ರಾಷ್ಟ್ರೀಯ

ಮಹತ್ತರ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದಲ್ಲಿ 6 ಬಿಎಸ್ಪಿ ಶಾಸಕರು ಕಾಂಗ್ರೆಸ್ ತೆಕ್ಕೆಗೆ

Pinterest LinkedIn Tumblr


ಜೈಪುರ: ಮಹತ್ತರ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ಆರು ಮಂದಿ ಬಹುಜನ ಸಮಾಜ್ ಪಕ್ಷದ ಶಾಸಕರು ಆಡಳಿತರೂಢ ಕಾಂಗ್ರೆಸ್ ಪಕ್ಷದ ಜತೆ ವಿಲೀನವಾಗಲು ನಿರ್ಧರಿಸಿದ್ದು, ಇದರಿಂದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ವರಿಷ್ಠೆ ಮಾಯಾವತಿಗೆ ಭಾರೀ ಹಿನ್ನಡೆಯಾದಂತಾಗಿದೆ.

ಬಿಎಸ್ಪಿಯ ಆರು ಮಂದಿ ಶಾಸಕರು ತಾವು ಕಾಂಗ್ರೆಸ್ ಪಕ್ಷದ ಜತೆ ವಿಲೀನವಾಗುವುದಾಗಿ ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರಿಗೆ ಸೋಮವಾರ ತಡರಾತ್ರಿ ಪತ್ರ ನೀಡಿರುವುದಾಗಿ ವರದಿ ವಿವರಿಸಿದೆ. ಇದಕ್ಕೂ ಮುನ್ನ ಆರು ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಶಾಸಕರಾದ ರಾಜೇಂದ್ರ ಗುಡ್, ಜೋಗೇಂದ್ರ ಸಿಂಗ್ ಅವಾನಾ, ವಾಜಿಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪ್ ಚಾಂದ್ ಖೇರಿಯಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ 200 ಶಾಸಕರ ಬಲ ಹೊಂದಿರುವ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 106 ಸದಸ್ಯರನ್ನು ಹೊಂದಿದಂತಾಗಿದೆ.

ಬಿಎಸ್ಪಿಯ ಆರು ಮಂದಿ ಶಾಸಕರು ಕಾಂಗ್ರೆಸ್ ಜತೆ ಸೇರ್ಪಡೆಗೊಂಡಿದ್ದರಿಂದ ನವೆಂಬರ್ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ಬಲ ಹೆಚ್ಚಿಸಿಕೊಂಡಂತಾಗಿದೆ.

Comments are closed.