ರಾಷ್ಟ್ರೀಯ

ತಿರುಚಿದ ಮೋದಿ ಫೋಟೋ ಪೋಸ್ಟ್: ಯುವಕನಿಗೆ 1 ವರ್ಷ ಸೋಶಿಯಲ್ ಮೀಡಿಯಾ ನಿಷೇಧ

Pinterest LinkedIn Tumblr


ತಮಿಳುನಾಡು(ಮದುರೈ):ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ರೂಪಾಂತರಗೊಳಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಕನ್ಯಾಕುಮಾರಿ ನಿವಾಸಿ ಜಬಿನ್ ಚಾರ್ಲ್ಸ್ ಎಂಬಾತನಿಗೆ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠ ಸೋಮವಾರ ನಿರೀಕ್ಷಣಾ ಜಾಮೀನು ನೀಡಿದ್ದು, ಒಂದು ವರ್ಷದವರೆಗೆ ಸಾಮಾಜಿಕ ಜಾಲತಾಣ ಉಪಯೋಗಿಸದಂತೆ ಆದೇಶ ನೀಡಿದೆ.

ಒಂದು ವೇಳೆ ಚಾರ್ಲ್ಸ್ ಸಾಮಾಜಿಕ ಜಾಲತಾಣ ಉಪಯೋಗಿಸುವುದು ಪತ್ತೆಯಾದರೆ ಫಿರ್ಯಾದಿದಾರರು ಈ ವ್ಯಕ್ತಿಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಕೋರ್ಟ್ ಗೆ ಮನವಿ ಸಲ್ಲಿಸಬಹುದು ಎಂದು ಜಸ್ಟೀಸ್ ಜಿ.ಆರ್.ಸ್ವಾಮಿನಾಥನ್ ತಿಳಿಸಿದ್ದಾರೆ.

ಅಲ್ಲದೇ ಪ್ರಧಾನಿ ಮೋದಿ ಅವರ ಭಾವಚಿತ್ರ ತಿರುಚಿದ್ದಕ್ಕೆ ಕ್ಷಮಾಪಣಾ ಪತ್ರವನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜಸ್ಟೀಸ್ ಸ್ವಾಮಿನಾಥನ್ ಚಾರ್ಲ್ಸ್ ಗೆ ನಿರ್ದೇಶನ ನೀಡಿದ್ದಾರೆ.

ಪ್ರಧಾನಿಯವರ ಫೋಟೋವನ್ನು ತಿರುಚಿ ಫೇಸ್ ಬುಕ್ ನಲ್ಲಿ ಚಾರ್ಲ್ಸ್ ಪೋಸ್ಟ್ ಮಾಡಿದ ನಂತರ ಬಿಜೆಪಿಯ ನಾನ್ಜಿಲ್ ರಾಜಾ ಎಂಬವರು ವಡಾಸೆರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಚಾರ್ಲ್ಸ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ವರದಿ ತಿಳಿಸಿದೆ.

ತಾನು ಈ ರೀತಿ ಪ್ರಧಾನಿಯವರ ತಿರುಚಿದ ಪೋಟೋ ಹಾಕಿರುವುದಕ್ಕೆ ಕ್ಷಮಾಪಣೆ ಕೇಳುತ್ತಿದ್ದೇನೆ. ಅಲ್ಲದೇ ಕೂಡಲೇ ನಾನು ಫೇಸ್ ಬುಕ್ ನಲ್ಲಿ ಆ ಫೋಟೋವನ್ನು ಬ್ಲಾಕ್ ಮಾಡಿದ್ದೆ. ಪ್ರಧಾನಿಯವರನ್ನು ಅಗೌರವಿಸುವ ಯಾವುದೇ ಹಕ್ಕು ಪ್ರಜೆಗಿಲ್ಲ ಎಂಬುದು ಮನವರಿಕೆಯಾಗಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಕ್ಷಮಾಪಣೆ ಪ್ರಕಟಿಸಲು ಸಿದ್ದ ಇರುವುದಾಗಿ ಚಾರ್ಲ್ಸ್ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.

Comments are closed.