ರಾಷ್ಟ್ರೀಯ

4 ವಾರದಲ್ಲಿ ಅಯೋಧ್ಯೆ ತೀರ್ಪು ಪವಾಡವೇ ಸರಿ

Pinterest LinkedIn Tumblr


ನವದೆಹಲಿ: ಅಯೋಧ್ಯೆ ವಿವಾದ ಪ್ರಕರಣ ಸಂಬಂಧ ಎರಡು ಕಡೆಯ ವಕೀಲರು ನಿಗದಿತ ಗಡುವಿನೊಳಗೆ ವಾದ ಮುಗಿಸಬೇಕು. ಅದಕ್ಕೂ ಮೀರಿ ಹೆಚ್ಚಾಗಿ ಒಂದು ದಿನವನ್ನು ಕೂಡ ನೀಡುವುದಿಲ್ಲ ಎಂದು ಗುರುವಾರ ಸುಪ್ರೀಂಕೋರ್ಟ್​ ಸ್ಪಷ್ಟವಾಗಿ ಹೇಳಿದೆ.

ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ, ಅಕ್ಟೋಬರ್ 18ರೊಳಗೆ ವಾದ ಪೂರ್ಣಗೊಳಿಸಬೇಕು ಎಂದು ಮತ್ತೊಮ್ಮೆ ಪುನರುಚ್ಚರಿಸಿತು. ಹಿಂದೂ ಮತ್ತು ಮುಸ್ಲಿಂ ಪರ ವಾದ ಮಂಡನೆಗೆ ಕಳೆದ ವಾರ ಗಡುವು ನಿಗದಿ ಮಾಡಲಾಗಿತ್ತು.

ಒಂದು ವೇಳೆ ಅಕ್ಟೋಬರ್ 18ರೊಳಗೆ ವಾದ-ಪ್ರತಿವಾದ ಮುಗಿಯದಿದ್ದರೆ ಆ ಬಳಿಕೆ ಒಂದು ದಿನವನ್ನು ಹೆಚ್ಚಿಗೆ ನೀಡಲಾಗುವುದಿಲ್ಲ ಎಂದು ಪೀಠ ಎರಡು ಕಡೆಯ ವಕೀಲರಿಗೆ ಸ್ಪಷ್ಟವಾಗಿ ಹೇಳಿತು. ಜೊತೆಗೆ ಪೀಠದ ಮುಖ್ಯಸ್ಥರಾಗಿರುವ ಸಿಜೆಐ ರಂಜನ್​ ಗೊಗೋಯ್ ಅವರು ಇದೇ ವರ್ಷದ ನವೆಂಬರ್ 17ರಂದು ನಿವೃತ್ತಿಯಾಗುವುದನ್ನು ಸೂಕ್ಷ್ಮವಾಗಿ ಗಮನಕ್ಕೆ ತಂದರು.

ನೀವು ಅಕ್ಟೋಬರ್​ 17ರೊಳಗೆ ವಾದ-ಪ್ರತಿವಾದ ಮುಗಿಸಿದರೆ ನಮಗೆ ತೀರ್ಪು ಬರೆಯಲು ನಾಲ್ಕು ವಾರಗಳ ಸಮಯ ಸಿಗುತ್ತದೆ. ನಾಲ್ಕು ವಾರದಲ್ಲಿ ತೀರ್ಪು ನೀಡುವುದು ಅಂದರೆ ಅದು ಪವಾಡವೇ ಸರಿ ಎಂದು ಸಿಜೆಐ ಅಭಿಪ್ರಾಯಪಟ್ಟರು.

ಎರಡು ಕಡೆಯ ವಾದಿಗಳು ಅಕ್ಟೋಬರ್ 18 ಗಡುವನ್ನು ತಲೆಯಲ್ಲಿ ಇಟ್ಟುಕೊಂಡು ವಾದ ಮುಗಿಸಬೇಕು ಎಂದು ಪೀಠ ಸೂಚನೆ ನೀಡಿತು.

ವಾರದ ಐದು ದಿನಗಳ ವಿಚಾರಣೆ ಅವಧಿಯನ್ನು ಒಂದು ಗಂಟೆ ಹೆಚ್ಚಿಸಬೇಕು ಎಂದು ಮುಸ್ಲಿಂ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅವಶ್ಯಕತೆ ಇದ್ದರೆ ದಿನದಲ್ಲಿ ಒಂದು ಗಂಟೆ ಹೆಚ್ಚಿಗೆ ವಿಚಾರಣೆ ಅವಧಿ ವಿಸ್ತರಿಸಲಾಗುವುದು ಎಂದು ತಿಳಿಸಿತು. ಹಾಗೆಯೇ ಹಿಂದೂ ಪರ ವಕೀಲರು ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಪ್ರತಿಕ್ರಿಯೆ ಸಲ್ಲಿಕೆ ಪೂರ್ಣಗೊಳಿಸುವ ಭರವಸೆಯನ್ನು ಪೀಠಕ್ಕೆ ನೀಡಿದರು.

ರಾಮ ಜನ್ಮಭೂಮಿ-ಬಾಬ್ರಿ ಜಾಗ ವಿವಾದ ಪ್ರಕರಣದ ವಿಚಾರಣೆ ಪಂಚಸದಸ್ಯ ನ್ಯಾಯಪೀಠದಲ್ಲಿ ಪ್ರತಿದಿನ ನಡೆಯುತ್ತಿದೆ. ಇಂದು ನಡೆದ ವಿಚಾರಣೆ 32ನೇ ದಿನದ ವಿಚಾರಣೆಯಾಗಿದೆ.

Comments are closed.