ಅಂತರಾಷ್ಟ್ರೀಯ

ನಿಜಾಮರ ಕೋಟಿಗಟ್ಟಲೆ ಆಸ್ತಿ ಭಾರತಕ್ಕೆ ಸೇರಿದ್ದು, ಪಾಕ್‍ಗೆ ಯಾವುದೇ ಹಕ್ಕಿಲ್ಲವೆಂದ ಬ್ರಿಟಿಷ್ ಕೋರ್ಟ್

Pinterest LinkedIn Tumblr


ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಸುಮಾರು 35 ದಶಲಕ್ಷ ಡಾಲರ್(ಅಂದಾಜು 249.04 ಕೋಟಿ ರೂ.) ಮೌಲ್ಯದ ಹೈದರಾಬಾದ್ ನಿಜಾಮನ ಆಸ್ತಿ ಭಾರತಕ್ಕೆ ಸೇರಿದ್ದು, ಇದರಲ್ಲಿ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ಬ್ರಿಟಿಷ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

ಹೈದರಾಬಾದ್ ನಿಜಾಮರ ಸಂಪತ್ತಿನ ಮೇಲೆ ಹಕ್ಕು ಸಾಧಿಸುವ ಕುರಿತ ಕಾನೂನು ಸಮರದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ. 1947ರಲ್ಲಿ ಹೈದರಾಬಾದ್ ನಿಜಾಮ ಸಂಸ್ಥಾನವು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗುವುದಕ್ಕೂ ಮುನ್ನ ಈ ಹಣವನ್ನು ಲಂಡನ್ ಹಾಗೂ ಕರಾಚಿಗೆ ವರ್ಗಾಯಿಸಲಾಗಿತ್ತು. ಆಗಿನಿಂದಲೂ ಈ ಆಸ್ತಿ ಪ್ರಕರಣ ವಿವಾದವಾಗಿಯೇ ಉಳಿದಿತ್ತು.

ದಶಕಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಹೈಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ನಿಜಾಮರ ಆಸ್ತಿಯಲ್ಲಿ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ, ಪಾಲು ಸಹ ಇಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ನಿಜಾಮನ ಸಂಪತ್ತಿನಲ್ಲಿ ಪಾಕಿಸ್ತಾನವು ಹಕ್ಕು ಕೇಳಿತ್ತು. ಆದರೆ ಯುಕೆ ನ್ಯಾಯಾಲಯ ಇದನ್ನು ಒಪ್ಪಿರಲಿಲ್ಲ.

1947ರಲ್ಲಿ ವಿಭಜನೆಯಾದ ನಂತರ ಹೈದರಾಬಾದ್ ನಿಜಾಮರ ಆಸ್ತಿಯನ್ನು ಲಂಡನ್ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗಿತ್ತು. ಇದನ್ನರಿತ ಪಾಕಿಸ್ತಾನ ಹೈದರಾಬಾದ್ ನಿಜಾಮನ ಆಸ್ತಿಯ ಮೇಲೆ ನಮಗೆ ಹಕ್ಕಿದೆ ಎಂದು ಕಾನೂನು ಹೋರಾಟ ನಡೆಸಿತ್ತು. ಪಾಕಿಸ್ತಾನ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಪ್ರಾರಂಭಿಸಿದ ನಂತರ ಇದು ಇಂಗ್ಲೆಂಡ್ ಹೈಕೋರ್ಟಿಗೆ ತಲುಪಿತ್ತು.

ಲಂಡನ್‍ನ ನ್ಯಾಟ್‍ವೆಸ್ಟ್ ಬ್ಯಾಂಕ್ ಪಿಎಲ್‍ಸಿಯಲ್ಲಿ ಠೇವಣಿ ಇಟ್ಟಿರುವ ಸಂಪತ್ತಿನ ಬಗ್ಗೆ ಪಾಕಿಸ್ತಾನ ವಿವಾದ ಸೃಷ್ಟಿಸಿತ್ತು. ಆಗ ನಿಜಾಮ ವಂಶಸ್ತರಾದ ಹೈದರಾಬಾದ್‍ನ 8ನೇ ನಿಜಾಮ ಮುಕರಮ್ ಜಾ ಹಾಗೂ ಆತನ ಕಿರಿಯ ಸಹೋದರ ಮುಫಾಖಾಮ್ ಜಾ ಭಾರತಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ನಂತರ ಪ್ರಕರಣದ ವಿರುದ್ಧ ಹೋರಾಡಲು ಭಾರತಕ್ಕೆ ಬಲ ಸಿಕ್ಕಿತ್ತು.

