ರಾಷ್ಟ್ರೀಯ

ದೆಹಲಿ ಏರ್‌ಪೋರ್ಟ್‌ನಲ್ಲಿ ಆರ್‍ಡಿಎಕ್ಸ್ ಸ್ಫೋಟಕಗಳಿದ್ದ ಚೀಲ ಪತ್ತೆ : ನಗರಗಳಲ್ಲಿ ತೀವ್ರ ಕಟ್ಟೆಚ್ಚರ.

Pinterest LinkedIn Tumblr

ನವದೆಹಲಿ : ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ವಿದ್ವಂಸಕ ಕೃತ್ಯದ ಆತಂಕವಿರುವ ಸಂದರ್ಭದಲ್ಲೇ ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನಸುಕಿನ ವೇಳೆ ಆರ್‍ಡಿಎಕ್ಸ್ ಸ್ಫೋಟಕಗಳಿದ್ದ ಚೀಲವೊಂದು ಪತ್ತೆಯಾಗಿದೆ. ಅದೃಷ್ಟವಶಾತ್ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಸಿಬ್ಬಂದಿಯ ಸಮಯ ಪ್ರಜ್ಞೆ ಮತ್ತು ದೆಹಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ದೆಹಲಿ ಏರ್‌ಪೋರ್ಟ್‌ನಲ್ಲಿ ಆರ್‍ಡಿಎಕ್ಸ್ ಸ್ಫೋಟಕಗಳಿದ್ದ ಚೀಲ ಪತ್ತೆಯಾದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ವಿಮಾನ ನಿಲ್ದಾಣದ ಟರ್ಮಿನಲ್-3ಯಲ್ಲಿರುವ ಎರಡನೆ ಸಂಖ್ಯೆಯ ಆಗಮನ ಸ್ಥಳದಲ್ಲಿ ಇಂದು 1 ಗಂಟೆ ನಸುಕಿನಲ್ಲಿ ಕಪ್ಪು ಚೀಲವೊಂದು ಪತ್ತೆಯಾಯಿತು.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಿಐಎಸ್‍ಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆ ಮಾರ್ಗವನ್ನು ಬಂದ್ ಮಾಡಿ ಬ್ಯಾಗನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ರವಾನಿಸಿದರು. ನಂತರ ದೆಹಲಿ ಪೊಲೀಸರಿಗೆ ವಿಷಯ ತಿಳಿಸಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಯಿತು. ಚೀಲವನ್ನು ಸೂಕ್ಷ್ಮವಾಗಿ ಪ್ರವೇಶಿಸಿದ ಬಾಂಬ್ ಡಿಫ್ಯೂಸಲ್ ಸ್ಕ್ವಾಡ್‍ನ ಪರಿಣಿತರು ಇದು ಅತ್ಯಂತ ಸುಧಾರಿತ ಸ್ಫೋಟಕಗಳನ್ನೂ ಒಳಗೊಂಡಿರುವ ಆರ್‍ಡಿಎಕ್ಸ್ ಎಂದು ಪ್ರಾಥಮಿಕ ವರದಿ ನೀಡಿದರು.

ಇದರಲ್ಲಿ ಭಾರೀ ವಿಸ್ಫೋಟಕ್ಕೆ ಬಳಸುವ ತಂತಿ ಮತ್ತು ಇತರ ಸ್ಫೋಟಕ ಸಾಧನಗಳಿರುವುದು ಪತ್ತೆಯಾಗಿದೆ. ಇದನ್ನು ನಿಷ್ಕ್ರಿಯಗೊಳಿಸಲಾಗಿದ್ದರೂ ಇದರ ಮೇಲೆ ಇನ್ನೂ 24 ತಾಸುಗಳ ಕಾಲ ನಿಗಾ ವಹಿಸಲು ಅತ್ಯಂತ ಸುರಕ್ಷಿತ ಸ್ಥಳಕ್ಕೆ ಕಪ್ಪು ಚೀಲವನ್ನು ರವಾನಿಸಲಾಗಿದೆ.

ದೆಹಲಿ ಏರ್‌ಪೋರ್ಟ್‌ನಲ್ಲಿ ಸ್ಫೋಟಕಗಳಿದ್ದ ಕಪ್ಪುಚೀಲ ಪತ್ತೆಯಾದ ನಂತರ ಮುಂಜಾನೆ 4 ಗಂಟೆವರೆಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಏರ್‌ಪೋರ್ಟ್‌ನಲ್ಲಿ ಭಾರೀ ಗೊಂದಲದೊಂದಿಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ (ಏರ್‌ಪೋರ್ಟ್‌) ಸಂಜಯ್ ಭಾಟಿಯಾ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆಯಾದ ನಂತರ ಸುತ್ತಮುತ್ತಲ ಸ್ಥಳಗಳು ಮತ್ತು ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಭಾಟಿಯಾ ತಿಳಿಸಿದ್ದಾರೆ. ಸಿಐಎಸ್‍ಎಫ್ ಮತ್ತು ದೆಹಲಿ ಪೊಲೀಸ್ ವಿಭಾಗದ ಅತ್ಯುನ್ನತ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆರ್‍ಡಿಎಕ್ಸ್ ಇರುವ ಚೀಲದ ಮೇಲೆ 24 ತಾಸುಗಳ ನಿಗಾ ವಹಿಸಿದ ನಂತರ ಅದರಲ್ಲಿನ ಸ್ಫೋಟಕ ಪದಾರ್ಥಗಳು ಮತ್ತು ಅದರ ತೀವ್ರತೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಬಾಂಬ್ ನಿಷ್ಕ್ರಿಯದಳದ ಪರಿಣಿತರೊಬ್ಬರು ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಚೀಲ ಪತ್ತೆಯಾದ ನಂತರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಶಂಕಾಸ್ಪದ ವಸ್ತುಗಳು ಮತ್ತು ಶಂಕಿತರ ಚಲನವಲನಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ.

Comments are closed.