ರಾಷ್ಟ್ರೀಯ

ದುರ್ಗಾ ಪೂಜೆ ಮಾಡಿದ ಸಂಸದೆ ನುಸ್ರತ್ ಜಹಾನ್ ವಿರುದ್ಧ ಇಸ್ಲಾಮ್ ಧರ್ಮಗುರು ಟೀಕೆ

Pinterest LinkedIn Tumblr


ಕೋಲ್ಕತಾ(ಅ. 07): ಖ್ಯಾತ ಬಂಗಾಳಿ ಚಿತ್ರ ನಟಿ ಹಾಗೂ ತೃಣ ಮೂಲ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಅವರು ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ವಿಡಿಯೋ ಬಾರೀ ವೈರಲ್ ಆಗಿದೆ. ನುಸ್ರತ್ ಅವರ ಕಾರ್ಯಕ್ಕೆ ಪ್ರಶಂಸೆಯ ಜೊತೆಗೆ ಕೆಲ ಇಸ್ಲಾಮೀ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ದಾರುಲ್ ಉಲೂಮ್ ದೇವೋಬಂದ್ ಎಂಬ ಸುನ್ನಿ ಪಂಥಕ್ಕೆ ಸೇರಿದ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ ಅವರಂತೂ ನುಸ್ರತ್ ವಿರುದ್ಧ ಕಟುವಾಗಿ ಟೀಕೆ ಮಾಡಿದ್ದಾರೆ.

“ಅಲ್ಲಾಹುವಿಗೆ ಮಾತ್ರ ಪ್ರಾರ್ಥಿಸಬೇಕು ಎಂದು ಇಸ್ಲಾಮ್ ಧರ್ಮ ತನ್ನ ಹಿಂಬಾಲಕರಿಗೆ ಆದೇಶಿಸಿದೆ. ಆದರೂ ಕೂಡ ಆಕೆ ಹಿಂದೂ ದೇವರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅವರು ಮಾಡಿದ ಕೆಲಸ ಹರಾಮ್ ಆಗಿದೆ” ಎಂದು ಮುಫ್ತಿ ಅಸಾದ್ ಖಸ್ಮಿ ಹೇಳುತ್ತಾರೆ. ಹರಾಮ್ ಎಂದರೆ ಧರ್ಮಬಾಹಿರ ಕೆಲಸ ಅಥವಾ ಪಾಪದ ಕೃತ್ಯ ಎನ್ನಲಾಗಿದೆ.

“ಆಕೆ ಅನ್ಯ ಧರ್ಮದಲ್ಲಿ ವಿವಾಹವಾಗಿದ್ಧಾರೆ. ಆಕೆ ತನ್ನ ಹೆಸರು ಮತ್ತು ಧರ್ಮವನ್ನು ಬದಲಿಸಿಕೊಳ್ಳಬೇಕು. ಮುಸ್ಲಿಮ್ ಹೆಸರು ಇಟ್ಟುಕೊಂಡು ಇಸ್ಲಾಮ್ ಮತ್ತು ಮುಸ್ಲಿಮರಿಗೆ ಕೆಟ್ಟ ಹೆಸರು ತರುವುದಕ್ಕೆ ಧರ್ಮದಲ್ಲಿ ಅವಕಾಶವಿಲ್ಲ” ಎಂದು ಈ ಧರ್ಮಗರು ಅಭಿಪ್ರಾಯಪಡುತ್ತಾರೆ.

ಈ ವರ್ಷದ ಆರಂಭದಲ್ಲಿ ನಿಖಿಲ್ ಜೈನ್ ಅವರನ್ನು ವಿವಾಹವಾದ ನುಸ್ರತ್ ಜಹಾನ್ ಅವರು ಆಗಿನಿಂದಲೂ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ನುಸ್ರತ್ ಜಹಾನ್ ಅವರು ಕುಂಕುಮ, ಮಂಗಳಸೂತ್ರ ಧರಿಸಿ ನಿನ್ನೆ ಭಾನುವಾರದಂದು ತಮ್ಮ ಪತಿಯ ಜೊತೆ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕೈಜೋಡಿಸಿ, ಕಣ್ಮುಚ್ಚಿಕೊಂಡ ಭಕ್ತಿ ಪರವಶಳಾಗಿದ್ದ ಆಕೆಯ ಬಾಯಿಂದ ಮಂತ್ರೋಚ್ಛೋರಗಳೂ ಬರುತ್ತಿದ್ದುದು ಅಚ್ಚರಿ ತಂದಿತ್ತು.

ತನ್ನ ಸುತ್ತ ವಿವಾದ ಮುತ್ತಿಕೊಂಡಿರುವುದಕ್ಕೆ ಆಕೆ ತಲೆ ಕೆಡಿಸಿಕೊಂಡಂತಿಲ್ಲ. ಬಂಗಾಳದಲ್ಲಿ ಪ್ರತಿಯೊಬ್ಬರೂ ಕೂಡ ಒಟ್ಟಿಗೆ ಎಲ್ಲಾ ಉತ್ಸವಗಳನ್ನ ಆಚರಿಸುತ್ತಾರೆ. ದುರ್ಗಾ ಪೂಜೆಯಲ್ಲಿ ತೊಡಗಿಸಿಕೊಂಡಿದ್ದು ನನಗೆ ಖುಷಿ ತಂದಿದೆ ಎಂದು ನುಸ್ರತ್ ಜಹಾನ್ ಹೇಳುತ್ತಾರೆ.

ಇನ್ನು, ನುಸ್ರತ್ ಜಹಾನ್ ಅವರು ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿರುವುದಕ್ಕೆ ಎಲ್ಲಾ ಮುಸ್ಲಿಮರು ವಿರೋಧಿಸಿಲ್ಲ. ಆಕೆ ಸಿಂಧೂರ, ಕುಂಕುಮ, ಮಂಗಲಸೂತ್ರ ಕಟ್ಟಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಇಸ್ಲಾಮ್ ಧರ್ಮಾನುಯಾಯಿಗಳು ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಸ್ವತಂತ್ರರಿದ್ದಾರೆ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್​ನ ಅಧ್ಯಕ್ಷ ವಾಸೀಮ್ ರಿಜ್ವಿ ಹೇಳಿದ್ದಾರೆ.

Comments are closed.