1948ರಲ್ಲಿ ಅಂದಿನ ಹೈದರಾಬಾದ್ ನಿಜಾಮ ಉಸ್ಮಾನ್ ಅಲಿ ಖಾನ್ ವಶದಿಂದ ಸುಮಾರು 10,07,940 ಪೌಂಡ್ ಹಾಗೂ 9 ಶಿಲ್ಲಿಂಗ್‍ಗಳನ್ನು ಅಂದು ಹೊಸದಾಗಿ ಸ್ಥಾಪಿಸಲಾಗಿದ್ದ ಬ್ರಿಟನ್ ನೇಮಕ ಮಾಡಿದ್ದ ಹೈಕಮಿಷನರ್‍ಗೆ ವರ್ಗಾಯಿಸಲಾಗಿತ್ತು. ಅಂದಿನಿಂದ ಈ ಮೊತ್ತವು ಲಕ್ಷಾಂತರ ಪೌಂಡ್‍ಗಳಾಗಿ ಬೆಳೆದಿದೆ.

ಬ್ಯಾಂಕಿಗೆ ಹಣ ಹೋಗಿದ್ದು ಹೇಗೆ?
ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ನೇತೃತ್ವದ ಭಾರತ ಸರ್ಕಾರವು 1948ರ ಸೆಪ್ಟೆಂಬರ್‍ನಲ್ಲಿ ರಜಾಕರ್ ಗಳಿಂದ ಕಿರುಕುಳಕ್ಕೊಳಗಾದ ಜನರಿಗೆ ಸ್ಪಂದಿಸಲು ‘ಆಪರೇಷನ್ ಪೊಲೊ’ ಆಯೋಜಿಸಿದ್ದರು. ಈ ವೇಳೆ ನಿಜಾಮನ ಹಣಕಾಸು ಮಂತ್ರಿ ನವಾಬ್ ಮೊಯಿನ್ ನವಾಜ್ ಜಂಗ್ ಲಂಡನ್‍ನಲ್ಲಿ ಪಾಕಿಸ್ತಾನದ ಹೈಕಮಿಷನರ್ ಆಗಿದ್ದ ಹಬೀಬ್ ಇಬ್ರಾಹಿಂ ರಹಿಮತ್‍ವುಲ್ಲಾ ಖಾತೆಗೆ ಒಂದು ಬಿಲಿಯನ್ ಪೌಂಡ್ ವರ್ಗಾಯಿಸಿದ್ದ. ಈ ಹಣವನ್ನು ಆಗ ಬ್ಯಾಂಕ್ ಜಪ್ತಿ ಮಾಡಿತ್ತು.

ಈ ಹಣದ ವಾರಸುದಾರಿಕೆ ಕುರಿತು ಭಾರತ, ಪಾಕಿಸ್ತಾನ ಮತ್ತು ನಿಜಾಮ ವಂಶಸ್ಥರ ಮಧ್ಯೆ ಕಾನೂನು ಸಮರ ನಡೆದಿತ್ತು. ಈ ಪ್ರಕರಣದ ವಿಚಾರಣೆ ವೇಳೆ ನಿಜಾಮ ಸಂಸ್ಥಾನ 3.5 ದಶಲಕ್ಷ ಪೌಂಡ್ ಹಣವನ್ನು 1948ರ ಸೆಪ್ಟೆಂಬರ್‍ನಲ್ಲಿ ಪೊಲೀಸ್ ಕಾರ್ಯಾಚರಣೆಗೂ ಮುನ್ನ ಲಂಡನ್ ಹಾಗೂ ಕರಾಚಿಗೆ ವರ್ಗಾಯಿಸಿತ್ತು. ನಿಜಾಮರ ಖಜಾನೆಯಿಂದ 1 ದಶಲಕ್ಷ ಪೌಂಡ್ ಹಣ ರಹಿಮತ್‍ವುಲ್ಲಾ ಬ್ಯಾಂಕ್ ಖಾತೆಗೆ ಹಾಗೂ ಉಳಿದ 2.5 ದಶಲಕ್ಷ ಪೌಂಡ್ ಹಣವನ್ನು ಸೇನಾ ಡೀಲರ್‍ಗಳಿಗೆ ವರ್ಗಾವಣೆಯಾಗಿತ್ತು. ನಿಜಾಮ ಸಂಸ್ಥಾನದ ವಿತ್ತಾಧಿಕಾರಿ ಹಾಗೂ ಲಂಡನ್‍ನಲ್ಲಿ ಏಜೆಂಟ್ ಜನರಲ್ ಆಗಿದ್ದ ನವಾಬ್ ಮೊಯಿನ್ ನವಾಜ್ ಜಂಗ್, ನಿಜಾಮರ ಅನುಮತಿ ಪಡೆಯದೇ ಅಕ್ರಮವಾಗಿ ಈ ಹಣ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಂಡಿದ್ದ.

Comments are closed.