ಅಂತರಾಷ್ಟ್ರೀಯ

ಸೇನಾ ಶಾಲೆ ಮೇಲೆ ಉಗ್ರರ ದಾಳಿ: 100 ಮಕ್ಕಳು ಸೇರಿ 132 ಮಂದಿ ಸಾವು

Pinterest LinkedIn Tumblr

Taliban-AP

ಪೇಶಾವರ: ಪಾಕಿಸ್ತಾನದಲ್ಲಿ ಉಗ್ರರು ಇಂದು ಅಟ್ಟಹಾಸ ಮೆರೆದಿದ್ದಾರೆ. ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ 100 ಮಕ್ಕಳು ಸೇರಿದಂತೆ 132 ಮಂದಿ ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೇನಾ ಸಮವಸ್ತ್ರದಲ್ಲಿ ಶಾಲೆಯೊಳಗೆ ನುಗ್ಗಿದ ಉಗ್ರರು ಶಾಲಾ ಮಕ್ಕಳ ಮೇಲೆ ಮನಬಂದತೆ ಗುಂಡಿನ ದಾಳಿ ನಡೆಸಿ, ಪೈಶಾಚಿಕ ಕೃತ್ಯ ಎಸಗಿದ್ದಾರೆ. ಶಾಲೆಯ ಒಳಗೆ ಸುಮಾರು 6 ಉಗ್ರಗಾಮಿಗಳು ನುಗ್ಗಿದ್ದು, 5 ಉಗ್ರರನ್ನು ಸದೆಬಡೆಯುವಲ್ಲಿ ಪಾಕ್ ಸೇನಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಇನ್ನೂ ಮೂವರು ಉಗ್ರರು ಒಳಗೆ ಅಡಗಿಕುಳಿತಿದ್ದು, ಸೇನಾ ಸಿಬ್ಬಂದಿ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸೇನಾ ಶಾಲೆಯ ಸುತ್ತ ಸೇನಾ ಯೋಧರು ಸುತ್ತುವರೆದಿದ್ದು, ಶಾಲೆಯ ಮೇಲೆ 2 ಹೆಲಿಕಾಪ್ಟರ್‌ಗಳು ಗಸ್ತು ತಿರುಗುತ್ತಿವೆ.

100ಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳನ್ನಾಗಿರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಉಳಿದ ಮಕ್ಕಳು ಸುರಕ್ಷಿತವಾಗಿ ಹಿಂದಿರುಗಿ ಬರಲು ಪೋಷಕರು ಪ್ರಾರ್ಥನೆಗಳ ಮೊರೆ ಹೋಗಿದ್ದಾರೆ.

ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿದೆ.

ದಾಳಿ ಕುರಿತು ತೆಹ್ರಿಕ್-ಇ-ತಾಲಿಬಾನ್ ಸಂಘಟನೆ ಸ್ಪಷ್ಪನೆ ನೀಡಿದೆ. ಪಾಕಿಸ್ತಾನ ಸೇನಾ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದ್ದೇವೆ. ಹಿರಿಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಈ ಹಿಂದೆ ಪಾಕ್ ಸೇನೆ ವಜಿರಿಸ್ತಾನದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 179 ಮಂದಿ ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದರು.

ಉಗ್ರರ ದಾಳಿ ಖಂಡಿಸಿದ ಪಾಕ್ ಪ್ರಧಾನಿ

ಮಕ್ಕಳ ಮೇಲಿನ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ತೀವ್ರವಾಗಿ ಖಂಡಿಸಿದ್ದು, ಇದೊಂದು ಹೇಯ ಕೃತ್ಯವಾಗಿದ್ದು, ಉಗ್ರರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದಾರೆ.

Write A Comment