ರಾಷ್ಟ್ರೀಯ

ಹರ್ಯಾಣದಲ್ಲಿ ಅತಂತ್ರ ವಿಧಾನಸಭೆ

Pinterest LinkedIn Tumblr


ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯ ಎಲ್ಲಾ 90 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ ಸಹಿತ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಲಭ್ಯವಾಗದಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಇಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ.

ಒಟ್ಟು 40 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ ಅತೀದೊಡ್ಡ ಪಕ್ಷವಾಗಿ ಮೂಡಿಬಂದಿದೆ. 31 ಸ್ಥಾನಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಪಕ್ಷ ಎರಡನೇ ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿದೆ.

ಯುವ ನಾಯಕ ಮತ್ತು ಜಾಟ್ ಸಮುದಾಯದ ಪ್ರಭಾವಿ ನಾಯಕ ದುಷ್ಯಂತ್ ಚೌಟಾಲ ಅವರ ಜನನಾಯಕ ಜನತಾ ಪಕ್ಷ 10 ಸ್ಥಾನಗಳನ್ನು ಗೆಲ್ಲುವ ಮೂಲಕ ಕಿಂಗ್ ಮೇಕರ್ ಸ್ಥಾನದಲ್ಲಿ ಬಂದು ನಿಂತಿದೆ. ಆಶ್ವರ್ಯವೆಂದರೆ 07 ಜನ ಪಕ್ಷೇತರ ಅಭ್ಯರ್ಥಿಗಳೂ ಜಯಗಳಿಸಿದ್ದು ಸದ್ಯದ ಪರಿಸ್ಥಿತಿಯಲ್ಲಿ ಇವರೂ ಸಹ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿದೆ. ಇನ್ನುಳಿದ 02 ಸ್ಥಾನಗಳನ್ನು ಹರ್ಯಾಣ ಲೋಕಹಿತ ಪಕ್ಷ ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳಗಳು ಪಡೆದುಕೊಂಡಿವೆ.

ಹರ್ಯಾಣ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದ್ದು ಸದ್ಯದ ಲೆಕ್ಕಾಚಾರದ ಪ್ರಕಾರ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರಕಾರ ರಚಿಸುವ ಸಾಧ್ಯತೆಗಳು ಇದೆಯಾದರೂ ಜೆಜೆಪಿ ನಿರ್ಧಾರವೇ ನಿರ್ಣಾಯಕವಾಗಲಿದೆ ಎನ್ನಲಾಗುತ್ತಿದೆ.

ಸರಕಾರ ರಚನೆಯ ಸಾಧ್ಯಾಸಾಧ್ಯತೆಗಳು:
01. ಬಿಜೆಪಿ 40 ಸ್ಥಾನಗಳಲ್ಲಿ ಜಯಗಳಿಸಿದ್ದು 07 ಜನರಲ್ಲಿ ಆರು ಜನ ಪಕ್ಷೇತರರು ಬೆಂಬಲ ನೀಡಿದರೂ ಕೇಸರಿ ಪಕ್ಷಕ್ಕೆ ಸರಳ ಬಹುಮತ ಲಭ್ಯವಾಗಲಿದೆ.

02. ಒಂದುವೇಳೆ ದುಷ್ಯಂತ್ ಅವರ ಜೆಜೆಪಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಆಗ ಈ ಪಕ್ಷಗಳ ಒಟ್ಟು ಬಲಾಬಲ 41 ಆಗಲಿದೆ (31+10). ಆಗ ಕಾಂಗ್ರೆಸ್ ಗೆ ಸರಕಾರ ರಚನೆಗೆ ಇನ್ನೂ 05 ಶಾಸಕರ ಅಗತ್ಯ ಬೀಳಲಿದ್ದು ಮತ್ತೆ ಪಕ್ಷೇತರರ ನಿರ್ಣಯವೇ ಅಂತಿಮವಾಗಲಿದೆ. ಒಂದುವೇಳೆ ಈ ಸಂಭಾವ್ಯ ಮೈತ್ರಿಯನ್ನು 05 ಜನ ಪಕ್ಷೇತರರು ಬೆಂಬಲಿಸಿದರೆ ಕಾಂಗ್ರೆಸ್-ಜೆಜೆಪಿ ಸರಕಾರ ರಚನೆಗೆ ಹಕ್ಕು ಮಂಡಿಸಬಹುದಾಗಿರುತ್ತದೆ.

03. ಇನ್ನೊಂದು ಸಾಧ್ಯತೆಯಲ್ಲಿ ದುಷ್ಯಂತ್ ಚೌಟಾಲ ಅವರ ಜೆಜೆಪಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ಆಗ ಈ ಎರಡು ಸಂಭಾವ್ಯ ಮೈತ್ರಿ ಪಕ್ಷಗಳ ಬಲಾಬಲ 50 ಆಗಲಿದೆ. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷೇತರರ ಹಂಗಿಲ್ಲದೇ ಸರಕಾರವನ್ನು ರಚಿಸಬಹುದಾಗಿರುತ್ತದೆ.

Comments are closed.