ರಾಷ್ಟ್ರೀಯ

ಭಾರತದ ಗಡಿಯೊಳಗೆ ನುಸುಳಲು ಪಾಕ್ ಸಜ್ಜು – ಗಡಿಭಾಗದಲ್ಲಿ ಡ್ರೋಣ್ ಪತ್ತೆ.

Pinterest LinkedIn Tumblr

ಫಿರೋಝೇಪುರ್: ಪಂಜಾಬ್ ನ ಫಿರೋಝೇಪುರ್ ಹುಸೈನ್ ವಾಲಾ ಗಡಿ ಭಾಗದಲ್ಲಿ ನಿಯೋಜಿತಗೊಂಡಿರುವ ಗಡಿ ಭದ್ರತಾ ಪಡೆಯ ಯೋಧರು ಸಂಶಯಾಸ್ಪದ ಡ್ರೋಣ್ ಗಳ ಚಲನೆಯನ್ನು ಪತ್ತೆಹಚ್ಚಿದ್ದಾರೆ. ಸೋಮವಾರ ತಡರಾತ್ರಿ ಬಿ.ಎಸ್.ಎಫ್. ಯೋಧರು ಗಸ್ತು ನಿರತರಾಗಿದ್ದ ಸಂದರ್ಭದಲ್ಲಿ ಈ ಶಂಕಾಸ್ಪದ ಚಟುವಟಿಕೆಯನ್ನು ಪತ್ತೆ ಹಚ್ಚಿದ್ದು, ಈ ಸಂದರ್ಭದಲ್ಲಿ ಪಾಕಿಸ್ಥಾನ ಕಡೆಯಿಂದ ಭಾರತದ ಗಡಿಪ್ರದೇಶದತ್ತ ಬರುತ್ತಿದ್ದ ಕನಿಷ್ಠ ಮೂರು ಡ್ರೋಣ್ ಗಳನ್ನು ಭಾರತೀಯ ಯೋಧರು ನಾಶಪಡಿಸಿದ್ದಾರೆ ಎಂಬ ಮಾಹಿತಿಯನ್ನು ಬಿ.ಎಸ್.ಎಫ್. ಮೂಲಗಳು ಖಚಿತಪಡಿಸಿವೆ.

ಮೊತ್ತಮೊದಲ ಡ್ರೋಣ್ ಸೋಮವಾರ ರಾತ್ರಿ 10.30ರ ಸುಮಾರಿಗೆ ಹುಸೈನ್ ವಾಲಾ ಪ್ರದೇಶದಲ್ಲಿ ಪತ್ತೆಯಾಯಿತು. ಇದಕ್ಕೂ ಮೊದಲು ಅಕ್ಟೋಬರ್ 09ನೇ ತಾರೀಖಿನಂದು ಫಿರೋಝೆಪುರ್ ನ ಹುಸೈನ್ ವಾಲಾ ಗಡಿ ಭಾಗದಲ್ಲಿ ಡ್ರೋಣ್ ಗಳ ಚಲನೆಯನ್ನು ಬಿ.ಎಸ್.ಎಫ್. ಯೋಧರು ಗುರುತಿಸಿದ್ದರು. ಇದಾದ ಬಳಿಕ ಈ ಪ್ರದೇಶದಲ್ಲಿ ವ್ಯಾಪಕ ಪತ್ತೆ ಕಾರ್ಯಾಚರಣೆಯನ್ನು ನಡೆಸಲಾಗಿತ್ತು ಮತ್ತು ಪಂಜಾಬ್ ಪೊಲೀಸ್ ಇಲಾಖೆಗೂ ಮಾಹಿತಿಯನ್ನು ರವಾನಿಸಲಾಗಿತ್ತು.

ಭಾರತ ಪಾಕಿಸ್ಥಾನ ಗಡಿ ಭಾಗದಲ್ಲಿ ಪಾಕ್ ಕಡೆಯಿಂದ ಭಾರತದ ಗಡಿಯೊಳಗೆ ನುಸುಳಲು ಸಿದ್ಧರಾಗಿರುವ ಉಗ್ರರು ಸೂಕ್ತ ನುಸುಳು ಮಾರ್ಗವನ್ನು ಪತ್ತೆಹಚ್ಚಲು ಇದೀಗ ಡ್ರೋಣ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಈಗಾಗಲೇ ನೀಡಿದೆ.

ಈ ಡ್ರೋಣ್ ಗಳಲ್ಲಿ ಅಳವಡಿಸಲಾಗಿರುವ ಉನ್ನತ ತಂತ್ರಜ್ಞಾನದ ಕೆಮರಾಗಳ ಸಹಾಯದಿಂದ ಗಡಿಯಾಚೆಗೆ ಅವಿತಿರುವ ಉಗ್ರರು ಸುರಕ್ಷಿತ ಒಳನುಸುಳುವಿಕೆ ಮಾರ್ಗಗಳನ್ನು ಗುರುತಿಸಲು ಈ ಡ್ರೋಣ್ ಗಳನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿಯೂ ಗುಪ್ತಚರ ಅಧಿಕಾರಿಗಳಿಂದ ಲಭಿಸಿದೆ. ಇಷ್ಟು ಮಾತ್ರವಲ್ಲದೇ ಈ ಉಗ್ರರ ಬಳಿ ಹೈಟೆಕ್ ಜಿಪಿಎಸ್ ಮತ್ತು ಇನ್ನಿತರ ತಂತ್ರಜ್ಞಾನ ವ್ಯವಸ್ಥೆಯನ್ನೂ ಹೊಂದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

Comments are closed.