ರಾಷ್ಟ್ರೀಯ

ನೆರೆ ಪರಿಹಾರ ಕುರಿತ ಚರ್ಚೆ; ಯಡಿಯೂರಪ್ಪ ಭೇಟಿಗೆ ಸಮಯ ನೀಡದ ಮೋದಿ!

Pinterest LinkedIn Tumblr


ನವದೆಹಲಿ (ಸೆಪ್ಟೆಂಬರ್.18); ಉತ್ತರ ಕರ್ನಾಟಕ ಭಾಗ ಕಳೆದ ಐದು ತಿಂಗಳಿನಿಂದ ಸತತವಾಗಿ ಬರ ಹಾಗೂ ನೆರೆಯಿಂದ ತತ್ತರಿಸಿ ಹೋಗಿದೆ. ಪ್ರವಾಹದಿಂದ ಮಾತ್ರ ಕನಿಷ್ಟ 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಸಹ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಈವರೆಗೆ ಒಂದೆ ಒಂದು ರೂಪಾಯಿಯೂ ಪರಿಹಾರ ಹಣ ಬಂದಿಲ್ಲ.

ಹೀಗಾಗಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚಿಸಿ ಪ್ರವಾಹದಿಂದಾಗಿರುವ ನಷ್ಟದ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ರಾಜ್ಯ ಮುಖ್ಯಮಂತ್ರಿ ಕಚೇರಿಯಿಂದ ಪ್ರಧಾನಿ ಅವರ ಭೇಟಿಗೆ ಗುರುವಾರ ಸಮಯ ಕೇಳಲಾಗಿತ್ತು. ಅಲ್ಲದೆ, ಇಂದು ರಾತ್ರಿಯೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ದೆಹಲಿಗೆ ತೆರಳಲು ಸಿದ್ದತೆಯನ್ನೂ ನಡೆಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬಿಎಸ್​ವೈ ಭೇಟಿಯನ್ನು ನಿರಾಕರಿಸಿದ್ದಾರೆ, ಪರಿಣಾಮ ಬಿಎಸ್​ವೈ ದೆಹಲಿ ಪ್ರವಾಸವನ್ನು ರದ್ದು ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಬಿಎಸ್​ವೈ ಭೇಟಿಯನ್ನು ನಿರಾಕರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಹ ನೆರೆ ಪರಿಹಾರದ ಕುರಿತು ಪ್ರಧಾನಿ ಭೇಟಿಗೆ ಅವಕಾಶ ಕೇಳಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಪ್ರಧಾನಿ ಭೇಟಿಗೆ ಅವಕಾಶ ಸಿಗದ ಪರಿಣಾಮ ಬಿಎಸ್​ವೈ ದೆಹಲಿ ಪ್ರವಾಸವನ್ನೇ ರದ್ದು ಮಾಡಿದ್ದರು. ಇದೀಗ ತಿಂಗಳ ಬಳಿಕ ಬಿಎಸ್​ವೈ ಪಾಲಿಗೆ ಮತ್ತೆ ಅಂತಹದ್ದೇ ಪ್ರಹಸನ ಪುನರಾವರ್ತನೆಯಾಗಿದೆ .

ಇದೀಗ ರಾಜ್ಯ ಸಿಎಂ ಕಚೇರಿ ನೆರೆ ಪರಿಹಾರದ ಕುರಿತು ಚರ್ಚಿಸಲು ಶುಕ್ರವಾರವಾದರೂ ಪ್ರಧಾನಿ ಭೇಟಿಗೆ ಅವಕಾಶ ನೀಡುವಂತೆ ಪ್ರಧಾನಿ ಸಚಿವಾಲಯಕ್ಕೆ ಮನವಿ ಮಾಡಿದೆ. ಆದರೆ, ಇದಕ್ಕಾದರೂ ಪ್ರಧಾನಿ ಅನುಮತಿ ನೀಡುತ್ತಾರ? ಅಥವಾ ಸಿಎಂ ಯಡಿಯೂರಪ್ಪ ಮತ್ತೊಮ್ಮೆ ನಿರಾಸೆಯನ್ನು ಅನುಭವಿಸುತ್ತಾರ? ರಾಜ್ಯಕ್ಕೆ ನೆರೆ ಪರಿಹಾರದ ಹಣ ಕೇಂದ್ರದಿಂದ ಹರಿದು ಬರುತ್ತಾ? ಎಂಬುದನ್ನು ಕಾದಿದ್ದು ನೋಡಬೇಕಿದೆ.

Comments are closed.