ಲಘು ವಿಮಾನವೊಂದು ಹಾರಾಟ ನಡೆಸುವುದಕ್ಕೂ ಮುನ್ನ ಬೆಕ್ಕೊಂದು ಆಕಸ್ಮಿಕವಾಗಿ ಅದರ ರೆಕ್ಕೆಯಲ್ಲಿ ಸೇರಿಕೊಂಡಿದ್ದು, ವಿಮಾನ ಹಾರಾಟದ ವೇಳೆ ಇದನ್ನು ಗಮನಿಸಿದ ಪೈಲೆಟ್ ದೃತಿಗೆಡದೆ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣ ಯೂ ಟ್ಯೂಬ್ ನಲ್ಲಿ ಹರಿದಾಡುತ್ತಿದೆ.
ಫ್ರೆಂಚ್ ಗಯಾನಾದಲ್ಲಿ ಈ ಘಟನೆ ನಡೆದಿದ್ದು, ತರಬೇತಿ ವಿಮಾನವೊಂದರಲ್ಲಿ ಪೈಲೆಟ್ ಮತ್ತು ಸಹ ಪೈಲೆಟ್ ಆಗಿ ಮಹಿಳೆಯೊಬ್ಬರಿದ್ದರೆನ್ನಲಾಗಿದೆ. ವಿಮಾನ ಆಗಸದಲ್ಲಿದ್ದ ವೇಳೆ ಈ ಬೆಕ್ಕನ್ನು ಪೈಲೆಟ್ ಗಮನಿಸಿದ್ದು, ತಾವು ಕೂಗಿದರೆ ಅನಾಹುತ ಸಂಭವಿಸುತ್ತದೆಂಬ ಕಾರಣಕ್ಕಾಗಿ ಅದರ ಕಡೆ ಹೆಚ್ಚಿನ ಗಮನ ನೀಡಿಲ್ಲ.
ಈ ಬೆಕ್ಕು ಸಹ ವಿಮಾನ ಹೊಯ್ದಾಡುತ್ತಿದ್ದ ಕಾರಣ ತನ್ನ ಕಾಲಿನಿಂದಲೇ ಬ್ಯಾಲೆನ್ಸ್ ಮಾಡಿಕೊಂಡು ಕುಳಿತಿದೆ. ಕಡೆಗೂ ಪೈಲೆಟ್ ಸುರಕ್ಷಿತವಾಗಿ ವಿಮಾನವನ್ನಿಳಿಸಿದ್ದು, ಬೆಕ್ಕನ್ನು ಹಿಡಿಯಲೆಂದು ಹೋಗುತ್ತಿದ್ದಂತೆ ಚಂಗನೆ ನೆಗೆದು ಓಡಿ ಹೋಗಿದೆ. ವಿಮಾನದ ಪೈಲೆಟ್ ಈ ವಿಡಿಯೋವನ್ನು ‘ರಿಮೂವ್ ದ ಕ್ಯಾಟ್ ಬಿಫೋರ್ ದ ಫ್ಲೈಟ್’ ಎಂಬ ಶೀರ್ಷಿಕೆಯಡಿ ಈಗ ಸಾಮಾಜಿಕ ಜಾಲ ತಾಣ ಯೂ ಟ್ಯೂಬ್ ನಲ್ಲಿ ಹಾಕಿದ್ದು, ಹಲವಾರು ಮಂದಿ ಈಗಾಗಲೇ ಇದನ್ನು ವೀಕ್ಷಿಸಿದ್ದಾರೆ.
