ಅಂತರಾಷ್ಟ್ರೀಯ

ನಾಯಿಗಳನ್ನು ಪೂಜಿಸುವ ಹಬ್ಬ ‘ಕೂಕರ್ ತಿಹಾರ್‌’: ಎಲ್ಲ ನಾಯಿಗಳಿಗೂ ಒಂದು ದಿನ ಬಂದೇ ಬರುತ್ತದೆ

Pinterest LinkedIn Tumblr

tihar-festivalಕಾಠ್ಮಂಡು: ಕೂಕರ್ ತಿಹಾರ್, ಇದು ನಾಯಿಗಳ ಹಬ್ಬ. ಹೌದು ನೇಪಾಳದಲ್ಲಿ ನಾಯಿಯ ನಿಯತ್ತು, ಪ್ರೀತಿಯನ್ನು ಕೊಂಡಾಡಿ ವರುಷಕ್ಕೊಮ್ಮೆ ಅದನ್ನು ಪೂಜಿಸುವ ಹಬ್ಬ ನಡೆಯುತ್ತದೆ. 5 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಎರಡನೇ ದಿನ ನಾಯಿಯನ್ನು ಪೂಜಿಸಲಾಗುತ್ತದೆ.

ನೇಪಾಳದಲ್ಲಿ ನೆವಾರ್ ವಿಭಾಗಕ್ಕೆ ಸೇರಿದ ಜನರು ಈ ರೀತಿಯ ವಿಶೇಷ ಹಬ್ಬವನ್ನು ಅಕ್ಟೋಬರ್ ತಿಂಗಳಲ್ಲಿ ಆಚರಿಸುತ್ತಾರೆ. ಕೃಷ್ಣ ಕಾರ್ತಿಕದ ತ್ರಯೋದಶಿಯಂದು ಆರಂಭವಾಗುವ ಈ ಹಬ್ಬ ಕಾರ್ತಿಕ ತಿಂಗಳಿನ ಶುಕ್ಲ ದ್ವಿತೀಯವರೆಗೆ ನಡೆಯುತ್ತದೆ.

ಕೂಕರ್ ತಿಹಾರ್ ಅಥವಾ ಕೂಕರ್ ಪೂಜೆಯ ದಿನ ಇಲ್ಲಿನ ಜನರು ನಾಯಿಗಳನ್ನು ಪೂಜಿಸುತ್ತಾರೆ. ನಾಯಿಗಳ ಹಣೆಗೆ ಕುಂಕುಮನ್ನಿಟ್ಟು ನಾಯಿಯ ಇಷ್ಟ ಆಹಾರವನ್ನು ಯಥೇಚ್ಛವಾಗಿ ತಿನ್ನಿಸಲಾಗುತ್ತದೆ. ನೇಪಾಳದ ಜನರ ನಂಬಿಕೆಯ ಪ್ರಕಾರ ಮೃತ್ಯುದೇವನಾದ ಯಮನ ಸಂದೇಶ ವಾಹಕವಾಗಿದೆ ನಾಯಿ. ಆದ್ದರಿಂದಲೇ ವರುಷಕ್ಕೊಮ್ಮೆ ನಡೆಯುವ ಈ ಹಬ್ಬದಲ್ಲಿ ನಾಯಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಈ ಹಬ್ಬವು ಭಾರತದಲ್ಲಿ ದೀಪಾವಳಿಯನ್ನು ಹೋಲುವಂತಿದೆ. ದೀಪ ಬೆಳಗಿಸಿ ಆಚರಿಸುವ ಈ ಹಬ್ಬದಲ್ಲಿ ದೇವರನ್ನು ಮಾತ್ರವಲ್ಲ ನಿತ್ಯ ಜೀವನದಲ್ಲಿ ಮನುಷ್ಯನಿಗೆ ಸಹಾಯ ಮಾಡುವ ಕಾಗೆ, ಹಸು, ನಾಯಿ ಮೊದಲಾದ ಪ್ರಾಣಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಹಬ್ಬದದಲ್ಲಿ 5 ದಿನಗಳೂ ಪೂಜೆಯ ದಿನಗಳಾಗಿವೆ. ಪ್ರತಿಯೊಂದು ದಿನವೂ ಒಂದೊಂದು ಪ್ರಾಣಿಗಳಿಗೆ ಅರ್ಪಿತವಾಗಿದೆ. ಮೊದಲನೇ ದಿನ ರಾವಣನ ಪ್ರತಿರೂಪವಾದ ಕಾಗೆಗೆ, ಎರಡನೇ ದಿನ ನಾಯಿಗಳಿಗೆ, ಮೂರನೇ ದಿನ ಗೋವುಗಳಿಗೆ, ನಾಲ್ಕನೇ ದಿನ ಹೋರಿಗಳಿಗೆ, ಐದನೇ ದಿನ ಮನುಷ್ಯರಿಗೆ ಅರ್ಪಿತವಾಗಿದೆ.

ಚೀನಾದಲ್ಲಿ ನಾಯಿಗಳನ್ನು ಸುಟ್ಟು ತಿನ್ನುವ ಹಬ್ಬ ನಡೆದದ್ದು ಸುದ್ದಿಯಾದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ನಾಯಿಗಳನ್ನು ಪೂಜಿಸುವ ಹಬ್ಬ ಈಗ ಎಲ್ಲರ ಗಮನ ಸೆಳೆದಿದೆ. ಮನುಷ್ಯರೊಂದಿಗೆ ಬದುಕುತ್ತಾ, ನಿಷ್ಠೆಗೆ ಹೆಸರುವಾಸಿಯಾದ ಈ ನಾಯಿಗಳ ಮೇಲೆ ಕರುಣೆ ಇರಲಿ ಎಂಬ ಪ್ರಾರ್ಥನೆ ನೇಪಾಳಿ ಜನತೆಯದ್ದು. ಪ್ರಾಣಿಗಳ ಪ್ರೀತಿಗೆ ಪ್ರತಿಯಾಗಿ ಅವುಗಳಿಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸುವ ನೇಪಾಳಿಗರ ಪ್ರಾಣಿ ಪ್ರೀತಿಗೆ ಸಲಾಂ.

Write A Comment