ಅಂತರಾಷ್ಟ್ರೀಯ

ಮಕ್ಕಳ ಮೇಲಿನ ದಾಳಿ ರಾಷ್ಟ್ರೀಯ ದುರಂತ: ಶರೀಫ್

Pinterest LinkedIn Tumblr

karachi

ಕರಾಚಿ, ಡಿ. 16: ಪೇಶಾವರದ ಸೇನಾ ಶಾಲೆಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯಿಂದ ಉದ್ಭವಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಮಂಗಳವಾರ ಪೇಶಾವರಕ್ಕೆ ಧಾವಿಸಿದರು.

ತಾಲಿಬಾನ್ ನಡೆಸಿದ ಭೀಕರ ದಾಳಿಯಲ್ಲಿ 132 ಮಕ್ಕಳು ಹಾಗೂ 9 ಶಾಲಾ ಸಿಬ್ಬಂದಿ ಸೇರಿ ಒಟ್ಟು 141 ಮಂದಿ ಮೃತಪಟ್ಟಿದ್ದಾರೆ. 124 ಮಂದಿ ಗಾಯಗೊಂಡಿದ್ದಾರೆ.

ದಾಳಿಯನ್ನು ಖಂಡಿಸಿರುವ ಶರೀಫ್, ಮಕ್ಕಳ ಸಾವಿಗೆ ಕಾರಣರಾದ ಭಯೋತ್ಪಾದಕರನ್ನು ಸುಮ್ಮನೆ ಬಿಡಬಾರದು ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ನಾನು ಇಸ್ಲಾಮಾಬಾದ್‌ನಲ್ಲಿ ಕುಳಿತಿರಲು ಸಾಧ್ಯವಿಲ್ಲ. ಇದು ಅನಾಗರಿಕರು ನಡೆಸಿರುವ ರಾಷ್ಟ್ರೀಯ ದುರಂತವಾಗಿದೆ. ಈ ಶಾಲೆಯ ಮಕ್ಕಳು ನನ್ನ ಮಕ್ಕಳು’’ ಎಂದು ಪಾಕ್ ಪ್ರಧಾನಿ ಹೇಳಿಕೆಯೊಂದರಲ್ಲಿ ನುಡಿದರು.

ಪಾಕಿಸ್ತಾನದ ಪೇಷಾವರ್ ನಗರದಲ್ಲಿ ಸೇನೆಯ ಆಡಳಿತದಲ್ಲಿರುವ ಶಾಲೆಯೊಂದರ ಮೇಲೆ ಮಂಗಳವಾರ ಬೆಳಗ್ಗೆ ಹಠಾತ್ ದಾಳಿ ಮಾಡಿದ ಭಾರೀ ಶಸ್ತ್ರಧಾರಿಗಳಾಗಿದ್ದ ತಾಲಿಬಾನ್ ಉಗ್ರಗಾಮಿಗಳು ಶಾಲಾ ವಿದ್ಯಾರ್ಥಿಗಳು ಸೇರಿದಂತೆ 160ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಶಾಲಾ ವಿದ್ಯಾರ್ಥಿಗಳಾಗಿದ್ದಾರೆ.

ಆರು ಮಂದಿಯಿದ್ದ ಆತ್ಮಹತ್ಯಾ ದಾಳಿಕೋರರು ಪ್ಯಾರಾಮಿಲಿಟರಿ ಫ್ರಾಂಟಿಯರ್ ಕಾರ್ಪ್‌ನ ಸಮವಸ್ತ್ರ ಧರಿಸಿದ್ದರು. ಪೇಷಾವರ್ ನಗರದ ವಾರ್ಸಕ್ ರಸ್ತೆಯಲ್ಲಿರುವ ಆರ್ಮಿ ಪಬ್ಲಿಕ್ ಸ್ಕೂಲ್‌ನ ಆವರಣವನ್ನು ಬೆಳಗ್ಗೆ 10.30ರ ಹೊತ್ತಿಗೆ ಪ್ರವೇಶಿಸಿದ ಉಗ್ರಗಾಮಿಗಳು ತರಗತಿಗಳಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು ಎಂದು ಖೈಬರ್-ಪಖ್ತುನ್‌ಖ್ವಾ ಮುಖ್ಯಮಂತ್ರಿ ಪರ್ವೆಜ್ ಖಟಕ್ ತಿಳಿಸಿದ್ದಾರೆ.

