್ವಜದಲ್ಲಿ ಹಲವು ಬಣ್ಣಗಳ ಬದಲಾವಣೆಯೂ ಆಯಿತು. ಆದರೆ ಪತಾಕೆ ತಯಾರಕರ ಇಂಟರ್‌ನ್ಯಾಷನಲ್ ಕಾಂಗ್ರೆಸ್ ಬೆಕರ್ ವಿನ್ಯಾಸ ಮಾಡಿದ ಪತಾಕೆಗೆ ಅಂಗೀಕಾರ ನೀಡಿತು. ಅನಂತರ ಮೇಲೆ ಕೆಂಪು ಮತ್ತು ಕೆಳಭಾಗದಲ್ಲಿ ನೇರಳೆ ಬಣ್ಣವಿರುವ 6 ಬಣ್ಣಗಳ ರೈನ್‌ಬೋ ಪತಾಕೆ ಸಲಿಂಗಿಗಳ ಅಭಿಮಾನ ಪತಾಕೆಯಾಗಿ ಕಂಗೊಳಿಸಿತು.

-kannadaprabha

Write A Comment