ಅಂತರಾಷ್ಟ್ರೀಯ

ಏರ್‌ಏಷ್ಯಾ ಪತನ: 30 ದೇಹಗಳ ಪತ್ತೆ; ಐದು ದೇಹಗಳು ಆಸನಕ್ಕೆ ಬಿಗಿದುಕೊಂಡಿದ್ದ ಸ್ಥಿತಿಯಲ್ಲೇ ಪತ್ತೆ

Pinterest LinkedIn Tumblr

air

ಪಂಗ್‌ಕಲನ್ ಬುನ್, ಜ. 2: ಇಂಡೋನೇಷ್ಯಾದ ಏರ್‌ಏಷ್ಯಾ ವಿಮಾನದ ಅವಶೇಷಗಳಿಗಾಗಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ಒಟ್ಟು 30 ಮೃತ ದೇಹಗಳನ್ನು ಹೊರದೆಗೆದಿದ್ದಾರೆ. ಈ ಪೈಕಿ ಐದು ದೇಹಗಳು ವಿಮಾನದ ಆಸನಕ್ಕೆ ಬಿಗಿದುಕೊಂಡಿದ್ದ ಸ್ಥಿತಿಯಲ್ಲೇ ಪತ್ತೆ ಆಗಿವೆ ಎಂದು ಇಂಡೋನೇಷ್ಯಾದ ನೌಕಾ ಅಧಿಕಾರಿಯೊಬ್ಬರು ತಿಳಿಸಿದರು.

ಇಂದು ಜಾವಾ ಸಮುದ್ರದಲ್ಲಿ ಪತ್ತೆಹಚ್ಚಲಾದ ಏಳು ಶವಗಳ ಪೈಕಿ ಐದು ಶವಗಳು ಆಸನಕ್ಕೆ ಬಿಗಿದ ಸ್ಥಿತಿಯಲ್ಲೇ ಕಂಡುಬಂದಿವೆ ಎಂದು ಯುದ್ಧ ನೌಕೆ ಬುಂಗ್ ಟೋಮೊದ ಕಮಾಂಡರ್ ಕರ್ನಲ್ ಯಯಾನ್ ಸೋಫಿಯಾನ್ ಹೇಳಿದರು. ವಿಮಾನ 8501ರಿಂದ ಒಟ್ಟು 30 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ತಂಡದ ಮುಖ್ಯಸ್ಥ ಹೆನ್ರಿ ಬಂಬಾಂಗ್ ಸೋಲಿಸ್‌ಟ್ಯೊ ತಿಳಿಸಿದರು.

ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ಹಾರಾಟ ನಡೆಸುತ್ತಿದ್ದ ಏರ್‌ಏಷ್ಯಾ ವಿಮಾನ ರವಿವಾರ ಪತನಗೊಂಡಿತ್ತು. ನತದೃಷ್ಟ ವಿಮಾನದಲ್ಲಿ 162 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿಯಿದ್ದರು. ನಿನ್ನೆ ಶೋಧ ಕಾರ್ಯಕ್ಕೆ ಕೆಟ್ಟ ಹವಾಮಾನ ತಡೆಯುಂಟು ಮಾಡಿತ್ತು. ಈ ನಡುವೆ, ಅಂತಾರಾಷ್ಟ್ರೀಯ ಪರಿಣತರು ಅತ್ಯಾಧುನಿಕ ಉಪಕರಣಗಳ ನೆರವಿನಿಂದ ವಿಮಾನದ ಬ್ಲಾಕ್ ಬಾಕ್ಸ್ ಹಾರಾಟ ದಾಖಲೆಗಾಗಿ ಬೋರ್ನಿಯೊ ಸಮುದ್ರದಲ್ಲಿ ಹುಡುಕಾಡುತ್ತಿದ್ದಾರೆ.

ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹಾರಾಟ ಆರಂಭಿಸಿದ 40 ನಿಮಿಷಗಳ ಬಳಿಕ ಬಿರುಗಾಳಿಯೊಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಿಮಾನ ಕಡಿದಾಗಿ ಮೇಲ್ಮುಖವಾಗಿ ಏರಿತು ಹಾಗೂ ಈ ಹಂತದಲ್ಲಿ ವಿಮಾನ ಸ್ಥಗಿತಗೊಂಡಿತು ಎಂಬ ಸಂಭಾವ್ಯ ಕಾರಣದ ಬಗ್ಗೆ ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ.

ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿದಿತ್ತಾ?
ಜಕಾರ್ತ/ಲಂಡನ್, ಜ. 2: ಇಂಡೋನೇಷ್ಯಾದ ಏರ್‌ಏಷ್ಯಾ ವಿಮಾನವನ್ನು ತುರ್ತು ಪರಿಸ್ಥಿತಿಯಲ್ಲಿ ಪೈಲಟ್ ಸುರಕ್ಷಿತವಾಗಿ ಸಮುದ್ರದ ನೀರಿನ ಮೇಲೆ ಇಳಿಸಿದ್ದಾರೆ, ಆದರೆ ಅಂತಿಮವಾಗಿ ವಿಮಾನ ಪ್ರಕ್ಷುಬ್ಧ ಜಾವಾ ಸಮುದ್ರದಲ್ಲಿ ಮುಳುಗಿತು ಎಂದು ಗುರುವಾರ ಮಾಧ್ಯಮ ವರದಿಯೊಂದು ಹೇಳಿದೆ.

ಪತನಗೊಳ್ಳುವಾಗ ಅಥವಾ ಯಾವುದಕ್ಕಾದರೂ ಢಿಕ್ಕಿ ಹೊಡೆಯುವಾಗ ವಿಮಾನಗಳು ಸಂದೇಶಗಳನ್ನು ಕಳುಹಿಸುತ್ತವೆ. ಆದರೆ, ಏರ್‌ಏಷ್ಯಾ ವಿಮಾನದಿಂದ ಅಂಥ ಯಾವುದೇ ಸಂದೇಶ ಬಂದಿಲ್ಲ ಎಂದು ಪರಿಣತರನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

Write A Comment