ತಾಲಿಬಾನ್ ಉಗ್ರಗಾಮಿಗಳ ದಾಳಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಯರು ಮತ್ತು ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಕಡೇಪಕ್ಷ 122 ಮಕ್ಕಳು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮೂಲಗಳು ತಿಳಿಸಿವೆ.

ಘಟನೆಯ ಹಿನ್ನೆಲೆಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡ ಪಾಕ್ ಸೇನೆ, ಉಗ್ರಗಾಮಿಗಳ ಒತ್ತೆಸೆರೆಯಲ್ಲಿದ್ದ ಮಕ್ಕಳು, ಶಿಕ್ಷಕ-ಶಿಕ್ಷಕಿಯರನ್ನು ರಕ್ಷಣೆ ಮಾಡಿದೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಇಬ್ಬರು ಉಗ್ರಗಾಮಿಗಳು ಸ್ಫೋಟಿಸಿಕೊಂಡು (ಆತ್ಮಹತ್ಯಾ ದಾಳಿ) ಸತ್ತರೆ, ನಾಲ್ವರು ಸೇನಾ ಸಿಬ್ಬಂದಿಯ ಗುಂಡಿಗೆ ಬಲಿಯಾಗಿದ್ದಾರೆ. ಸಂಜೆ ಹೊತ್ತಿಗೆ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಹೃದಯ ಛಿದ್ರ: ಮಲಾಲಾ
ಲಂಡನ್, ಡಿ. 16: ಪೇಶಾವರದ ಶಾಲೆಯೊಂದರಲ್ಲಿ ತಾಲಿಬಾನ್ ಉಗ್ರರು ನಡೆಸಿರುವ ಮಕ್ಕಳ ಮಾರಣಹೋಮದಿಂದ ತನ್ನ ಹೃದಯ ಛಿದ್ರವಾಗಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಪಾಕಿಸ್ತಾನದ ಮಲಾಲಾ ಯೂಸುಫ್‌ಝಾಯಿ ಹೇಳಿದ್ದಾರೆ.

2012ರ ಅಕ್ಟೋಬರ್‌ನಲ್ಲಿ ಸ್ವತಃ ಮಲಾಲಾ ಮೇಲೆ ತಾಲಿಬಾನ್ ದಾಳಿ ನಡೆಸಿತ್ತು. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಲಾಲಾ ಬಳಿಕ ಬ್ರಿಟನ್‌ನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
17 ವರ್ಷದ ಮಲಾಲಾ ಈಗ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾರೆ.

‘‘ಪೇಶಾವರದಲ್ಲಿ ಭಯೋತ್ಪಾದಕರು ನಡೆಸುತ್ತಿರುವ ಮಕ್ಕಳ ವಿವೇಚನಾರಹಿತ ಹಾಗೂ ಭೀಭತ್ಸ ಹತ್ಯೆಯಿಂದ ನನ್ನ ಹೃದಯ ಛಿದ್ರವಾಗಿದೆ. ಶಾಲೆಯಲ್ಲಿ ತಮ್ಮಷ್ಟಕ್ಕೆ ಕಲಿಯುತ್ತಿರುವ ಮಕ್ಕಳಿಗೂ ಹೊರಗಿನ ರಾಜಕೀಯಕ್ಕೂ ನಂಟು ಕಲ್ಪಿಸಬಾರದು’’ ಎಂದು ಮಲಾಲಾ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ. ಮಲಾಲಾ ಇತ್ತೀಚೆಗಷ್ಟೆ ಭಾರತದ ಕೈಲಾಸ್ ಸತ್ಯಾರ್ಥಿ ಜೊತೆಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಒಬಾಮ ಖಂಡನೆ:
ಪೇಶಾವರದ ಸೇನಾ ಶಾಲೆಯ ಮೇಲೆ ತಾಲಿಬಾನಿಗಳು ನಡೆಸಿದ ಬರ್ಬರ ದಾಳಿಯನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಖಂಡಿಸಿದ್ದಾರೆ. ಪಾಕಿಸ್ತಾನೀಯರ ಈ ಸಂಕಷ್ಟದ ಸಮಯದಲ್ಲಿ ಅಮೆರಿಕದ ಜನತೆ ಅವರೊಂದಿಗೆ ಇರುತ್ತಾರೆ ಎಂದು ಹೇಳಿಕೆಯೊಂದರಲ್ಲಿ ಒಬಾಮ ಹೇಳಿದ್ದಾರೆ.

