ರಾಷ್ಟ್ರೀಯ

ಐಎಫ್‍ಎಫ್‍ಐ ನ ವಿಶೇಷ ಸ್ಪೆಷಲ್ ಐಕಾನ್ ಆಫ್ ಗೋಲ್ಡನ್ ಜೂಬ್ಲಿ ಅವಾರ್ಡ್ ಮುಡಿಗೆರಿಸಿದ ತಲೈವಾ

Pinterest LinkedIn Tumblr

ನವದೆಹಲಿ : ಸೂಪರ್ ಸ್ಟಾರ್, ತಲೈವಾ ರಜನೀಕಾಂತ್ ಅವರಿಗೆ ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವ (ಐಎಫ್‍ಎಫ್‍ಐ)ದ 50ನೇ ವರ್ಷಾಚರಣೆ ಪ್ರಯುಕ್ತ ಸುವರ್ಣ ಮಹೋತ್ಸವದ ವಿಶೇಷ ತಾರೆ ಪ್ರಶಸ್ತಿ ನೀಡಲಾಗುತ್ತಿದೆ. ಫ್ರಾನ್ಸ್ ಜನಪ್ರಿಯ ತಾರೆ ಇಸಬೆಲ್ಲೆ ಹುಪರ್ಟ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ದೆಹಲಿಯಲ್ಲಿಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವ ಪ್ರಕಾಶ್ ಜಾವಡೇಕರ್ ಈ ವಿಷಯ ಪ್ರಕಟಿಸಿದರು. ಭಾರತ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ನಟಿಸಿ ಚಿತ್ರೋದ್ಯಮಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ರಜನೀಕಾಂತ್ ಅವರಿಗೆ ಸ್ಪೆಷಲ್ ಐಕಾನ್ ಆಫ್ ಗೋಲ್ಡನ್ ಜೂಬ್ಲಿ ಅವಾರ್ಡ್ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಕರಾವಳಿ ರಾಜ್ಯ ಗೋವಾದಲ್ಲಿ ಈ ತಿಂಗಳ 20 ರಿಂದ 28ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ ರಜನೀಕಾಂತ್ ಮತ್ತು ಇಸಬೆಲ್ಲೆ ಅವರಿಗೆ ಈ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಜಾವಡೇಕರ್ ಹೇಳಿದರು. ಚಿತ್ರೋತ್ಸವದಲ್ಲಿ ಭಾರತದ ವಿವಿಧ ಭಾಷೆಗಳ 250ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿದೆ. ಅಲ್ಲದೆ, ಚಿತ್ರರಂಗಕ್ಕೆ ಮಹಿಳೆಯರು ನೀಡಿರುವ ಕೊಡುಗೆಯನ್ನು ಪರಿಗಣಿಸಿ 50 ಮಹಿಳಾ ನಿರ್ದೇಶಕಿಯರ 50 ಚಿತ್ರಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ಅಲ್ಲದೆ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ 8 ಸೂಪರ್‍ಹಿಟ್ ಚಿತ್ರಗಳು ಸಹ ಐಎಫ್‍ಎಫ್‍ಐನಲ್ಲಿ ಪ್ರದರ್ಶನ ಕಾಣಲಿವೆ ಎಂದು ಅವರು ತಿಳಿಸಿದರು. ಈ ಚಿತ್ರೋತ್ಸವಕ್ಕೆ ರಷ್ಯಾ ಭಾರತದ ಪಾಲುದಾರ ರಾಷ್ಟ್ರವಾಗಿದೆ.

Comments are closed.