ಅಂತರಾಷ್ಟ್ರೀಯ

ಕಾಬೂಲ್ ನಲ್ಲಿ ಉಗ್ರರ ದಾಳಿಗೆ ನಾಲ್ವರು ಭಾರತೀಯರು ಬಲಿ

Pinterest LinkedIn Tumblr

kabul-attack

ಕಾಬೂಲ್, ಮೇ 14-ನಾಲ್ವರು ಭಾರತೀಯರು ಸೇರಿದಂತೆ ಐವರು ವಿದೇಶಿಯರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಅಘ್ಘಾನಿಸ್ತಾನದ ರಾಜಧಾನಿಯಾದ ಇಲ್ಲಿ  ಇಂದು ಬೆಳಗ್ಗೆ ನಡೆದಿದೆ. ಇಲ್ಲಿನ ಕಾಬೂಲ್ ಕೊಲೋಲ ಪುಸ್ತ ಪ್ರದೇಶದಲ್ಲಿ ಪಾರ್ಕ್ ಪ್ಯಾಲೇಸ್ ಅತಿಥಿ  ಗೃಹದಲ್ಲಿ ತಂಗಿದ್ದ ವಿದೇಶಿಯರನ್ನು ಗುರಿಯಾಗಿಟ್ಟುಕೊಂಡು ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ.  ಉಗ್ರರ ದಾಳಿಗೆ ನಾಲ್ವರು ಭಾರತೀಯರು ಸೇರಿದಂತೆ ಐವರು ವಿದೇಶಿಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಅಬ್ದುಲ್ ರೆಹಮಾನ್ ರಹಿಮಿ ತಿಳಿಸಿದ್ದಾರೆ.

ಸತತ ಐದು ಗಂಟೆಗಳ ಕಾಲ ಉಗ್ರರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆಯಿತು. ಸಾವನ್ನಪ್ಪಿರುವವರ ಸಂಖ್ಯೆ ಈವರೆಗೂ ಖಚಿತಗೊಂಡಿಲ್ಲ. ಗಂಭೀರವಾಗಿ ಕೆಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅತಿಥಿ ಗೃಹದಲ್ಲಿ ತಂಗಿದ್ದ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು 44 ಮಂದಿ ಇಲ್ಲಿ ಸಿಲುಕಿಕೊಂಡಿದ್ದರು. ಭದ್ರತಾ ಪಡೆಗಳು ಉಗ್ರರನ್ನು ಹಿಮ್ಮೆಟ್ಟಿಸಿದ್ದರಿಂದ ಕೆಲವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ ಎಂದು ಅಘ್ಫಾನಿಸ್ತಾನದ ರಾಯಭಾರಿ ಅಮರ್ ಸಿನ್ಹಾ ಟ್ವೀಟ್ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿರುವುದನ್ನು ಖಚಿತ ಪಡಿಸಿರುವ ಸಿನ್ಹಾ ಭಾರತೀಯರು ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗಬಹುದೆಂದು ಹೇಳಿದ್ದಾರ.  ತಾಲಿಬಾನ್ ಉಗ್ರರು ಘಟನೆಯ ಹೊಣೆ ಹೊತ್ತುಕೊಂಡಿದ್ದಾರೆ. ಅತಿಥಿ ಗೃಹದಲ್ಲಿ ಇನ್ನೂ ಕೆಲವು ಉಗ್ರರು ಅಡಗಿ ಕುಳಿತಿರಬಹುದೆಂಬ ಶಂಕೆಯಿಂದ ಕಾರ್ಯಾಚರಣೆ ಮುಂದುವರೆಸಲಾಗಿದೆ.  ಅತಿಥಿ ಗೃಹದಲ್ಲಿ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ತಂಗಿದ್ದರು. ಇದಕ್ಕೆ ಹೊಂದಿಕೊಂಡಿರುವಂತೆ ಭಾರತದ ರಾಯಭಾರಿ ಕಚೇರಿ ಸನಿಹದಲ್ಲಿಯೇ ಇದೆ.  ಎರಡು ತಿಂಗಳ ಹಿಂದೆಯಷ್ಟೆ ಉಗ್ರರು ಅಮೆರಿಕಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಇಲ್ಲಿನ ಸೆರೆನಾ ಹೊಟೇಲ್ ಬಳಿ ಗುಂಡಿನ ದಾಳಿ ನಡೆಸಿದಾಗ 21 ಮಂದಿ ಸಾವನ್ನಪ್ಪಿದ್ದರು.

Write A Comment