ನಮ್ಮ ನೋವು ಅವರಿಗೂ ತಿಳಿಯಲಿ: ತಾಲಿಬಾನ್
ಪೇಶಾವರ, ಡಿ. 16: ಸರಕಾರ ನಮ್ಮ ಕುಟುಂಬಗಳು ಮತ್ತು ಮಹಿಳೆಯರ ಮೇಲೆ ದಾಳಿ ನಡೆಸುತ್ತಿದೆ, ಅದಕ್ಕಾಗಿ ನಾವು ಸೇನಾ ಶಾಲೆಯ ಮೇಲೆ ದಾಳಿ ನಡೆಸಿದೆವು ಎಂದು ತಾಲಿಬಾನ್ ವಕ್ತಾರ ಮುಹಮ್ಮದ್ ಉಮರ್ ಖುರಾಸನಿ ಹೇಳಿದ್ದಾನೆ.

‘‘ನಮ್ಮ ನೋವು ಏನೆಂಬುದು ಅವರಿಗೂ ಅರ್ಥವಾಗಬೇಕು’’ ಎಂದಿದ್ದಾನೆ.

ಸಾವಿನ ದವಡೆಯಿಂದ ಪಾರಾಗಿ ಬಂದ ವಿದ್ಯಾರ್ಥಿಯ ಕತೆ
ಪೇಶಾವರ, ಡಿ. 16: ತಾಲಿಬಾನಿಗಳ ಕೈಯಿಂದ ಜೀವಸಹಿತ ಪಾರಾಗಿ ಬಂದ ಹದಿ ಹರೆಯದ ಶಾಲಾ ವಿದ್ಯಾರ್ಥಿಯೊಬ್ಬ ತಾನು ಪಾರಾಗಿ ಬಂದ ಕತೆಯನ್ನು ಹೀಗೆ ವಿವರಿಸಿದ್ದಾನೆ.

ಭಯೋತ್ಪಾದಕರು ತನ್ನ ಎರಡೂ ಕಾಲುಗಳಿಗೆ ಗುಂಡು ಹಾರಿಸಿದಾಗ ತಾನು ಸತ್ತಂತೆ ನಟಿಸಿದೆ ಎಂದು ಬಾಲಕ ಹೇಳಿದ್ದಾನೆ.

ನಗರದ ಲೇಡಿ ರೀಡಿಂಗ್ ಆಸ್ಪತ್ರೆಯ ಮಂಚದಲ್ಲಿ ಮಾತನಾಡಿದ 16 ವರ್ಷದ ಶಾರುಖ್ ಖಾನ್, ಪ್ಯಾರಾಮಿಲಿಟರಿ ಸಮವಸ್ತ್ರಗಳನ್ನು ತೊಟ್ಟ ನಾಲ್ವರು ಬಂದೂಕುಧಾರಿಗಳು ನುಗ್ಗಿದಾಗ ತಾನು ಮತ್ತು ಸಹಪಾಠಿಗಳು ಶಾಲೆಯ ಸಭಾಂಗಣದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಪಾಲ್ಗೊಂಡಿದ್ದೆವು ಎಂದು ಬಾಲಕ ಹೇಳಿದ್ದಾನೆ.

‘‘ಕೆಳಗೆ ಬಾಗಿ ಡೆಸ್ಕ್‌ಗಳ ಅಡಿಯಲ್ಲಿ ಅಡಗಿಕೊಳ್ಳುವಂತೆ ಯಾರೊ ಚೀರಿದರು. ಅಷ್ಟರಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದರು. ಒಬ್ಬ ಭಯೋತ್ಪಾದಕ ಬೊಬ್ಬೆ ಹಾಕಿದನು: ‘ಡೆಸ್ಕ್‌ನ ಕೆಳಗೆ ತುಂಬಾ ಮಕ್ಕಳಿದ್ದಾರೆ. ಅವರನ್ನು ಕೊಲ್ಲಿ’. ನನ್ನ ಕಾಲಿಗೆ ಮೊಣಗಂಟುಗಳ ಕೆಳಗೆ ಗುಂಡು ಹಾರಿಸಿದರು.’’

