ರಾಷ್ಟ್ರೀಯ

ಕೊರೋನಾ: ದೇಶದಲ್ಲಿ 24 ಗಂಟೆಯಲ್ಲಿ 1,450 ಸೋಂಕು, ಸಾವಿನ ಸಂಖ್ಯೆ 652ಕ್ಕೆ ಏರಿಕೆ

Pinterest LinkedIn Tumblr


ನವದೆಹಲಿ: ದೇಶದಲ್ಲಿ ಕೊರೊನಾವೈರಸ್ ನ ದೃಢಪಟ್ಟ ಪ್ರಕರಣಗಳ ಸಂಖ್ಯೆ ಬುಧವಾರ ಸಂಜೆ ವೇಳೆಗೆ 1,450 ದಾಟಿದ್ದು ಒಟ್ಟು ಸಂಖ್ಯೆ 20,471ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಬುಧವಾರ ಸಂಜೆ ವೇಳೆಗೆ ಸಾವಿನ ಸಂಖ್ಯೆ 652ಕ್ಕೆ ಏರಿಕೆಯಾಗಿದ್ದು, ಬೆಳಿಗ್ಗೆಯಿಂದ 12 ಹೊಸ ಸಾವುಗಳು ವರದಿಯಾಗಿವೆ

ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿಹೆಚ್ಚು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಬುಧವಾರ 5,221ಕ್ಕೆ ಏರಿದ್ದು, ಸಾವಿನ ಸಂಖ್ಯೆ 251ಕ್ಕೇರಿದೆ.

ಗುಣಪಡಿಸಿದ ಮತ್ತು ಬಿಡುಗಡೆಯಾದ ಪ್ರಕರಣಗಳ ಸಂಖ್ಯೆಯಲ್ಲಿ ಸುಧಾರಣೆ ಕಂಡುಬಂದಿದ್ದು, ಈ ಸಂಖ್ಯೆ 3959ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ದೇಶದಲ್ಲಿ ಕೊವಿಡ್ -19ನ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ 15859 ರಷ್ಟಿದೆ. ಆದರೂ, ಸೋಂಕಿನ ಪ್ರಕರಣಗಳ ದ್ವಿಗುಣ ಪ್ರಮಾಣ ಸುಧಾರಿಸಿದೆ ಎಂದು ಸರ್ಕಾರ ಹೇಳಿದೆ.

ಇನ್ನು, ಗುಜರಾತ್ ನಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ರಾಜ್ಯದಲ್ಲಿ ಕಳೆದ ಎರಡು-ಮೂರು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 2272 ಕ್ಕೆ ಏರಿದೆ. ದೆಹಲಿಯಲ್ಲಿ ಈವರೆಗೆ 47 ಮಂದಿ ಸಾವನ್ನಪ್ಪಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2156ಕ್ಕೆ ಏರಿದೆ. ಮಧ್ಯಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 1592 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 80 ಸಾವುಗಳು ಸಂಭವಿಸಿವೆ.

ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ಪ್ರಕರಣಗಳ ಸಂಖ್ಯೆ ಕ್ರಮವಾಗಿ 1596 ಮತ್ತು 1801ಕ್ಕೆ ಏರಿಕೆಯಾಗಿದೆ. ಉತ್ತರಪ್ರದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1412ರಷ್ಟಿದೆ.

ಈ ಮಧ್ಯೆ, ಆರೋಗ್ಯ ವೃತ್ತಿಪರರು, ವೈದ್ಯಕೀಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರ ಮೇಲೆ ಯಾವುದೇ ಹಿಂಸಾಚಾರ ತಡೆಗಟ್ಟಲು ಸಾಕಷ್ಟು ಭದ್ರತೆಯನ್ನು ಒದಗಿಸುವಂತೆ ಗೃಹಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

Comments are closed.