ರಾಷ್ಟ್ರೀಯ

ಕರಾವಳಿಯಲ್ಲೂ ಉಗ್ರರನ್ನು ಎದುರಿಸಲು ಸಿದ್ಧ- ರಾಜನಾಥ್ ಸಿಂಗ್

Pinterest LinkedIn Tumblr


ತಿರುವನಂತಪುರಂ: ಭಾರತದ ಕರಾವಳಿ ಭಾಗದಲ್ಲೂ ಉಗ್ರರ ಚಟುವಟಿಕೆಗಳು ಕಂಡುಬರುತ್ತಿದ್ದು, ದೇಶದ ಕರಾವಳಿ ಹಾಗೂ ಕಡಲ ಸುರಕ್ಷತೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ದೇಶದ ಯಾವುದೇ ಭಾಗದಲ್ಲಿ ಉಗ್ರರ ಚಟುವಟಿಕೆಗಳು ನಡೆದರೂ ಸುಮ್ಮನೆ ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಅಮೃತಾನಂದಮಯಿ ಅವರ 66ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಚ್‍ನಿಂದ ಕೇರಳದವರೆಗೆ ವ್ಯಾಪಿಸಿರುವ ನಮ್ಮ ಕರಾವಳಿ ಭಾಗದಲ್ಲಿ ವಿದೇಶಿ ಭಯೋತ್ಪಾದಕರು ದಾಳಿ ಮಾಡುವ ಪ್ರಯತ್ನಗಳನ್ನು ನಾವು ತಳ್ಳಿ ಹಾಕುವಂತಿಲ್ಲ. ಆದರೂ ರಕ್ಷಣಾ ಸಚಿವರಾಗಿ ನಮ್ಮ ದೇಶದ ಕರಾವಳಿ ಸುರಕ್ಷತೆಯನ್ನು ಸಂಪೂರ್ಣವಾಗಿ ಗಟ್ಟಿಗೊಳಿಸಿದ್ದೇವೆ. ಮುಂದೆ ಇನ್ನೂ ಗಟ್ಟಿಗೊಳಿಸುತ್ತೇವೆ ಈ ಕುರಿತು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ರಾಜನಾಥ್ ಸಿಂಗ್ ಭರವಸೆ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿ ನಂತರ ನಾವು ಬಾಲಾಕೋಟ್ ಏರ್ ಸ್ಟ್ರೈಕ್ ನಡಿಸಿದೆವು. ಹೀಗೆ ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಯಾರಾದರೂ ನಮ್ಮನ್ನು ಕೆಣಕಿದರೆ ಶಾಂತಿಗೆ ವಿಶ್ರಾಂತಿ ನೀಡುತ್ತೇವೆ. ದಾಳಿ ಮಾಡುತ್ತೇವೆ ಎಂದು ಪಾಕ್ ವಿರುದ್ಧ ಹರಿಹಾಯ್ದರು.

ತನ್ನ ಸೈನಿಕರ ತ್ಯಾಗವನ್ನು ನೆನಪಿಸಿಕೊಳ್ಳದ ದೇಶವನ್ನು ಜಗತ್ತಿನಲ್ಲಿ ಎಲ್ಲಿಯೂ ಗೌರವಿಸುವುದಿಲ್ಲ. ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಯ ಕುಟುಂಬಗಳೊಂದಿಗೆ ದೇಶದ ಜನರು ನಿಲ್ಲಬೇಕು ಎಂದು ರಾಜನಾಥ್ ಸಿಂಗ್ ಕರೆ ನೀಡಿದರು.

ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಗುರಿಯಾಗಿಸಿ ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿರುವ ಕುರಿತು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಆಗಿನಿಂದ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಕ್ಷಣಾ ಸಚಿವಾಲಯ ಹಾಗೂ ಗುಪ್ತಚರ ಸಂಸ್ಥೆಗಳು ಪಡೆದ ಮಾಹಿತಿ ಪ್ರಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ್ದಕ್ಕೆ ಪಾಕ್ ಪ್ರತಿಕಾರ ತೀರಿಸಿಕೊಳ್ಳುತ್ತಿದೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಕೂಡ ನಮ್ಮ ವಾಯು ನೆಲೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ ಎಂದು ತಿಳಿಸಿದರು.

Comments are closed.