‘‘ನಾನು ಚೀರದಂತೆ ನನ್ನ ಟೈ ಮಡಚಿ ಬಾಯಿಗೆ ತುರುಕಿಸಿದೆ. ಸತ್ತಂತೆ ಮಲಗಿದೆ. ಮಕ್ಕಳಿಗಾಗಿ ಹುಡುಕಾಡುತ್ತಾ ಒಬ್ಬ ನನ್ನ ಪಕ್ಕಕ್ಕೆ ಬಂದ. ಕಣ್ಣುಗಳನ್ನು ಮುಚ್ಚಿದೆ. ನನ್ನ ದೇಹ ನಡುಗುತ್ತಿತ್ತು. ಸಾವು ನನ್ನ ಪಕ್ಕದಲ್ಲೇ ಇತ್ತು. ಗುಂಡಿನ ದಾಳಿಯನ್ನು ನಿರೀಕ್ಷಿಸುತ್ತಾ ಸತ್ತಂತೆ ಮಲಗಿದೆ. ಆ ಕ್ಷಣಗಳನ್ನು ನಾನೆಂದೂ ಮರೆಯಲಾರೆ’’ ಎಂದು ಶಾರುಖ್ ಖಾನ್ ಹೇಳಿದನು.

10 ವರ್ಷಗಳ ಹಿಂದಿನ ಬೆಸ್ಲನ್ ದಾಳಿ
ಪೇಶಾವರದಲ್ಲಿ ಸೇನೆ ನಡೆಸುವ ಶಾಲೆಯೊಂದರ ಮೇಲೆ ತಾಲಿಬಾನ್ ಭಯೋತ್ಪಾದಕರು ನಡೆಸಿರುವ ಭೀಕರ ದಾಳಿ 10 ವರ್ಷಗಳ ಹಿಂದೆ ರಶ್ಯದಲ್ಲಿ ನಡೆದ ಇದೇ ಮಾದರಿಯ ದಾಳಿಯೊಂದನ್ನು ಜ್ಞಾಪಿಸಿದೆ.
ಭಯೋತ್ಪಾದಕರು 2004 ಸೆಪ್ಟಂಬರ್ 1ರಂದು ರಶ್ಯದ ನಾರ್ತ್ ಒಸೆಶಿಯದಲ್ಲಿರುವ ಬೆಸ್ಲನ್ ಎಂಬ ಪಟ್ಟಣದ ಶಾಲೆಯ ಮಕ್ಕಳ ಮೇಲೆ ದಾಳಿ ನಡೆಸಿದ್ದರು.

ಶಾಲೆಯ ಮುತ್ತಿಗೆ ಬಿಕ್ಕಟ್ಟು ಮೂರು ದಿನಗಳ ಕಾಲ ಸಾಗಿತ್ತು ಹಾಗೂ ಈ ಅವಧಿಯಲ್ಲಿ 1,100ಕ್ಕೂ ಅಧಿಕ ಮಂದಿಯನ್ನು ಒತ್ತೆಸೆರೆಯಲ್ಲಿಡಲಾಗಿತ್ತು. ಅವರ ಪೈಕಿ 777 ಮಕ್ಕಳು.

ಮುತ್ತಿಗೆಯ ಮೂರನೆ ದಿನದಂದು ಒತ್ತೆಯಾಳುಗಳು ಇದ್ದ ಕಟ್ಟಡಕ್ಕೆ ನುಗ್ಗಿದವು ಹಾಗೂ ನಂತರ ನಡೆದ ಹೋರಾಟದಲ್ಲಿ 186 ಮಕ್ಕಳು ಸೇರಿದಂತೆ 385 ಮಂದಿ ಸಾವನ್ನಪ್ಪಿದರು.

ಸಂಘರ್ಷದಲ್ಲಿ 31 ಭಯೋತ್ಪಾದಕರು ಮೃತಪಟ್ಟರು ಹಾಗೂ ಓರ್ವ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಜೀವಂತವಾಗಿ ಸೆರೆ ಹಿಡಿದವು.

Write A Comment