ರಾಷ್ಟ್ರೀಯ

ಐಎನ್​ಎಕ್ಸ್​ ಮೀಡಿಯಾ ಹಗರಣ; ಕೇಂದ್ರ ಮಾಜಿ ಸಚಿವ ಚಿದಂಬರಂ ಬಂಧನ

Pinterest LinkedIn Tumblr

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಗ್ರೂಪ್​ ಹಗರಣದ ಆರೋಪ ಹೊತ್ತಿರುವ ಮಾಜಿ ವಿತ್ತೀಯ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ದೆಹಲಿಯ ಜೋರ್​ಭಾಗ್​ನಲ್ಲಿರುವ ಅವರ ನಿವಾಸದಲ್ಲಿ ಇಂದು ಬಂಧಿಸಿದ್ದಾರೆ.

ನಿನ್ನೆ ದೆಹಲಿ ಹೈಕೋರ್ಟ್ ಅರ್ಜಿ ವಜಾ ಮಾಡುತ್ತಲೇ ಕಣ್ಮರೆಯಾಗಿದ್ದ ಚಿದಂಬರಂ ಬಂಧನದಿಂದ ರಕ್ಷಣೆ ನೀಡುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಕ್ಷಣವೇ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದಿದ್ದ ಸುಪ್ರೀಂಕೋರ್ಟ್​ ಶುಕ್ರವಾರ ವಿಚಾರಣೆ ಮಾಡುವುದಾಗಿ ಹೇಳಿತ್ತು.

ಕಳೆದ 24 ಗಂಟೆಯಿಂದ ಕಣ್ಮರೆಯಾಗಿದ್ದ ಚಿದಂಬರಂ ಇಂದು ಸಂಜೆ ಎಐಸಿಸಿ ಪ್ರಧಾನ ಕಚೇರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮನೆಗೆ ತೆರಳಿದ್ದರು. ಅವರನ್ನು ಬಂಧಿಸಲೆಂದು ಇ.ಡಿ. ಹಾಗೂ ಸಿಬಿಐ ಅಧಿಕಾರಿಗಳು ಕೂಡ ಅಲ್ಲಿಗೆ ಹೋಗಿದ್ದರು. ಅಲ್ಲದೆ ದೆಹಲಿ ಪೊಲೀಸರೂ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಚಿದಂಬರಂ ನಿವಾಸದ ಎದುರು ಕೂಡ ಒಂದು ಗಂಟೆಗಳ ಕಾಲ ಹೈಡ್ರಾಮಾ ನಡೆದಿತ್ತು.

ಏನಿದು ಹಗರಣ?
2007ರಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ, ನಿಯಮ ಮೀರಿ ಐಎನ್​ಎಕ್ಸ್ ಮೀಡಿಯಾ ಸಮೂಹದಲ್ಲಿ 305 ಕೋಟಿ ರೂಪಾಯಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್​ಐಪಿಬಿ) ಮೂಲಕ ಅನುವು ಮಾಡಿಕೊಟ್ಟಿದ್ದರು. ಐಎನ್​ಎಕ್ಸ್ ಮೀಡಿಯಾ ಪರ ಲಾಬಿ ಮಾಡಿದ ಚಿದಂಬರಂ ಪುತ್ರ ಕಾರ್ತಿಗೆ ಇದಕ್ಕೆ ತಕ್ಕ ಪ್ರತಿಫಲ ಸಂದಾಯವಾಯಿತು ಎಂಬುದು ಪ್ರಕರಣ ತಿರುಳು. ಐಎನ್​ಎಕ್ಸ್ ಮೀಡಿಯಾಕ್ಕೆ ಹಣ ವರ್ಗಾಯಿಸಲಾದ ಕಂಪನಿಗಳು ಚಿದಂಬರಂ ಪುತ್ರ ಕಾರ್ತಿ ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಹೊಂದಿದ ಕಂಪನಿಗಳಾಗಿವೆ ಎಂದು ಸಿಬಿಐ ಮತ್ತು ಇಡಿ ಆರೋಪಿಸಿವೆ. ಆದರೆ ಈ ವಿಷಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಸರ್ಕಾರ ತಮ್ಮನ್ನು ಗುರಿಯಾಗಿಸುತ್ತಿದೆ ಎಂದು ಚಿದಂಬರಂ ಆಪಾದಿಸಿದ್ದಾರೆ. ಐಎನ್​ಎಕ್ಸ್ ಮೀಡಿಯಾದ ಮಾಲಿಕರಾದ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಚಿದಂಬರಂ ಮತ್ತು ಕಾರ್ತಿ ಅವರ ಹೆಸರನ್ನು ನಮೂದಿಸಿದ್ದರು. ಇಂದ್ರಾಣಿಯ ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಸಂಬಂಧ ಪೀಟರ್ ಮತ್ತು ಇಂದ್ರಾಣಿ ಇಬ್ಬರೂ ಈಗ ಜೈಲಿನಲ್ಲಿದ್ದಾರೆ.

Comments are closed.